ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೆಮಾರಿಜನ, ಜೀವನ

ಉದಾಹರಣೆಗಾಗಿ, ಲಂಬಾಣಿಗಳು ಮೊದಲಿಗೆ ಉಪ್ಪು ಮುಂತಾದ್ದನ್ನು ಎತ್ತುಗಳ ಮೇಲೆ ಸಾಗಿಸಿ ಮಾರಾಟ ಮಾಡಲು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಿದ್ದರು. ಈಗಲಾದರೂ ಅವರು ಬೇರೆ ಜನರೊಂದಿಗೆ ಸೇರದೆ, ಪ್ರತ್ಯೇಕ ತಾಂಡಗಳನ್ನು ನಿರ್ಮಿಸಿಕೊಂಡು ವ್ಯವಸಾಯ ಮಾಡುತ್ತಾರೆ. ಲಂಬಾಣಿ ಹೆಂಗಸರು ಗುಡ್ಡಗಾಡಿನಲ್ಲಿ ಸೌದೆ, ಹಣ್ಣುಹಂಪಲನ್ನು ಕೂಡಿಟ್ಟು, ಹಳ್ಳಿಗಳಲ್ಲಿ ಮಾರಿ, ಹಣ, ಧಾನ್ಯ ಸಂಪಾದಿಸುತ್ತಾರೆ. ಡೊಂಬರು ಅನೇಕ ತರದ ತಮಾಷೆ ಆಟಗಳನ್ನು ಜನರಿಗೆ ತೋರಿಸುತ್ತ ಊರಿಂದೂರಿಗೆ ಗುಂಪುಗಳಲ್ಲಿ ಅಲೆಯುತ್ತ ಅನ್ನ ಬಟ್ಟೆ ಸಂಪಾದಿಸುತ್ತಾರೆ. ಹಾವಾಡಿಗರೂ ಹಾಗೆಯೇ. ಕಿಳ್ಳೇಕ್ಯಾತರೂ (ಶಿಳ್ಳೆಕ್ಯಾತ) ಬೊಂಬೆ ಆಟ ಆಡಿಸುತ್ತಾರೆ; ಅಲ್ಲದೆ ರಾಮಾಯಣ, ಮಹಾಭಾರತದಿಂದ ಆರಿಸಿದ ಕಥಾವಸ್ತುಗಳನ್ನು ಬಯಲಾಟ ರೂಪದಲ್ಲಿ ಆಡಿ, ಹಳ್ಳಿಗರಿಗೆ ಮನರಂಜನೆ ಒದಗಿಸುತ್ತಾರೆ. ಇವರ ಹೆಂಗಸರು ಹಚ್ಚೆ (ಹಸುರು) ಹಾಕುತ್ತಾರೆ, ಹಂದಿ ಸಾಕುತ್ತಾರೆ ಮತ್ತು ಕೊರವಂಜಿಗಳಾಗಿ ಭವಿಷ್ಯ ಹೇಳುತ್ತಾರೆ.

ಮಣ್ಣು ಒಡ್ಡರು ಮಣ್ಣಿನ ಮನೆಗೆಲಸ, ಬಾವಿ ತೋಡುವ ಕೆಲಸ, ರಸ್ತೆ ಕೆಲಸಕ್ಕಾಗಿ ಊರಿಂದೂರಿಗೆ ಹೋಗುತ್ತಾರೆ. ಕೊರಚ, ಕೊರಮ ಇವರು ಈಚಲು ಗರಿಯ ಪೊರಕೆ, ಚಾಪೆ, ಬುಟ್ಟಿಗಳನ್ನು ಹೆಣೆದು ಊರೂರಿಗೆ ತಿರುಗಿ ಮಾರಾಟ ಮಾಡುತ್ತಾರೆ. ಚಾಪೆ ಗುಡಿಸಲುಗಳನ್ನು ಊರ ಹೊರಗೆ ನಿರ್ಮಿಸಿ, ಬೇಕಾದಾಗ ಅವುಗಳನ್ನು ಕಿತ್ತು, ಎತ್ತು ಅಥವಾ ಕತ್ತೆಗಳ ಮೇಲೆ ಹೇರಿಕೊಂಡು ಬೇರೆ ಕಡೆ ಸಾಗಿಸುತ್ತಾರೆ.

ಹಂದಿಜೋಗಿಗಳು ಹಂದಿ ಮಂದೆಯೊಡನೆ ಊರೂರಿಗೆ ಅಲೆಯುತ್ತಾರೆ. ಕೆಲವೊಮ್ಮೆ ಭಿಕ್ಷೆ ಮಾಡುತ್ತಾರೆ. ಅವರು ನಾರು ಬೇರುಗಳಿಂದ ಕಷಾಯ ಮತ್ತು ಔಷಧಿ ಮಾಡುತ್ತಾರೆ. ಬುಡುಬುಡಿಕೆ ಜನಾಂಗದ ಗಂಡಸರು ಕೆಲವು ಹಕ್ಕಿಗಳ ಶಕುನ ಹಿಡಿದು, ಬೇರೆಯವರಿಗೆ ಶಕುನ ಹೇಳಿ ಧನಧಾನ್ಯ, ಬಟ್ಟೆಬರೆಗಳನ್ನು ಸಂಪಾದಿಸುತ್ತಾರೆ. ಇದಕ್ಕಾಗಿ ಅವರು ಯಾವಾಗಲೂ ಊರೂರು ಸುತ್ತುತ್ತಾರೆ.

ಇವರಲ್ಲದೆ ಹೆಗ್ಗಡದೇವನಕೋಟೆ, ನೀಲಗಿರಿ, ವೈನಾಡು ಮತ್ತು ಕೇರಳದ ಕೆಲವೆಡೆಗಳಲ್ಲಿ ಕಾಡು ಕುರುಬರು, ಕುರುಂಬರು ಮತ್ತು ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿರುವ ಹಕ್ಕಿಪಿಕ್ಕಿ ಜನಾಂಗದವರು ಅಲೆಮಾರಿಜೀವನ ನಡೆಸುವರು. ಹಕ್ಕಿಪಿಕ್ಕಿ ಯವರಿಗೆ ಹಕ್ಕಿಗಳನ್ನು ಬೇಟೆಯಾಡುವುದೇ ಮುಖ್ಯ ಕಸಬು.

ಹೆಗ್ಗಡದೇವನಕೋಟೆ ಕಡೆ ಇತ್ತೀಚೆಗೆ ಸ್ಥಿರ ವಸತಿಗಳಲ್ಲಿರುವವರೆಂದರೆ ಕಾಡು ಕುರುಬರ ಬುಡಕಟ್ಟಿನವರು. ಇವರೂ ಹಿಂದೆ ಅಲೆಮಾರಿಗಳಾಗಿದ್ದರು. ಕಾಡುಕುರುಬರಲ್ಲಿ ಬೆಟ್ಟಕುರುಬರು, ಜೇನುಕುರುಬರೆಂಬ ಪಂಗಡಗಳುಂಟು. ಬೆಟ್ಟಕುರುಬರಲ್ಲಿ ಆನೆ, ಬೇವು ಮತ್ತು ಕೊಳ್ಳಿ ಎಂಬ ಶಾಖೆಗಳಿವೆ. ಈ ಗುಂಪುಗಳ ಮಧ್ಯೆ ಊಟೋಪಚಾರ ನಡೆದರೂ ಹೆಣ್ಣು ಕೊಟ್ಟು ತರುವುದಿಲ್ಲ.

ಕಾಡಿನ ಮಧ್ಯದಲ್ಲಿ ನೀರಿರುವ ಕಡೆ ಗಿಡಮರಗಳನ್ನು ಕಡಿದು ಹಾಕಿ, ವಸತಿಗಾಗಿ ಹುಲ್ಲು ಎಲೆ ಮನೆಗಳನ್ನು ಈ ಜನ ಕಟ್ಟುತ್ತಾರೆ. ಇವರ ಮನೆಯಲ್ಲಿನ ಮುಖ್ಯ ಪದಾರ್ಥಗಳೆಂದರೆ ಹುಲ್ಲು ಚಾಪೆ, ಮಡಕೆ-ಕುಡಿಕೆ, ಬಿದಿರು ಕೊಳವೆ ಮತ್ತು ಒಂದೆರಡು ಹಿತ್ತಾಳೆ ಪಾತ್ರೆಗಳು.

ಒಂದು ಸಂಸಾರದಲ್ಲಿ ಗಂಡ ಹೆಂಡತಿ ಮತ್ತು ಮಕ್ಕಳು ಇರುತ್ತಾರೆ. ಹೆಂಗಸರು ಮಕ್ಕಳ ಯೋಗಕ್ಷೇಮ ನೋಡಿಕೊಂಡು ಮನೆ ಕೆಲಸ ಮಾಡಿಕೊಂಡು, ಜೊತೆಗೆ ತಿನ್ನಲು ಯೋಗ್ಯವಾದ ಗೆಡ್ಡೆಗೆಣಸು ತಂದು ಗಂಡಸರು ತಂದ ಆಹಾರದಲ್ಲಿ ಕಡಿಮೆ ಬಿದ್ದುದನ್ನು ಈ ವಿಧದಲ್ಲಿ ತುಂಬುತ್ತಾರೆ. ಕಾಡುಕುರುಬರಿಗೆ ಮಾಟ, ಮಂತ್ರ, ಮಾಯಾಜಾಲಗಳಲ್ಲಿ ನಂಬಿಕೆಯಿದೆ. ಇವರೂ ಹಿಂದೂಗಳ ಹಾಗೆ ಮಡಿ ಮೈಲಿಗೆ ಆಚರಿಸುತ್ತಾರೆ. ಮೈನೆರೆದ ಹುಡುಗಿಯರು, ಮುಟ್ಟಾದ ಹೆಂಗಸರು ಕೆಲವು ದಿನ ಪ್ರತ್ಯೇಕವಾಗಿರುತ್ತಾರೆ.

ಕಾಡು ಕುರುಬರು ಯಾವಾಗಲೂ ಚಟುವಟಿಕೆಯಿಂದಿರುತ್ತಾರೆ. ಹಾಗಿಲ್ಲದಿದ್ದರೆ ಅವರ ಜೀವನ ಸಾಗದು. ಇತ್ತೀಚೆಗೆ ಸರ್ಕಾರದ ಅರಣ್ಯಇಲಾಖೆಯ ಪರವಾಗಿ, ಕಾಡಿನಲ್ಲಿ ಮರ ಕಡಿಯುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ. ಹೀಗೆ ಕೂಲಿನಾಲಿ ಮಾಡಿ, ಸಂಪಾದಿಸಿ ಹೊಟ್ಟೆ ತುಂಬಿಕೊಳ್ಳುತ್ತಾರಲ್ಲದೆ ಸಾಧಾರಣವಾಗಿ ಭೂಮಿ ಸಾಗುವಳಿ ಮಾಡಲು ಮುಂದೆ ಬಂದಿಲ್ಲ. ಕೆಲವೊಮ್ಮೆ ಇವರು ವಾಸಿಸುವ ಗುಡಿಸಲಿನ ಸುತ್ತಮುತ್ತಲ ನೆಲ ಅಗೆದು, ರಾಗಿ ಮುಂತಾದವುಗಳನ್ನು ಅಲ್ಪ ಪ್ರಮಾಣದಲ್ಲಿ ಬೆಳೆದುಕೊಳ್ಳುತ್ತಾರೆ. ಜೇನು, ಮರದ ಅಂಟು, ಕಾಡಿನಲ್ಲಿ ಸಿಕ್ಕುವ ಮತ್ತಿತರ ಪದಾರ್ಥಗಳನ್ನು ಶೇಖರಿಸಿ, ಹಳ್ಳಿಗರಿಗೆ ಮಾರಿ ಆಹಾರ ಧಾನ್ಯ, ಬಟ್ಟೆಬರೆ ಮುಂತಾದುವುಗಳನ್ನು ಕೊಂಡುಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಕಾಡು ಪ್ರಾಣಿಗಳ ಜಾಡು ಹಿಡಿದು ಪತ್ತೆಹಚ್ಚಿ ಬೇಟೆಯಾಡುವುದರಲ್ಲೂ ಇವರು ನಿಪುಣರು. ಇವರ ಬೇಟೆಯ ಕ್ರಮಗಳು, ಬೇಟೆಯಲ್ಲಿ ಇವರಿಗಿರುವ ಜಾಣ್ಮೆ ಎಂಥವರನ್ನಾದರೂ ಬೆರಗುಗೊಳಿಸುತ್ತದೆ. ಇವರು ಕಾಡೆಮ್ಮೆಯ ಮಾಂಸ ಒಂದನ್ನು ಬಿಟ್ಟರೆ ಉಳಿದ ಎಲ್ಲ ಪ್ರಾಣಿಗಳ ಮಾಂಸವನ್ನೂ ತಿನ್ನುತ್ತಾರೆ. ಬಿದಿರ ಕಳಲೆ, ಗೆಡ್ಡೆಗೆಣಸುಗಳನ್ನು ಅನೇಕ ಸಲ ಜೇನುತುಪ್ಪದೊಡನೆ ಬೆರೆಸಿಕೊಂಡು ತಿನ್ನುತ್ತಾರೆ. ಕಾಡಿನಲ್ಲಿರುವ ಜೇನಿನಿಂದ ಯಥೇಚ್ಛವಾಗಿ ತುಪ್ಪ, ಮೇಣ ಮುಂತಾದುವನ್ನು ಶೇಖರಿಸುತ್ತಾರೆ.


ಪಶುಪಾಲನೆ ಎಲ್ಲ ಕಡೆಯೂ ಒಂದೇ ರೀತಿಯಾಗಿರದೆ, ಆಯಾ ಪ್ರದೇಶದ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೊಂಡಿರುತ್ತದೆ. ಪಶುಪಾಲಕರು ಉತ್ತರ ಶೀತವಲಯದ ತಂಡ್ರ ಪ್ರದೇಶ, ಎತ್ತರ ಪ್ರಸ್ಥಭೂಮಿಯ ಹುಲ್ಲುಗಾವಲು ಪ್ರದೇಶ, ಮರುಭೂಮಿಗಳು, ಉಷ್ಣವಲಯದ ಸವನ್ನ ಹುಲ್ಲುಗಾವಲು ಪ್ರದೇಶಗಳಲ್ಲಿ ಅಲೆಮಾರಿಗಳಾಗಿ ವಾಸಿಸುತ್ತಾರೆ. ಉಷ್ಣ ಅಥವಾ ಸಮಶೀತೋಷ್ಣವಲಯದ ಕಾಡುಗಳಲ್ಲಿ ಹುಳುಹುಪ್ಪಟೆಗಳ ಹಾವಳಿಯಿಂದಲೂ ಹುಲ್ಲಿನ ಅಭಾವದಿಂದಲೂ ಪಶುಪಾಲನೆ ಕಷ್ಟವಾಗುತ್ತದೆ. ಏಷ್ಯ, ಆಫ್ರಿಕ ಖಂಡಗಳಲ್ಲಿ ಹಲವು ಬಗೆಯ ಪಶುಪಾಲನಾ ವಿಧಾನಗಳು ಕಂಡುಬರುತ್ತವೆ.

ಉತ್ತರ ಅರೇಬಿಯದ ರುವಾಲ ಬಿದೂಯಿನ್ ಜನಾಂಗದವರು ಒಂಟೆ, ಕುರಿ, ಮೇಕೆ ಮತ್ತು ಕುದುರೆಗಳನ್ನು ಸಾಕುತ್ತಾರೆ. ಈ ಪ್ರಾಣಿಗಳಿಗೆ ಹುಲ್ಲು ನೀರು ಯಥೇಚ್ಛವಾಗಿ ಸಿಕ್ಕುವ ನಿರ್ದಿಷ್ಟ ಪ್ರದೇಶಗಳನ್ನು ಹುಡುಕಿ ನಡೆಯುತ್ತಾರೆ. ಒಳಬೆಂಗಾಡು ಹುಲ್ಲುಗಾವಲಿನಲ್ಲಿ ವರ್ಷದಲ್ಲಿ 8-10 ತಿಂಗಳು ವಾಸಮಾಡಿ, ಬೇಸಗೆಯ ಬೇಗೆಯನ್ನು ತಪ್ಪಿಸಿಕೊಳ್ಳಲು ತಮ್ಮ ಪ್ರಾಣಿಗಳಿಗೆ ಹುಲ್ಲು ನೀರನ್ನು ಒದಗಿಸಲೂ ತಮ್ಮ ಜೀವನಕ್ಕೆ ಆವಶ್ಯಕವಾದ ಸಾಮಗ್ರಿಗಳನ್ನು ಕೊಳ್ಳಲೂ ಹಳ್ಳಿಗಳ ಕಡೆಗೆ ಧಾವಿಸುತ್ತಾರೆ.

ಇವರಿಗೆ ಒಂಟೆಯೇ ಬಹು ಮುಖ್ಯ ಪ್ರಾಣಿ. ಒಂಟೆಯ ಹಾಲೇ ವರ್ಷದಲ್ಲಿ ಅನೇಕ ತಿಂಗಳು ಅತಿ ಮುಖ್ಯವಾದ ಆಹಾರ. ತಂಬಾಲು ಮತ್ತು ಹುಳಿ ಹಾಲನ್ನು (ಮೊಸರು) ಕುಡಿಯುತ್ತಾರೆ. ಒಂಟೆಹಾಲಿನಲ್ಲಿ ಬೆಣ್ಣೆ ಮುಂತಾದ ಯಾವ ಪದಾರ್ಥವನ್ನೂ ಮಾಡಲಾಗುವುದಿಲ್ಲ. ಚರ್ಮ ಮತ್ತು ಕೂದಲುಗಳಿಂದ ಚೀಲ, ಹಗ್ಗ ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನು ತಯಾರಿಸುತ್ತಾರೆ. ಒಂಟೆಗಳನ್ನು ಸವಾರಿ ಮಾಡಲೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಿಡಾರ ಬದಲಾಯಿಸಿದಾಗ ತಮ್ಮ ಸರಕುಗಳನ್ನು ಸಾಗಿಸಲೂ ಉಪಯೋಗಿಸುತ್ತಾರೆ.

ಇವರು ಮಹಮದೀಯರು. ಇವರು ಪಿತೃ ವಂಶಾವಳಿಯನ್ನು ಅನುಸರಿಸುತ್ತಾರೆ. ಸಹೋದರ ಮಕ್ಕಳ (ಪ್ಯಾರಲಲ್ ಕಸಿನ್ಸ್) ಮದುವೆಗೆ ಬಹಳ ಪ್ರಾಶಸ್ತ್ಯ ಕೊಡುತ್ತಾರೆ. ಸ್ತ್ರೀಯರು ಪಿತ್ರಾರ್ಜಿತ ಮತ್ತು ಸ್ವಯಾರ್ಜಿತವಾಗಿ ಒಂಟೆಯ ಮಾಲಿಕತ್ವವನ್ನು ಹೊಂದಿರಬಹುದು. ಈ ಆಸ್ತಿ ಆಕೆಯ ಅನಂತರ ಗಂಡ ಮತ್ತು ಮಕ್ಕಳಿಗೆ ಸೇರುತ್ತದೆ. ಅನೇಕ ಮನೆತನಗಳು ಸೇರಿ ಒಂದು ಬುಡಕಟ್ಟಾಗುತ್ತದೆ. ಪ್ರತಿಯೊಂದು ಬುಡಕಟ್ಟಿಗೂ ಒಬ್ಬ ಮುಖ್ಯಸ್ಥನಿರುತ್ತಾನೆ.

ಏಷ್ಯದ ವಾಯವ್ಯದಲ್ಲಿರುವ ಕಜಾಕ್ ಜನಾಂಗದವರು ಕುದುರೆ, ಕುರಿ, ಮೇಕೆ, ದನ ಮತ್ತು ಒಂಟೆಗಳನ್ನು ಸಾಕುತ್ತಾರೆ. ಕುದುರೆ, ಅದರಲ್ಲೂ ಹೆಣ್ಣು ಕುದುರೆ ಇವರಿಗೆ ಅತಿ ಮುಖ್ಯವಾದ ಪ್ರಾಣಿ. ಕುದುರೆ ಹಾಲಿನಿಂದ ಕುಮಿಸ್ ಎಂಬ ಮಾದಕ ಪಾನೀಯವನ್ನು ತಯಾರಿಸುತ್ತಾರೆ. ಇವರು ಒಳ್ಳೆಯ ಕುದುರೆ ಸವಾರರು. ಆದರೆ ಹೆಣ್ಣು ಕುದುರೆ ಮೇಲೆ ಸವಾರಿ ಮಾಡುವುದಿಲ್ಲ. ಕೆಲವು ಕುದುರೆಗಳನ್ನು ಪವಿತ್ರವಾದವುಗಳೆಂದು ಯಾವ ಕೆಲಸಕ್ಕೂ ಉಪಯೋಗಿಸುವುದಿಲ್ಲ. ಕುದುರೆಯ ಮಾಂಸಕ್ಕೆ ಬಹಳ ಬೆಲೆ ಕೊಡುತ್ತಾರೆ. ಕುದುರೆಯ ಚರ್ಮದಿಂದ ಜೀನನ್ನೂ ಕೂದಲಿನಿಂದ ಹಗ್ಗವನ್ನೂ ತಯಾರಿಸುತ್ತಾರೆ. ವರ್ಷದಲ್ಲಿ ಸುಮಾರು ಆರು ಸಲ ವಸತಿ ಬದಲಾಯಿಸುತ್ತಾರೆ. ಇವರೂ ಇಸ್ಲಾಂ ಮತಾವಲಂಬಿಗಳು. ಸ್ತ್ರೀಯರು ಮುಖಪರದೆಯನ್ನು ಧರಿಸುವುದಿಲ್ಲ.

ಖಿರ್ಘೀಜ್ ಜನಾಂಗದವರು ಕಜಾಕರನ್ನೇ ಹೋಲುತ್ತಾರೆ. ಕುದುರೆ ಮತ್ತು ಚಮರೀ ಮೃಗಗಳನ್ನು ಸಾಕುತ್ತಾರೆ. ಆಹಾರ ಮತ್ತು ಹುಲ್ಲನ್ನು ಹುಡುಕುತ್ತ ಸ್ಥಳ ಬದಲಾಯಿಸುತ್ತಿರುತ್ತಾರೆ. ಅವರಲ್ಲಿ ಬಡವ ಬಲ್ಲಿದರೆಂಬ ವರ್ಗಗಳಿಲ್ಲ. ಗುಂಪಿಗೊಬ್ಬ ಮುಖ್ಯಸ್ಥನಿರುತ್ತಾನೆ.

ಮಂಗೋಲಿಯಾದ ವಾಯವ್ಯ ಪ್ರಸ್ಥಭೂಮಿಯಲ್ಲಿ ಕಾಲ್ಮಕ್ ಎಂಬ ತುರ್ಕಿ ಮಾತನಾಡುವ ಮಂಗೋಲಿಯನ್ ಬುಡಕಟ್ಟಿಗೆ ಸೇರಿದ ಜನರಿದ್ದಾರೆ. ಇವರು ಕುರಿ, ಮೇಕೆ, ದನ ಮತ್ತು ಕುದುರೆಗಳನ್ನು ಸಾಕುತ್ತಾರೆ. ಇವರಿಗೆ ಈ ಪ್ರಾಣಿಗಳ ಹಾಲು, ಮಾಂಸ, ಚರ್ಮ ಮತ್ತು ಉಣ್ಣೆ ಎಲ್ಲವೂ ಜೀವನಾಧಾರ ವಸ್ತುಗಳು. ಕಜಾಕರ ಹಾಗಲ್ಲದಿದ್ದರೂ ಇವರೂ ಪ್ರಾಣಿಗಳ ಹಿಂಡಿನೊಡನೆ ಮೇವನ್ನು ಹುಡುಕಿಕೊಂಡು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಾರೆ. ಹೆಂಗಸರು ಮನೆಯ ಕೆಲಸಗಳನ್ನೂ ಗಂಡಸರೂ ಮಂದೆ ಕಾಯುವ ಕೆಲಸವನ್ನೂ ಮಾಡುತ್ತಾರೆ. ಏಷ್ಯದಲ್ಲೇ ಅತಿ ಚುರುಕಾದ ಮತ್ತು ಬಾಳಿಕೆಯುಳ್ಳ ಕುದುರೆಗಳನ್ನು ಸಾಕುತ್ತಾರೆ. ಕುದುರೆಯೇ ಇವರ ಸರ್ವಸ್ವ.

ಏಷ್ಯದ ಉತ್ತರ ಭಾಗದಲ್ಲಿ ಕುದುರೆ ಮತ್ತು ದನಗಳು ಜೀವಿಸಲಾರದ ಕಡೆ ಹಿಮಸಾರಂಗಗಳನ್ನು ಸಾಕುತ್ತಾರೆ. ಇವರಲ್ಲದೆ ಬೇಟೆಯಾಡಿ ಮತ್ತು ಮೀನು ಹಿಡಿದು ಜೀವಿಸುವ ತುಂಗು ಜನಾಂಗದವರು ಚಳಿಗಾಲದಲ್ಲಿ ಹಿಮಸಾರಂಗಳ ತುಳಿತದಿಂದ ನೆಲ ಗಟ್ಟಿಯಾಗಿ ಹುಲ್ಲು ಬೆಳೆಯದಿರುವುದರಿಂದ, ಮೇವಿಗಾಗಿ ವಸತಿಗಳನ್ನು ಹುಡುಕಿಕೊಂಡು ಅಲೆಯುತ್ತಾರೆ. ಹಿಮಸಾರಂಗ ಇವರಿಗೆ ಅತಿ ಮುಖ್ಯವಾದ ಪ್ರಾಣಿ. ಅದನ್ನು ಸವಾರಿಗೂ ಸಾಮಾನು ಸಾಗಿಸಲೂ ಚಿಕ್ಕ ಬಂಡಿಯನ್ನು ಎಳೆಯಲೂ ಉಪಯೋಗಿಸುತ್ತಾರೆ. ಅದರ ಹಾಲನ್ನು ಕುಡಿಯುತ್ತಾರೆ. ಚರ್ಮವನ್ನು ಉಡುಪಿಗಾಗಿ ಬಳಸುತ್ತಾರೆ. ಹಿಮಸಾರಂಗ ಇವರ ಧರ್ಮ ಮತ್ತು ನಂಬಿಕೆಗಳಲ್ಲಿ ಮುಖ್ಯ ಸ್ಥಾನ ಗಳಿಸಿದೆ. ಹಿಮಸಾರಂಗಗಳನ್ನು ಮಾತ್ರ ಅತ್ಯಂತ ಪವಿತ್ರವೆಂದು ಯಾವುದಕ್ಕೂ ಉಪಯೋಗಿಸುವುದಿಲ್ಲ. ಈ ಪ್ರಾಣಿ