ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮ್ರುತ್ಯುಂಜಯ ೩೯೭

   ಸೆಡ್ ಉತ್ಸವದ ಸುದ್ದಿ ರಾಜಧಾನಿಯಲ್ಲಿ ಹಬ್ಬಿತ್ತು ."
   "ಹಬ್ಬಿಸಿದೋರು ಯಾರು?"
   "ಇದಕ್ಕೆಲ್ಲ ಡಂಗುರ ಅನಗತ್ಯ. ಮಹಾ ಅರ್ಚಕರಿಲ್ಲದೆ ಸೆಡ್ ಉತ್ಸವ ಮುಂದಕ್ಕೆ ಬೀಳ್ತಿದೆ ಅಂತ ಜನ ಗುಸುಗುಸು ಮಾತಾಡಿದ್ದಾರೆ. ಹೀಗಾದರೆ   ದೇವ ಮಂದಿರದಲ್ಲಿ, ಮಹಾ ಅರ್ಚಕರಲ್ಲಿ, ಜನರ ನಿಷ್ಟೆ ಉಳಿದೀತೆ?"
   "ಧರ್ಮಗುರುವನ್ನು, ಗುರುಮನೆಯನ್ನು ಮಹಾಪ್ರಭು ಅಸಡ್ಡೆಯಿಂದ ಕಂಡರೆ ಪೆರೋನ ಬಗ್ಗೆ ಜನ ಏನೆಂದಾರು ? ಅವರ ರಾಜಭಕ್ತಿ ಮಾಯವಾಗದೆ ಇದ್ದೀತೆ ?"
   "ಪೆರೋ ರಾನ ಅವತಾರವಲ್ಲ ಅನ್ನೋಹಾಗೆ ನೀವು ವರ್ತಿಸಿದರೆ ಈ ದೇಶದ ಗತಿ ಏನಾದೀತು? ನಂಬಿಕೆ ಕಳೆದುಕೊಂಡ ಸಮಾಜ ಬಹಳ ಕಾಲ ಇರೋದು ಸಾಧ್ಯವೆ?"
   "ದೈವದ್ರೋಹ ಪೆರೋ ಖೂಫುನ ಅನಂತರ ಆದದ್ದೇನು? ಬೇರೆ ಪೆರೋ ಬರಲಿಲ್ಲವಾ?"
   "ಯಾವ ಪೆರೋನೂ ಶಾಶ್ವತವಲ್ಲ; ಹಾಗೆಯೇ ಯಾವ ಧರ್ಮಗುರುವೂ ಶಾಶ್ವತವಲ್ಲ_ಬಲ್ಲಿರಾ ?"
   "ಧರ್ಮಗುರು ಇದ್ದರೇನೇ ರಾ ಪ್ರತಿನಿಧಿ ಪೆರೋಗೆ ಕಿರೀಟ ಧಾರಣೆ!"
   "ರಾ ಪ್ರತಿನಿಧಿಯ ಒಪ್ಪಿಗೆಯಿಂದಲೇ ಮಹಾ ಅರ್ಚಕನ ಆಯ್ಕೆ, ನೇಮಕ!" 
   ಮಹಾರಾಣಿ ರಾಗವಾಗಿ, ದೃಢವಾಗಿ ಅಂದಳು :
   "ಐಗುಪ್ತದ ದೈವಸಂಭೂತ ರಾಜವಂಶದ ಸೌಭಾಗ್ಯ. ಮಹತ್ವದ  ಧಾರ್ಮಿಕ ಜಿಜ್ಞಾಸೆ ಮುಗಿಸಿ ಧರ್ಮಗುರು ರಾಜಧಾನಿಗೆ ವಾಪಸಾಗಿದ್ದೀರಿ.  ಸೆಡ್ ಉತ್ಸವ ನಡೀತದೆ. ಪ್ರಜೆಗಳು ಆನಂದದಿಂದ ಕುಣಿದಾಡ್ತಾರೆ."
   ಹೇಪಾಟ್ ಆಕೆಯ ಕಡೆ ತಿರುಗಿ, ಕೊಂಚ ಸ್ವರ ಬದಲಿಸಿ,ಅಂದ:
   "ಸೆಡ್ ಉತ್ಸವಕ್ಕೆ ಧಾರ್ಮಿಕ ಒಪ್ಪಿಗೆ ನೀಡೋದಕ್ಕೆ ಮುಂಚೆ ಇತ್ಯರ್ಥ ವಾಗಬೇಕಾದ ವಿಷಯಗಳಿವೆ."
   (ಇದು ಬಲಿಗೆ ಸಂಬಂಧಿಸಿದ್ದು_ಎಂದುಕೊಂಡಳು ನೆಫರ್ ಟೀಮ್.)
   "ಆಗಲಿ, ಆಗಲಿ."