ಈ ಪುಟವನ್ನು ಪರಿಶೀಲಿಸಲಾಗಿದೆ

ಬಟಾ ಹುಸಿ ಮುನಿಸು ತೋರಿದ. ಜನ ಬಿದ್ದು ಬಿದ್ದು ನಕ್ಕರು. ಅವರ ಜತೆ ಬಟಾನೂ ಸೇರಿಕೊಂಡ.

   ಆ ನಗೆ ನಿಲ್ಲುತ್ತಿದ್ದಂತೆ ಅವನೆಂದ:
   "ಕೇಳ್ರಪೋ. ಈಗಾಗಲೇ ನಿಮಗೆ ತಿಳಿದಿರೋ ಹಾಗೆ, ಮೆನೆಪ್‍ಟಾ ಅಣ್ಣ ಚೆನ್ನಾಗಿ ಇದ್ದಾರೆ. ಅವರು ರಾಜಧಾನಿ ತಲಪ್ದಾಗ, ಇಲ್ಲಿ ಪ್ರಾಂತಪಾಲನಾಗಿದ್ನಲ್ಲ ಗೇಬು_ಅವನು ಬಂದು ಕೈಹಿಡಿದು ಕುಣಿದ. ಪಲ್ಲಕೀಲಿ ಅರಮನೆಗೆ ಕರಕೊಂಡ್ಹೋದ. (ಕೇಳುತ್ತಿದ್ದವರಿಗೆ ಅಚ್ಚರಿ, ವಿಸ್ಮಯ.) ಟೆಹುಟಿ ಊರಲ್ಲಿರ್ಲಿಲ್ಲ. ನಮ್ಮ ನಾಯಕನ ರಾಜವಂಶದ ಕುಡಿಯೋ ಅನ್ನೋ ಹಾಗೆ ನೋಡ್ಕೊಂಡ್ರಪ್ಪ. ಅರಮನೆಯ ಅತಿಥಿಗೃಹದಲ್ಲಿ ವಾಸ. ಅಲ್ಲಿ ಊಟಕ್ಕೆ ಭೋಜನ ಅನ್ತಾರೆ. ಭೂರಿ ಭೋಜನ. ತಿನ್ನೋದು ಕುಡಿಯೋದು. (ಒಂದು ಸ್ವರ : ಮಜಾ ಮಾಡಿದಿಯಾ ಬಟಾ?”) ಎಲ್ಬಂತು? ಯಾವ ಘಳಿಗೇಲಿ ಏನಾಗ್ತದೋ ಅಂತ.                                                                                                    ನಾನೆ ಹೇಳ್ಬಿಟ್ಟೆ_ದಿವಸಕ್ಕೆ ಒಂದೇ ಬಟ್ಟಲು ಸಾಕು ಅಂತ. ಅಮಾತ್ಯರನ್ನು ನಾಯಕರನ್ನು ಕಂಡ್ರು. ಪೆರೋನ ಭೇಟಿಯೂ ಆಯ್ತು. ಹೋದ ವಾರ ಒಂದು ಭಾರೀ ಔತಣವೂ ಜರುಗ್ತು. ಭೋಜನಕ್ಕಿಂತಲೂ ದೊಡ್ದು ಔತಣ. ಹೊರಟು ಬರೋಣ ಅಂದರೆ ಸೆಡ್ ಉತ್ಸವ ಒಂದು ಆಗ್ಬೇಕಲ್ಲ. ಆ ಉತ್ಸವ ನಡೀಬೇಕಾದ್ರೆ ಮಹಾ ಅರ್ಚಕರು ಮಂತ್ರ ಹೇಳ್ಬೇಕು. ಅವರೇ ಇಲ್ಲ. ಅವರ್ನ ಕರಕೊಂಡು ಬರೋಕೆ ಹೆಖ್ವೆಟ್ ಅಂತ ಒಬ್ಬ ಅನ್‍ನಗರಿಗೆ ಹೋದ. ನಾನು ಈ ಕಡೆ ಬಂದೆ. ಊರಿಗೆ ಹೋಗಿ ಐದಾರು ದಿನ ಇದ್ಬಿಟ್ಟು ಬಾ ಅಂತ ಅಣ್ಣನೇ ಹೇಳಿದ್ದು. ಮೆನೆಪ್‍ಟಾ ಅಣ್ಣ ಇದನ್ನೂ ಅಂದ : ನೀರಾನೆ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗ್ಬೇಕು; ರಾಜಧಾನಿ ಇದಕ್ಕೆ ಆಸ್ಪದವಿತ್ತರೆ ಎಲ್ರಿಗೂ ಹಿತ; ಅದಕ್ಕಾಗಿ ಇಲ್ಲಿದ್ದು ನಾನು ಪ್ರಯತ್ನಿಸ್ತೇನೆ; ಊರಲ್ಲಿ ನಮ್ಮ ಜನಕ್ಕೆ ಅದನ್ನು ವಿವರಿಸಿ ಹೇಳು_ಅಂತ. (ಜನರಿಗೆ ಸಮಾಧಾನ, ಅಸಮಾಧಾನ ಎರಡೂ.) ಕುಯಿಲಿಗೆ ತಾನು ಇಲ್ಲಿರ್ಬೇಕು ಅನ್ತಾನೆ ಮೆನೆಪ್‍ಟಾ ಅಣ್ಣ. ಒಂದಷ್ಟು ಜನರ ಜತೆ ಹೋಗಿ ಅಣ್ಣನನ್ನು ಕರಕೊಂಡ್ಬರ್ತೇನೆ. ಸೆಡ್ ಉತ್ಸವ ಮುಗಿದ್ಮೇಲೆ ಒಂದು ಕ್ಷಣವೂ ಅಲ್ಲಿ ನಿಲ್ಲೋದಿಲ್ಲ. (ಒಬ್ಬ : "ಏನೂ ಅಪಾಯ ಇಲ್ಲವಾ?") ಔಟ ಬೆಕ್ ಇದ್ದಾರೆ. ರಕ್ಷಣೆಗೆ ಅಮನ್‍ ಮೂರ್ತಿ ಕೊಟ್ಬಂದಿದ್ದೇನೆ

'''''