ಈ ಪುಟವನ್ನು ಪ್ರಕಟಿಸಲಾಗಿದೆ

ಮಾಡಿರುವವರು ತಾವು. ದೇವಗಣ ಸಂರಕ್ಷಣಾರ್ಥವಾಗಿ, ಬ್ರಹ್ಮಾಂಡದ ಪ್ರಯೋಜನಕ್ಕಾಗಿ ವರವನ್ನು ಕೊಡಬೇಕು.”

ಬ್ರಹ್ಮರ್ಷಿಯು ನಕ್ಕು ಕೇಳಿದನು : “ವರವು ಬೇಕು. ಕೊಟ್ಟಿದ್ದೇನೆ. ಈಗ ಬಾಯಿಬಿಟ್ಟು ಹೇಳು.”

ಇಂದ್ರನು ನಡುಗುತ್ತಾ ಹೇಳಿದನು : “ದೇವ, ತಮ್ಮ ಬೆನ್ನು ಮೂಳೆಯು ಬೇಕು.”

“ಈ ದೇಹದಲ್ಲಿ ಇನ್ನೂ ಪ್ರಾಣವಿದ್ದಾಗಲೇ ಬೇಕೋ ? ಅಥವ ಅನಂತರ ತೆಗೆದುಕೊಳ್ಳುವಿರೋ ?”

“ದೇವಾ, ತಾವು ಈ ದೇಹವನ್ನು ಬಿಟ್ಟರೆ ಅಸ್ಥಿಯು ಹತತೇಜವಾಗುವುದು. ಅದು ಆಗ ವಜ್ರವಾಗುವುದಿಲ್ಲ. ನಾವು ತಮ್ಮ ಬೆನ್ನುಮೂಳೆಯಿಂದ ವಜ್ರವನ್ನು ಮಾಡಬೇಕೆಂದಿರುವೆವು. ವಜ್ರವು ಸರ್ವಶಸ್ತ್ರಗಳಲ್ಲೂ ಉತ್ತಮವಾಗುವುದು. ಅದರಿಂದ ಅನುಗ್ರಹ ಮಾಡಿ ತಾವು ಸಜೀವರಾಗಿರುವಾಗಲೇ ಆಸ್ಥಿಯನ್ನು ದಾನ ಮಾಡಬೇಕು.”

ದಧೀಚಿಯು ನಕ್ಕನು. ಎಲ್ಲರೂ ತಾನು ತಾನು ಎಂದುಕೊಳ್ಳುವ ದೇಹದ ಮೇಲೆ ಅಭಿಮಾನವಿಲ್ಲದ ಆತನಿಗೆ ದೇವರಾಜನ ಪ್ರಾರ್ಥನೆಯಲ್ಲಿ ಅಂತಹ ವಿಶೇಷವೇನೂ ಕಾಣಲಿಲ್ಲ. ``ಆತನು ತನ್ನ ಬೆನ್ನುಮೂಳೆಯನ್ನು ಕೇಳುತ್ತಿದ್ದಾನೆ. ಅದನ್ನು ಕೊಟ್ಟುಬಿಟ್ಟರೆ ದೇಹವುಳಿಯುವಂತಿಲ್ಲ ; ಅಥವಾ ದೇಹವುಳಿಯಬೇಕೆಂದರೆ, ಇನ್ನೊಂದು ಬೆನ್ನುಮೂಳೆಯನ್ನು ಬೆಳೆಸಬೇಕು. ಆತನಿಗೆ ಈ ಎರಡನೆಯ ಅಭಿಪ್ರಾಯವು ಹಿಡಯಲಿಲ್ಲ. ಯಾವೊತ್ತಾದರೂ ಎಸೆಯಬೇಕಾದ ದೇಹವಿದು. ಇವೊತ್ತೇ ಹೋದರೆ ಏನು ಮಹಾ ! ಈಗ ಈ ದೇಹವನ್ನು ದೇವಕಾರ್ಯಾರ್ಥವಾಗಿ ಬಿಡುವುದಕ್ಕಿಂತ ಇನ್ನೇನು ಬೇಕು ?” ಎಂದುಕೊಂಡನು. ದೇಹಾಭಿಮಾನಿಯಾದ ಕ್ಷರಪುರುಷನನ್ನು ಕರೆದು, “ಇದೋ, ಈ ದೇವರಾಜನ ಪ್ರಾರ್ಥನೆಯನ್ನು ಸಲ್ಲಿಸು. ಅದುವರೆಗೆ ನಾನು ಇಲ್ಲಿರುವೆನು” ಎಂದನು. ಕ್ಷರಪುರುಷನು “ದೇವ, ನನ್ನದೊಂದು ಪ್ರಾರ್ಥನೆಯುಂಟು. ಸರ್ವದೇವತಾತ್ಮಕವಾದ ಕಾಮಧೇನವು ಬೆನ್ನನ್ನು ನೆಕ್ಕಿ ಮೂಳೆಯನ್ನು ಬಿಡಿಸಲಿ. ಈ ನನ್ನ ಪ್ರಾರ್ಥನೆಯನ್ನು ದೇವರಾಜನು ನಡೆಸಿಕೊಡಲಿ” ಎಂದು ಕೈಮುಗಿದನು. ದಧೀಚಿಯು ಅದಕ್ಕೂ ನಕ್ಕೂ “ಅಂತೂ ಇಂತೂ ಮುಗಿಯಿತೆಂದು ಕಂತೆ ಒಗೆಯಬೇಕು. ಹಾಗೆ ಬಿದ್ದರೆ ಹೆಚ್ಚೇನು ? ಹೀಗೆ ಬಿದ್ದರೆ ಕಡಿಮೆಯೇನು ? ಆಗಲಿ, ನಿನ್ನ ಕೋರಿಕೆಯೂ ನೆರವೇರಲಿ” ಎಂದು ಇಂದ್ರನನ್ನು ಕರೆದು ಕ್ಷರಪುರುಷನ ಇಷ್ಟವನ್ನು ತಿಳುಹಿದನು. ಇಂದ್ರನು