ಈ ಪುಟವನ್ನು ಪ್ರಕಟಿಸಲಾಗಿದೆ

೩೬.ಶಿಬಿಕೋತ್ಸವ

ಶಿಬಿಕೋತ್ಸವದ ದಿನವು ಬಂತು. ಸಪ್ತರ್ಷಿಗಳು ಬಂದರು. ಅವರನ್ನು ಇಬ್ಬರು ಇಂದ್ರರೂ ಸ್ವಾಗತಿಸಿ, ಅಮರಾವತಿಯಲ್ಲೆಲ್ಲ ಮೆರವಣಿಗೆ ಮಾಡಿಸಿಕೊಂಡು ಬಂದು, ಅವರಿಗಾಗಿ ನಿರ್ಮಿತವಾಗಿದ್ದ ಮಂದಿರದಲ್ಲಿ ಇಳಿಸಿದರು.

ಇವೊತ್ತು ಇಂದ್ರನರಮನೆಯಲ್ಲಿ ಅವರಿಗೆ ಅರ್ಚನೆ. ಇಬ್ಬರು ಇಂದ್ರರಲ್ಲಿ ಒಬ್ಬನು ಐರಾವತದ ಮೇಲೆ ಇನ್ನೊಬ್ಬನು ಉಚ್ಛೈಃಶ್ರವದ ಮೇಲೆ ಕುಳಿತು ಹೋಗಿ ಅವರನ್ನು ಅರಮನೆಗೆ ಕರೆತಂದಿದ್ದಾರೆ. ಅವರೆಲ್ಲರಿಗೂ ವಿರಜಾದೇವಿ, ಶಚೀದೇವಿಯರು ದೇವಪತ್ನಿಯರೊಡನೆ ವಿಧಿವಿಹಿತವಾದ ಉಪಚಾರಗಳನ್ನೆಲ್ಲ ಸಮರ್ಪಿಸುತ್ತಿದ್ದಾರೆ. ಸಪ್ತರ್ಷಿಗಳೂ ಪೂಜಾಪರಿಚರ್ಯೆಗಳಿಂದ ಸಂತೃಪ್ತರಾಗಿದ್ದಾರೆ.

ಅಮರಾವತಿಯು ಅಭೂತಪೂರ್ವವಾಗಿ ಶೃಂಗಾರವಾಗಿದೆ; ಅಲ್ಲಿನ ದೇವಜನಕ್ಕೆಲ್ಲ ಮರೆಯಾಗಿದ್ದ ಇಂದ್ರನು ಬಂದುದೊಂದು, ಎಂದೂ ಇಲ್ಲದ ಶಿಬಿಕೋತ್ಸವವು ನಡೆಯುವುದೊಂದು, ಹೀಗೆ ಎರಡು ಸಂತೋಷಗಳು. ಆಹೂತರಾಗಿ ಬಂದಿರುವವರಿಗೆಲ್ಲ ಆ ಸಂತೋಷವನ್ನು ಹಂಚಿಕೊಡಬೇಕೆಂದೋ ಎಂಬಂತೆ, ಅಮರಾವತಿಯವರು ಪ್ರಕಟವಾಗಿ ಆ ಸಂತೋಷವನ್ನು ಅಲಂಕಾರ ವೈಭವದಲ್ಲಿ ತೋರಿಸುತ್ತಿದ್ದಾರೆ. ಉತ್ಸವವು ಬರುವ ಬೀದಿಗಳಲ್ಲಿ ಇರಲಿ, ಅಕ್ಕಪಕ್ಕದ ಬೀದಿಗಳಲ್ಲೂ ಉತ್ಸವದ ವೈಭವವು ಕಣ್ಣಿಗೆ ಕಾಣಿಸುತ್ತಿದೆ. ಎಲ್ಲೆಲ್ಲೂ ಚಿಕ್ಕ ಚಿಕ್ಕ ಪತಾಕೆಗಳು, ತೋರಣಗಳು ಲೆಕ್ಕವಿಲ್ಲದೆ ಮೆರೆಯುತ್ತಿವೆ. ಒಂದೆಡೆ ಪೀತಾಂಬರದ ಪತಾಕೆಗಳ ತೋರಣಗಳಾದರೆ ಇನ್ನೊಂದೆಡೆ ಹಸಿರಿಂದ ಆದವು ; ಮತ್ತೊಂದೆಡೆ ಹೂವಿನಿಂದ ಆದವು ; ಮಗದೊಂದೆಡೆ ರತ್ನಗಳಿಂದ ಆದವು.

ಉತ್ಸವ ವೀಧಿಗಳಲ್ಲಿ ಈ ಕಡೆಯಿಂದ ಆ ಕಡೆಯವರೆಗೂ ನಂದನವನದಿಂದ ತಂದಿರುವ ಸುಂದರ ಪುಷ್ಪಗಳನ್ನು ಹರಡಿದ್ದಾರೆ. ಪ್ರತಿಯೊಂದು ಕಡೆಯಲ್ಲೂ ಸುಳಿಯುವ ಮಂದಮಾರುತನು ಸುಗಂಧಿಯಾಗಿಯೇ ಬರುವಂತೆ ಏರ್ಪಾಟು ಮಾಡಿದ್ದಾರೆ.

ವಿದ್ಯುನ್ಮಾಲಾವಿರಾಜಿತಳಾದ ಶ್ವೇತಮೇಘಗಳು ಆ ಉದ್ದದಿಂದ ಈ ಉದ್ದಕ್ಕೆ ಮೇಲ್ಕಟ್ಟು ಕಟ್ಟಿದಂತೆ ಬಿಸಿಲಿಲ್ಲದ ಬೆಳಕನ್ನು ಚೆಲ್ಲುತ್ತಾ ಮೆರೆಯುತ್ತಿವೆ.