ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೪೦೧

ಹೋಗ್ತೇನೆ. ನೀರಾನೆ ಪ್ರಾಂತದ ಪ್ರಜೆಗಳು ಮತ್ತೆ ದೇವರ ದಾರಿ ತುಳಿಯೋ ಹಾಗೆ ಮಾಡ್ತೇನೆ."
“ಇದು ಎಲ್ಲರಿಗೂ ಹರ್ಷ ನೀಡುವ ಯೋಜನೆ !” ಎಂದಳು ಅರಸಿ.
“ಅದು ಧರ್ಮದ ಜೈತ್ರ ಯಾತ್ರೆ. ಆಗ ದುಷ್ಟರು ದಂಡನೆಗೆ ಗುರಿಯಗ್ತಾರೆ; ಶಿಷ್ಟರು ದೈವಕೃಪೆಗೆ ಪಾತ್ರರಾಗ್ತಾರೆ. ಈ ದಿಗ್ವಿಜಯಕ್ಕೆ ದಂಡಿನ ಬೆಂಬಲ ಬೇಕು. ಸೈನ್ಯ ಗಡಿಯಿಂದ ರಾಜಧಾನಿಗೆ ಇನ್ನೂರು ಯೋಧರನ್ನು ಕರೆಸಿ."
ಅಮಾತ್ಯ ಆತಂಕಕ್ಕೊಳಗಾದ. ಏನಾದರೂ ಒಳಸಂಚು ? ಹೇಪಾಟ್‍ನ ಮನಸ್ಸಿನಲ್ಲಿರುವುದೇನು ? ಧರ್ಮ ಯಾತ್ರೆಯೋ ? ದಂಡಯಾತ್ರೆಯೋ ? ಹೆಖ್ವೆಟ್ ತಿಳಿಸಿದ್ದ ಆ ಸುದ್ದಿ ? ಸೈನ್ಯಗಡಿಯ ದಂಡನಾಯಕ ಅಮೆನೆ. ಮೋಪೆಟ್ ಜತೆ ಮಹಾ ಅರ್ಚಕ ಬೆಳೆಸಿರಬಹುದಾದ ಸ್ನೇಹ ?
ಪೆರೋಗೆ ಕಸಿವಿಸಿ. ಆತ ಅಮಾತ್ಯನ ಮುಖ ನೋಡಿದ.
ಹೆಖ್ವೆಟ್ ಯೋಚಿಸಿದ: ಭೂಮಾಲಿಕರೊಡನೆ ಹೇಪಾಟ್ ನಡೆಸಿದ್ದ ಸಮಾಲೋಚನೆ, ದಂಡನ್ನು ಒಲಿಸಿಕೊಳ್ಳಲು ಮಾಡಿರುವ ಪ್ರಯತ್ನ ಇದನ್ನೆಲ್ಲ ಬಯಲಿಗೆಳೆಯಲೆ ? ಅಮಾತ್ಯನ ಮನಸ್ಸಿನಲ್ಲಿ ಏನಿದೆಯೋ ?
ಮಹಾರಾಣಿ ಕಕ್ಕಾವಿಕ್ಕಿಯಾದಳು. ಸದ್ಯದ ಮಟ್ಟಿಗೆ ಸಮಸ್ಯೆ ಶಾಂತವಾಗಿ ಬಗೆ ಹರೀತಿದೆ ಎನ್ನುವಾಗಲೇ ಪುನಃ ಬಿಕ್ಕಟ್ಟು ತಲೆದೋರುತ್ತಿದೆಯಲ್ಲ? (ಒಳಮನಸ್ಸಿನಲ್ಲಿ- ಪ್ರಾಯಶಃ ಇನ್ನೂ ಒಂದೆರಡು ವರ್ಷ... ಮಹಾ ಅರ್ಚಕನ ಬೆಂಬಲ ನಾನು ಪಡೆಯಲೇ ಬೇಕು.. ಆಮೇಲೆ ಸಮಯ ಸಾಧಿಸಿ ರಾಜಕುಮಾರನಿಗೆ...)
ರಾಜಕೀಯ ಮುತ್ಸದ್ದಿ ಆಮೆರಬ್ ಒಳಗಿನ ಅಳುಕನ್ನು ಹತ್ತಿಕ್ಕಿ, ಧ್ವನಿಯಲ್ಲಿ ದೃಢತೆ ತುಂಬಿ ನಿಧಾನವಾಗಿ ಅಂದ:
"ಸೆಡ್ ಉತ್ಸವಕ್ಕೆ ಹೇಗಿದ್ದರೂ ದಂಡಿನ ಒಂದು ಭಾಗವನ್ನು ಕರೀಬೇಕು. ದಂಡನಾಯಕ ಅಮೆನೆಮೆಪೆಟ್‍ನನ್ನೂ ಬರಹೇಳ್ತೇನೆ. (ತಿಳಿದುಕೋ, ಹೇಪಾಟ್, ನಿನ್ನ ಗೂಢ ಯೋಚನೆ ನಾನು ಬಲ್ಲೆ.”) ನೀರಾನೆ ಪಾಂತದಲ್ಲಿ ಶಾಂತಿ ಸ್ಥಾಪಿಸೋದಕ್ಕೆ ಯೋಧರನ್ನು ಬಳಸೋದರಲ್ಲಿ ತಪ್ಪಿಲ್ಲ.”
"ಸದ್ಯಃ !" ಎಂದು ಮನಸ್ಸಿನೊಳಗೇ ಉದ್ಗರಿಸಿದಳು ಮಹಾರಾಣಿ.
೨೬