ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೬೧ “ಹೂಂ." “ಉದ್ಯಾನ ನೋಡಿ ನಾವು ಅರಮನೆಯ ಕಡೆಗೇ ಹೊರಟಿದ್ವಿ." “ಆದರೂ ನಾನು ಭಾಗ್ಯಶಾಲಿ !” “ಊಟದ-ಅಲ್ಲ, ಭೋಜನದ-ಹೊತ್ತಾಯ್ತು. ಬೇಗನೆ ಕಾಲು ಹಾಕು".

  • * * *

ಅತಿಥಿಗೃಹದ ಪ್ರಾಕಾರ ದ್ವಾರ ತೆರೆದಿತ್ತು. ಅಧಿಕಾರ ದಂಡವನ್ನು ಕೈಯಲ್ಲಿ ಹಿಡಿದಿದ್ದ ದಳಪತಿ ಅಲ್ಲಿ ಜಮೆಯಾಗತೊಡಗಿದ್ದ ತನ್ನ ಯೋಧರಿಗೆ ಛೀಮಾರಿ ಹಾಕುತ್ತ ನಿಂತಿದ್ದ, ಶೋಧೆಗಾಗಿ ತಮ ತಮಗೆ ನಿಗದಿಯಾಗಿದ್ದ ಸ್ಥಳಗಳಲ್ಲಿ ಸುತ್ತಾಡಿ ಹತಾಶರಾಗಿ ಸೈನಿಕರು ಮರಳಿ ಬರತೊಡಗಿದ್ದರು. (ಇವರು ಕೇಳುತ್ತ ಹೋದುದರಿಂದ ಊರೆಲ್ಲ ಸುದ್ದಿ : 'ನೀರಾನೆ ಪ್ರಾಂತದ ನಾಯಕ ಅರಮನೆಯ ಅತಿಥಿಗೃಹದಿಂದ ನಾಪತ್ತೆಯಾಗಿದ್ದಾರಂತೆ.' ಹಲವರು ಕೇಳಿದ್ದರು : 'ಅತಿಥಿಗೃಹದಿಂದಲೋ ? ಕಾರಾಗೃಹದಿಂದಲೊ ??)

ದ್ವಾರ ಸಮಿಪಿಸಿದಂತೆ ಮೆನೆಸ್ಟಾನ ಪರಿವಾರದೊಡನೆ ಇದ್ದ ಯೋಧ ಮುಂದಕ್ಕೆ ಓಡಿ, “ಪೆರೋನ ಆಯುರಾರೋಗ್ಯ ವರ್ಧಿಸಲಿ,"ಎಂದು ಕೂಗಿ, ದಳಪತಿಗೆ ವಂದಿಸಿ, ಹಲ್ಲುಗಿಂಜಿ, ಬರುತ್ತಿದ್ದವರೆಡೆಗೆ ಬೊಟ್ಟು ಮಾಡಿ, “ಬಹಳ ಕಷ್ಟ ಪಟ್ಟು ಹುಡುಕ್ದೆ. ನಗರೋದ್ಯಾನದಾಲ್ಲಿ ಸಿಕ್ಕಿದ್ರು,” ಎಂದ.

ದಳಪತಿ ತನ್ನ ಹಣೆಯ ಮೇಲೆ ಮೂಡಿ ಸಾಲುಗಟ್ಟಿದ್ದ ಬೆವರು ಹನಿ ಗಳನ್ನು ಬೆರಳಿನಿಂದ ಬಾಚಿ ನೆಲಕ್ಕೆ ಸುರಿದು, ನಿಟ್ಟುಸಿರು ಬಿಟ್ಟು, “ಹೋಗು. ಕಾವಲು ದಳದ ಲಿಪಿಕಾರರಿಗೆ ವರದಿ ಒಪ್ಪಿಸು. ಸಂಭಾವನೆ ಸಂದಾಯ ವಾಗ್ಬೇಕೂಂತ ಗುರುತು ಮಾಡ್ಕೋಳ್ತಾರೆ” ಎಂದ. ಆ ಯೋಧ ಒಳಕ್ಕೆ ಓಡಿದ. ದಳಪತಿ ಹತ್ತಿರ ಬಂದು ಮೆನೆಸ್ಟಾಗೆ ನಮಿಸಿ, “ದಯಮಾಡಿಸಿ. ನನ್ನ ಕೆಲಸವಾಯ್ತು. ಅಮಾತ್ಯರಿಗೆ ತಿಳಿಸ್ಬೇಕು. ನನಗೆ ಅಪ್ಪಣೆ ಕೊಡಿ,” ಎಂದು ಹೇಳಿ, ನಿರ್ಗಮಿಸಿದ..