ಈ ಪುಟವನ್ನು ಪ್ರಕಟಿಸಲಾಗಿದೆ

ಗಂಧಮಾಲ್ಯಗಳು, ಜೊತೆಗೆ ಕಾಲಿನಲ್ಲಿ ರತ್ನಗಳು ಕೆತ್ತಿರುವ ಚಿನ್ನದ ಆಭರಣವೊಂದು, ಹಸ್ತಾಭರಣಗಳು, ಕರ್ಣಾಭರಣಗಳೂ ವಿನಾ ಇನ್ನೇನೂ ಇಲ್ಲ.

ಶಚಿಯೂ ಅಷ್ಟೇ ! ರತ್ನಖಚಿತವಾದ ಬೂಟಾ ಸೀರೆಯುಟ್ಟು ಬೂಟಾ ರವಿಕೆ ತೊಟ್ಟಿದ್ದಾಳೆ. ಹಸ್ತಾಭರಣ, ಕಂಠಾಭರಣ, ಪಾದಾಭರಣಗಳ ಜೊತೆಗೆ ಮೇಖಲೆಯೊಂದನ್ನು ಧರಿಸಿದ್ದಾಳೆ. ತಲೆಯ ಮೇಲೆ ಒಂದು ರತ್ನಕಿರೀಟವಿದೆ. ಇನ್ನು ಏನೂ ಇಲ್ಲ.

ಶಚೀಂದ್ರರು ವಿರಜಾ - ನಹುಷರಿಗೆ ನಮಸ್ಕಾರ ಮಾಡಲು ಬಂದರು. ಅವರನ್ನು ತಡೆದು ನಹುಷನು, “ನೀನು ನಿತ್ಯೇಂದ್ರ. ನಾನು ನೈಮಿತ್ತಿಕೇಂದ್ರ. ನನಗೆ ನೀನು ನಮಸ್ಕಾರ ಮಾಡುವುದೆ ?” ಎಂದನು. ಇಂದ್ರನು “ಆ ಮಾತು ನಿಜ. ಆದರೆ, ಬುದ್ಧಿಯಲ್ಲಿ ಪ್ರಭಾವದಲ್ಲಿ ಸಾಮಥರ್ಯ್‌ದಲ್ಲಿ, ಪ್ರತಿಯೊಂದರಲ್ಲೂ ನೀನು ನನಗಿಂತ ಹೆಚ್ಚು ಅಲ್ಲದೆ, ಹತ್ಯೆಗೆ ಸಿಕ್ಕಿ ಗೋಳಿಡುತ್ತಿದ್ದ ನನ್ನನ್ನು ಉದ್ಧರಿಸಿರುವೆ. ಇಂತಹ ಪರಮೋಪಕಾರಿಗೆ ನಾನೇನು ತಾನೆ ಉಪಚಾರಮಾಡಲಿ ?” ಎಂದು ತಾವು ತಂದಿದ್ದ ವಸ್ತ್ರಾಭರಣ ಗಂಧಮಾಲ್ಯಾದಿಗಳನ್ನು ಪತ್ನೀಸಮೇತನಾದ ಇಂದ್ರನು ಪತ್ನೀದ್ವಿತೀಯನಾದ ನಹುಷನಿಗೆ ಒಪ್ಪಿಸಿದನು.

ವಿರಜಾ - ನಹುಷರು ಬಲಾತ್ಕಾರದಿಂದ ಅದನ್ನೆಲ್ಲ ಸ್ವೀಕರಿಸಿ, ಶಚೀಂದ್ರರನ್ನು ರತ್ನಾಸನದಲ್ಲಿ ಕುಳ್ಳಿರಿಸಿ, ಆರತಿಯನ್ನೆತ್ತಿ ಹಾರಗಳನ್ನು ಹಾಕಿ ಕಾಣಿಕೆಗಳನ್ನು ಒಪ್ಪಿಸಿದರು. ಪರಸ್ಪರ ಸ್ವಾಗತದಿಂದ ಉಭಯ ದಂಪತಿಗಳೂ ಸಂತುಷ್ಟರಾಗಿ ಕುಶಲ ಪ್ರಶ್ನಾದಿಗಳಿಂದ ಒಬ್ಬರನ್ನೊಬ್ಬರು ಗೌರವಿಸಿದರು.

ನಹುಷನು ಹೇಳಿದನು : “ಇಂದ್ರ, ನೀನು ಬಂದುದು ಬಹು ಸಂತೋಷವಾಯಿತು. ಈ ಶಿಬಿಕೋತ್ಸವವನ್ನು ಪೂರೈಸಿಕೊಂಡು ನಾನೂ ವಿರಜಾದೇವಿಯೊಡನೆ ವಾನಪ್ರಸ್ಥಕ್ಕೆ ತೆರಳುವೆನು. ನೀನು ನಿನ್ನ ಇಂದ್ರಾಧಿಪತ್ಯವನ್ನು ನಿರಾತಂಕವಾಗಿ ವಹಿಸಿಕೊಳ್ಳಬಹುದು.”

ಇಂದ್ರನು ಸಂಕೋಚದಿಂದ ಹೇಳಿದನು : “ಅದು ಕೂಡದು ಎಂದು ಹೇಳುವುದಕ್ಕೆ ನಾನು ಬಂದುದು. ಅಷ್ಟೇ ಅಲ್ಲ ನಿನಗೆ ಶಚೀಪತಿತ್ವವು ಬೇಕೆಂದು ಅಪೇಕ್ಷಿಸಿದೆಯಂತೆ. ಶಚಿಯು ತನ್ನ ಶಚೀತ್ವವನ್ನೆಲ್ಲ ನಿನ್ನ ಅಪ್ಪಣೆಯಾದರೆ ವಿರಜಾದೇವಿಗೆ ಒಪ್ಪಿಸುವಳು. ನಾವು ತಮ್ಮ ಸಖರಾಗಿ ತಮ್ಮ ದಾಸರಾಗಿ ಕೊನೆಯವರೆಗೂ ಇದ್ದುಬಿಡುವೆವು.”

ಅರಸನೂ ವಿರಜೆಯೂ ಶಚೀದೇವಿಯ ಮುಖವನ್ನು ನೋಡಿದರು. “ಅರಸ, ಸಲುಗೆಯಿಂದ ನುಡಿಯುವಾಗ ಏಕವಚನವಲ್ಲದೆ ಬಹುವಚನವು