ಈ ಪುಟವನ್ನು ಪರಿಶೀಲಿಸಲಾಗಿದೆ

ಮ್ರತ್ಯುಂಜಯ ೫೪೧

ನ್ಯಾಯಮೂರ್ತಿಯ ಧ್ವನಿ :
   "ಘೋರ  ಆರೋಪಗಳಿಗೆ ಗುರಿಯಾಗಿರುವ ಅಪರಾಧಿ ಮೆನೆಪ್‍ಟಾ!
 ನೀನು ಹೇಳುವಂಥದು ಏನಾದರೂ ಇದೆಯೊ ? ಇದ್ದರೆ, ನ್ಯಾಯವನ್ನು ಆಧರಿಸಿರುವ ಈ ಆಸ್ಥಾನ ಅವಕಾಶ    ನೀಡ್ತದೆ."
    ಮುಗುಳುನಗೆ ಸೂಸಿ ಮೆನೆಪ್‍ಟಾ ಅಂದ :

" ಇದೆ ಸ್ವಾಮಿ, ಹೇಳಬೇಕಾದ್ದು ಬಹಳ ಇದೆ.” " ರಾ ಅಸ್ತಮಿಸುವ ಹೊತ್ತಿಗೆ ನ್ಯಾಯಸ್ಥಾನ ತನ್ನ ಕೆಲಸ ಮುಗಿಸ್ಬೇಕು ಅನ್ನೋದು ಗಮನದಲ್ಲಿರಲಿ, ಮುಖ್ಯಾಂಶಗಳನ್ನಷ್ಟೇ ಹೇಳು."

ಮೆನೆಪ್‍ಟಾ ಅಮಾತ್ಯನ ಹಾಗೂ ಮಹಾ ಅರ್ಚಕನ ಶೀತಲ ದೃಷ್ಟಿಗಳನ್ನು ಇದಿರಿಸಿದ. ಪರದೆಯೊಳಗಿದ್ದವರನ್ನೂ ನೋಡಿದ. ಉಚ್ಚ ಕಂಠದಲ್ಲಿ, ಸುಸ್ಪಷ್ಟವಾಗಿ ಅವನೆಂದ :
  "ಕೈದಿಗೆ ಮಾತನಾಡುವ ಸ್ವಾತಂತ್ರ್ಯ ನೀಡಲಿಲ್ಲ ಅನ್ನೋ ಅಪವಾದಕ್ಕೆ ಗುರಿಯಾಗ್ತೀರಲ್ಲ ಸ್ವಾಮಿ. ಇದು ನ್ಯಾಯವನ್ನು ಆಧರಿಸಿರುವ ಅಸ್ಥನ !”
ಟೆಹುಟಿಗೆ ತೃಪ್ತಿ. ಹೀಗೆ ಮಾತನಾಡಿದವನನ್ನು ತಾನು ದಂಡಿಸಿದ್ದು ತಪ್ಪು ಎಂದು ಯಾರು ಹೇಳುತ್ತಾರೆ ಈಗ?

(ಪೆರೋ ಚಾಮರ ಬೀಸುತ್ತಿದ್ದ ದಾಸಿಯರಿಗೆ 'ಸಾಕು' ಎಂದು ಸನ್ನೆ ಮಾಡಿದ. ಅವನ ಕಿವಿ ಚುರುಕಾಯಿತು.)

 ಸಿಟ್ಟನ್ನು ಅದುಮಿ ಹಿಡಿದು ಅಮೆರಬಾ ಅಂದ :
'ಇದು ನೀರಾನೆ ಪ್ರಾಂತದ ರೈತರ ಸಭೆಯಲ್ಲ. ಹುಷಾರಾಗಿ ಮಾತನಾಡು.”
"ನಯ ನಾಜೂಕು ನನಗೆ ತಿಳೀದು. ಉತ್ತನೆ ಬಿತ್ತನೆ ಗೊತ್ತು. ಮಹಾಪೂರದ ಸಮಯದಲ್ಲಿ ಕಲ್ಲು ಸೀಳಿದ್ದೇನೆ, ಕಟ್ಟಿದ್ದೇನೆ; ಮಂದಿರದ ಗೋಡೆ ಕಟ್ಟಿದ್ದೇನೆ. ಎರಡರ್ಥದ ನವುರು ಮಾತು ಕಲೀಲಿಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳೋದೇ ಅಭ್ಯಾಸ.  ಅಮಾತ್ಯವರ್ಯರೆ, ನಿಮ್ಮನ್ನು ಒಂದು ಮಾತು ಕೇಳಲೆ ?" 

" ಏನದು ?"