ಈ ಪುಟವನ್ನು ಪರಿಶೀಲಿಸಲಾಗಿದೆ

೨೪೦ ಮೃತ್ಯುಂಜಯ ನೀವು ಸಂಪಾದಿಸ್ತೀರಿ. ಮಹಾ ಅರ್ಚಕರ ಕೃಪಾಕಟಾಕ್ಷಕ್ಕೆ ಪಾತ್ರರಾಗ್ತೀರಿ.” ಇಷ್ಟು ಸಾಕು ಎನಿಸಿ ಇನೇನಿ ನಾಯಕನ ಮುಖವನ್ನು ನೋಡಿದ. ಯಾವ ಭಾವನೆಯನ್ನೂ ಅದು ತೋರ್ಪಡಿಸಲಿಲ್ಲ. ಬಟಾನೆಂದ : “ ಈ ಅರ್ಥವಿವರಣೆ ಕೇಳಿ ಕೃತಾರ್ಥರಾದ್ವಿ.” ಇನೇನಿ ಎದ್ದ . " ಒಳ್ಳೇದು, ಬರ್ತೇನೆ. ಹೇಗೂ ಇಲ್ಲೇ ಇರ್ತೀರಲ್ಲ. ಭೇಟಿಯಾಗ್ತಿ ರೋಣ. ದೈವಭಕ್ತರನ್ನು ಕಂಡರೆ ನನಗೆಷ್ಟೋ ಸಂತೋಷ.” ಎದ್ದು ನಿಂತವನು, ಕೂದಲು ಬೋಳಿಸಿದ್ದ ತಲೆಯನ್ನೊಮ್ಮೆ ಸವರಿ, "ಹ್ಞ . ಒಂದು ವಿಷಯ ನಿಮಗೆ ಹೇಳೋದು ವಾಸಿ. ” ಎಂದು ನುಡಿದು, ಮತ್ತೆ ಕುಳಿತು, ಮಾತು ಮುಂದುವರಿಸಿದ : " ಮೆನ್ನ-ಹುಚ್ಚ ಮೆನ್ನ-ಇಲ್ಲಿ ನದೀತಟದಲ್ಲಿ ನಿಮಗೆ ಸಿಕ್ಕಿದ್ನಂತೆ. ಅವನಿಗೆ ಸಲಿಗೆ ಕೊಡ್ಬೇಡಿ. ದಂಡೆಯ ದ್ವಾರಪಾಲಕರು ನಿಮಗೆ ಹೇಳಿರ್ಬಹುದು. ಅವನು ಒಂದು ರೀತಿಯ ದೈವದ್ರೋಹಿ .ನಮ್ಮ ನುಹಾ ಅರ್ಚಕರು ಕರುಣಾ ಶಾಲಿಯಾದ್ದರಿಂದ ಆತ ಉಳಿದುಕೊಂಡಿದ್ದಾನೆ....” ಅರ್ಚಕನ ಜತೆ ತಾನೂ ಎದ್ದಿದ್ದ ಬಟಾ ನಿಂತಲ್ಲಿಂದಲೇ. ಎಷ್ಟು ಸಮಯದಿಂದ ಹೀಗೆ?” ಎಂದು ಕೇಳಿದ. ತನ್ನ ತಲೆಯ ಬಳಿ ಬೆರಳುಗಳನ್ನುಆಡಿಸಿ. “ ಈ ಮೆನ್ನ ಬಹಳ ವರ್ಷ ವೃತ್ತಿಯಲ್ಲಿದ್ದು ತೀರಿಕೊಂಡು ಒಬ್ಬ ದೇವಿ ಸೇವಕನ ಮಗ ; ಹತ್ತು ವರ್ಷದ ತಬ್ಬಲಿ ಬಾಲಕನನ್ನು ಮಹಾ ಅರ್ಚಕರು ಸ್ವೀಕರಿಸಿದ್ರು. ಸ್ವೀಕರಿಸಿದು ಸ್ವತಃ ತಾವೇ ಶಿಕ್ಷಣ ಕೊಟ್ರು. ಹುಡುಗ ಆರೇಳು ವರ್ಷ ಅವರ ಕೊಠಡೀಲೇ ಮಲಗ್ತಿದ್ದ. ಅದೃಷ್ಟವಂತ. ಮಹಾ ಅರ್ಚಕರ ನಿತ್ಯ ಸಾನ್ನಿಧ್ಯ ಭಾಗ್ಯ ಅವನಿಗಿತ್ತು . ಮುಂದೆ ಮಹಾಮಂದಿರದಲ್ಲಿ ದೇವಸೇವಕರ ಸಂಖ್ಯೆ ಬೆಳೆಯಿತು. ದೇವಸೇವಿಕೆಯರ ತಂಡವು ಸಿದ್ಧವಾಯ್ತು. ಮೆನ್ನನಿಗೆ ಮಹಾಅರ್ಚಕರು ಕಿರಿಯ ದೇವಸೇವಕನ ಕೆಲಸ ಕೊಟ್ಟು ದೂರ ಇಟ್ಟು. ಕ್ರಮೇಣ ಮೆನ್ನನಿಗೆ ಮಹಾ ಅರ್ಚಕರಲ್ಲಿ ನಿಷ್ಠೆ ಕಡಿಮೆಯಾಯ್ತು. ದೇವರಲ್ಲಿ ಭಕ್ತಿ ಕುಗ್ಗಿತು. ಇಪ್ಪತ್ತನೆಯ ವರ್ಷದಲ್ಲಿ ಅವನಿಗೆ ಭಡ್ತಿ ಸಿಗಬೇಕಾಗಿತ್ತು. ಆದರೆ...”

      *                    *                       *                         *