ಈ ಪುಟವನ್ನು ಪ್ರಕಟಿಸಲಾಗಿದೆ

“ನಾವು ಸೋತರೆ ಏನಾದೀತು ?”

“ಆಗುವುದೇನು ? ನಮ್ಮನ್ನೆಲ್ಲ ಇಲ್ಲಿಂದ ಓಡಿಸುತ್ತಾರೆ. ಆಗ ನಾವು ಮೇರು ಪರ್ವತದ ಗುಹೆಗಳಲ್ಲಿ ಎಲ್ಲೋ ಸೇರಿಕೊಂಡು, ಬ್ರಹ್ಮನನ್ನೋ, ವಿಷ್ಣುವನ್ನೋ, ಮಹಾದೇವನನ್ನೋ ಪ್ರಾರ್ಥಿಸಿಕೊಳ್ಳುತ್ತ ಅಜ್ಞಾತವಾಸ ಮಾಡಬೇಕಾಗುವುದು.”

“ದೇವ, ಯುದ್ಧದಲ್ಲಿ ಸೋಲುವುದು ಮಾತ್ರವಾದರೆ, ತಾವು ಹೇಳಿದಂತಾಗಬಹುದು. ವೃತ್ರನ ಕೈಗೆ ಸಿಕ್ಕಿಬಿದ್ದರೆ ಆ ಬೃಹದಾಕಾರವು ನನ್ನನ್ನು ಹಿಡಿದು ನುಂಗಿಬಿಟ್ಟರೆ ?”

“ದೇವರಾಜ, ನೀನು ಭೀತನಾಗಿ ಯೋಚಿಸುತ್ತಿರುವೆ. ಅದನ್ನು ಬಿಡು. ಅವನು ನುಂಗಿದರೆ ಜಠರವಾಯುವಿಗೆ ನಿನ್ನನ್ನು ಹೊರಕ್ಕೆ ತರುವಂತೆ ಹೇಳು. ಅವನಿಗೆ ಒಂದು ತೇಗು ಬರುವುದು. ನೀನು ಈಚೆಗೆ ಬರುವೆ. ಅಥವಾ ನೀನು ಅವನ ಹೊಟ್ಟೆಯನ್ನು ಬಗೆದು-ಈಚೆಗೆ ಬಾ. ಆದರೆ ದೇವೇಂದ್ರ, ನೀನಿಷ್ಟು ಹೆದರಬೇಕಾಗಿಲ್ಲ, ಅಪಾಯ ಬಂದರೆ ಸಿದ್ಧನಾಗಿರಬೇಕು. ಹಾಗೆಂದು ಉಪಾಯವನ್ನು ಚಿಂತಿಸುವೆನೆಂದು ಅಪಾಯವನ್ನು ಧ್ಯಾನಿಸುತ್ತಿರುವುದು ಸರಿಯಲ್ಲ. ಅಲ್ಲದೆ, ನಾವು ದೇವತೆಗಳು ಲೋಕವನ್ನೆಲ್ಲಾ ಸೃಷ್ಟಿಸಿರುವ ಪ್ರಾಣದಿಂದ ಕಿಡಿಗಳಂತೆ ಹಾರಿ ಬಂದ ತೇಜಃಪಿಂಡಗಳಾಗಿ, ಲೋಕದ ರಕ್ಷಾಭಾರವನ್ನು ವಹಿಸಿರುವವರು ನಾವು. ಇದನ್ನು ಅಧಿಕಾರವೆಂದು, ಭೋಗಸ್ಥಾನವೆಂದು, ಇತರರು ಬಯಸಿ, ಇಲ್ಲಿರುವ ನಮ್ಮನ್ನು ದ್ವೇಷಿಸುತ್ತಿರುವರು. ಇದು ಲೋಕದ ಸ್ವಭಾವ ಅಲ್ಲದೆ, ಅಧಿಕಾರದಲ್ಲಿದ್ದು, ಹತ್ತು ಜನರ ಕಣ್ಣಿಗೆ ಬಿದ್ದವರಿಗಲ್ಲದೆ ಇನ್ನು ಯಾರಿಗೆ ಶತ್ರುಗಳು? ಅದರಿಂದ, ಆ ಯೋಚನೆಯನ್ನು ಬಿಡು.”

“ಹಾಗಾದರೆ ನಾನು ವೃತ್ರನಿಗೆ ಸೋಲಲೇಬೇಕೆ ?”

“ಹೌದು, ಯತ್ನವಿಲ್ಲ. ತ್ವಷ್ಟೃವು ಯಾಗ ಮಾಡುವಾಗಲೇ ಅತೀಂದ್ರನಾದ ಇಂದ್ರಶತ್ರುವು ಹುಟ್ಟಬೇಕೆಂದೇ ಸಂಕಲ್ಪ ಮಾಡಿರುವನಾಗಿ ನೀನು ಸೋಲಲೇ ಬೇಕು. ಆದರೆ ಅದು ಯಾವಾಗ, ಎಷ್ಟು ದಿನ ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ಆದರೆ ನಾನು ನಿನಗೆ ಒಂದು ರಹಸ್ಯವನ್ನು ಹೇಳುವೆನು ಕೇಳು. ಅದನ್ನು ನೀನೂ ಬಲ್ಲೆ. ಆದರೆ, ಭೀತಿಯಿಂದ ಚದುರಿರುವ ಈ ನಿನ್ನ ಸ್ಥಿತಿಯಲ್ಲಿ ನೀನು ಮರೆತಿದ್ದೀಯೆ. ದೇವತೆಗಳು ಧರ್ಮಪರರು. ನಿನ್ನ ಧರ್ಮಕ್ಕೆ ಅನುಗುಣವಾಗಿ ನೀನು ಇದ್ದರೆ, ನಿನ್ನ ಕಾರ್ಯದಿಂದ ನಿನಗೆ ಪುಣ್ಯವು ಬಂದು, ನಿನ್ನ ತೇಜಸ್ಸು ವಿವೃದ್ಧವಾಗುವುದು. ನಾಳೆ ವೃತ್ರನು ನಿನ್ನನ್ನು ಗೆದ್ದು ಇಂದ್ರನಾದನೆಂದುಕೊ.