ಈ ಪುಟವನ್ನು ಪ್ರಕಟಿಸಲಾಗಿದೆ

ಗುಪ್ತ ಹವಿರ್ಭಾಗದ ವಿಚಾರವಿರಬೇಕು. ಹೌದು. ದೇವಾಚಾರ್ಯನಾಗಿ ದಾನವರಿಗೆ ಆಹುತಿಕೊಡುವುದು ಸರಿಯಲ್ಲ. ಆದರೆ, ನಾವು ದ್ವಾಮುಷ್ಯಾಯಣರು. ನಾವು ದೇವತೆಗಳ ಪುತ್ರರು ಹೇಗೋ ಹಾಗೆಯೇ ದಾನವರಿಗೂ ಪುತ್ರವರ್ಗ. ನಾವು ಇಬ್ಬರಿಗೂ ಸೇರಿದವರು. ಅದರಿಂದ ಆ ಮಾತು ಎತ್ತುವಂತಿಲ್ಲ. ಇನ್ನು ಉಳಿದುದು ನಮ್ಮ ಸ್ವಂತ ವಿಚಾರ. ನಮ್ಮ ಸ್ವಂತ ವಿಚಾರ ನಮ್ಮಲ್ಲಿ ಆಕ್ಷೇಪಣೀಯವಾಗಿ, ದೇವಾಚಾರ್ಯ ಪದವಿಗೆ ಒಪ್ಪದಂತಹ ಆಚಾರವು ಯಾವುದೂ ಇಲ್ಲ. ಸುರಾಪಾನದ ಮಾತು : ಅದು ತೀರ ನಮ್ಮ ಸ್ವಂತದ ವಿಚಾರ. ಅದು ಇಲ್ಲಿಗೆ ಬಂದ ಮೇಲೆ ಆರಂಭಿಸಿದುದಲ್ಲ ನಮಗೆ ಅದು ಬಹುದಿನದಿಂದ ಬಂದಿರುವ ವಿಷಯ. ನಾವು ಇಲ್ಲಿಗೆ ಬರುವಾಗ ಇದ್ದುದು. ಅದು ಇಂದ್ರನಿಗೂ ತಿಳಿದೇ ಇದೆ. ಅದರಿಂದ ಅದರ ವಿಚಾರವೂ ಇರಲಾರದು. ಹುಂ ಆತನೇ ಇಂದು ಹೇಳುವನಲ್ಲ ! ನಾವೇಕೆ ಬರಿದೆ ಚಿಂತಿಸಿ ತಲೆ ಕೆಡಿಸಿಕೊಳ್ಳಬೇಕು ?” ಎಂದು ನಿಶ್ಚಿಂತನಾಗಿ ವೇದಾಧ್ಯಯನ ಮಾಡುತ್ತ ಕುಳಿತನು.

ಇನ್ನೊಂದು ಗಳಿಗೆಯೊಳಗಾಗಿ ಇಂದ್ರನು ಬಂದನು. ಹಸುರು ಕುದುರೆಗಳು ಕಟ್ಟಿರುವ, ನವರತ್ನ ಖಚಿತವಾದ ರಥದಲ್ಲಿ ಬಂದು, ಮಾತಲಿಯ ಹಸ್ತ ಲಾಘವದಿಂದ ಕೆಳಕ್ಕಿಳಿದು ಆತನ ಹಿಂದೆಯೇ ದೇವಾಚಾರ್ಯನ ಸಮ್ಮುಖಕ್ಕೆ ಬಂದನು. ದೇವಾಚಾರ್ಯನು ‘ವಿಜಯೀಭವ’ ಎಂದು ಆಶೀರ್ವಾದ ಮಾಡುತ್ತಾ ತನಗೆ ಕೈಮುಗಿದ ದೇವರಾಜನನ್ನು ರತ್ನಾಸನಗಳೊಂದರಲ್ಲಿ ಕುಳ್ಳಿರಿಸಿದನು. ದೇವಾಧಿಪತಿಯು ದೊಡ್ಡವರಿಗೆ ಸಹಜವಾದ ಮಂದಹಾಸದಿಂದ ಶೋಭಿಸುತ್ತ “ಆಚಾರ್ಯರಿಗೆ ಸರ್ವಥಾ ಕುಶಲವಷ್ಟೇ” ಎಂದು ವಿಚಾರಿಸಿದನು. ಆಚಾರ್ಯನೂ ನಸುನಗುತ್ತಾ “ಶಚೀಪತಿಯ ಅನುಗ್ರಹವು ತಾನೇತಾನಾಗಿರಲು ನಮಗೆ ಯಾವ ರೂಪದಲ್ಲಿ ತಾನೇ ಕೊರತೆಯು ಕಾಣಿಸಿಕೊಳ್ಳಬಲ್ಲದು? ಎಂದನು.

ಇಂದ್ರನು ಸಮಾಧಾನವನ್ನು ಸೂಚಿಸುವ ನಗೆಯನ್ನು ನಕ್ಕು, “ಆಚಾರ್ಯರಲ್ಲಿ ದೇವಕುಲದ ಪ್ರಾರ್ಥನೆಯೊಂದನ್ನು ಸಲ್ಲಿಸಲು ಬಂದಿದ್ದೇನೆ. ವರವೆಂದು ಅದನ್ನು ಅನುಗ್ರಹಿಸಿ ನಮ್ಮನ್ನು ಕಾಪಾಡಬೇಕು” ಎಂದು ಕೈಮುಗಿದನು.

ಆಚಾರ್ಯನು “ನಮ್ಮನ್ನು ತಮಗೆ ಒಪ್ಪಿಸಿಕೊಂಡಿದ್ದೇನೆ. ಅದರಿಂದ ನಮ್ಮ ಅಸ್ತಿತ್ವಕ್ಕೆ ಲೋಪ ಬರದಂತಹ ಏನನ್ನು ಬೇಕಾದರೂ ಕೇಳಬಹುದು. ಸಂಕೋಚವು ಬೇಕೇ ಇಲ್ಲ” ಎಂದನು.

“ದೇವಾ, ತಾವು ಗುಪ್ತವಾಗಿ ಹವಿರ್ಭಾಗಗಳನ್ನು ಸಲ್ಲಿಸುತ್ತಿರುವುದಾಗಿ ವದಂತಿ ಬಂತು. ದಾನವರು ದೇವತೆಗಳ ಶತ್ರುಗಳು. ತಾವು ದೇವಾಚಾರ್ಯರು.