ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಫ್ಘಾನಿಸ್ತಾನ

ಕೋತಲ್ ಎಂಬಲ್ಲಿ ಕಾನಿಷ್ಕನ ಶಾಸನವಿರುವ ದೇವಾಲಯವೊಂದನ್ನು ಅಗೆದು ತೆಗೆದಿದ್ದಾರೆ.ಇದು ಜರುತುಷ್ಟ್ರ ಧರ್ಮಕ್ಕೆ ಸಂಬಂಧಿಸಿದ ಅಗ್ನಿ ದೇವಾಲಯ.ಇದರ ರಚನೆಯಲ್ಲಿ ಗ್ರೀಕ್ ಮತ್ತು ಪರ್ಷಿಯದ ವಾಸ್ತುಸಂಪ್ರದಾಯಗಳ ಪ್ರಭಾವ ಬಹುವಾಗಿದೆ.ಇದೇ ಸ್ಥಳದಲ್ಲಿ ಸಿಕ್ಕಿರುವ ಹದ್ದಿನ ಶಿಲ್ಪಗಳಿರುವ ದೇವಪೀಠ.ಮಥುರದ ಕಾನಿಷ್ಕನ ಶಿಲ್ಪಕ್ಕೆ ಹೋಲುವ ಭಗ್ನಶಿಲ್ಪಗಳು ಮತ್ತು ಒಂದು ಅಪೂರ್ವ ಶಿವವಿಗ್ರಹ,ಕುಶಾನ ಶಿಲ್ಪ ಸಂಪ್ರದಾಯದ ಒಳ್ಳೆಯ ಉದಾಹರಣೆಗಳು.ಫೂಚೆ ಅವರು ಬಾಲ್ಕ್ನಲ್ಲಿ ನಡೆಸಿರುವ ಸೊಂಶೋಧನೆಯಲ್ಲಿ ಕೆಲವು ಬೌದ್ಧ ಸ್ತೂಪದ ಅವಶೇಷಗಳನ್ನು ಗುರುತಿಸಿದ್ದಾರೆ.ಈ ಸ್ತೂಪಗಳು ಹೊರನೋಟಕ್ಕೆ ಇಟ್ಟಿಗೆಯಲ್ಲಿ ಕಟ್ಟಿದಂತೆ ಕಂಡರೂ ಒಳಭಾಗ ಜೇಡೀಮಣ್ಣಿನ ದೊಡ್ಡ ಗುಡ್ಡೆಯಾಗಿದ್ದು ಮೇಲ್ಪದರ ಮಾತ್ರ ಹಸಿ ಇಟ್ಟಿಗೆಯಾದಾಗಿರುತ್ತದೆ.ಟೇಪೆ-ಇ-ರುಸ್ತುಮ್ ಎಂಬಲ್ಲಿ ಇವುಗಳಿಗಿಂತಲೂ ಚೆನ್ನಾಗಿ ಸಂರಕ್ಷಿಸಲ್ಪಟ್ಟಿರುವ ಸ್ತೂಪವೊಂದಿದೆ.ಇದು ಯುವಾನ್ ಚಾಂಗ್ ಸಂದರ್ಶಿಸಿದ ಪ್ರಸಿದ್ಧ ನವವಿಹಾರದ ಭಾಗವಾಗಿತ್ತು.ಈ ಸ್ತೂಪ ೫೪ಮೀ ಚಚ್ಜೌಕದ ಜಗಲಿಯ ಮೇಲೆ ಇದೆ.ಜಗಲಿಯ ನಾಲ್ಕು ಕಡೆಯೂ ೧೧ಮೀ ಪಾವಟಿಗೆಗಳಿದ್ದ,ಜಗುಲಿಯ ಇತರ ಭಾಗಗಳು ಅರ್ಧ ಕಂಬಗಳಿಂದ ಅಲಂಕೃತವಾಗಿವೆ.ಜಗಲಿಯ ಮೇಲೆ ಇರುವ ಅರ್ಧಗೋಳಾಕಾರದ ಸ್ತೂಪದ ಮೇಲೂ ಕಣ್ಮಟ್ಟದವರೆಗೆ ಇದೇ ರೀತಿಯ ಅಲಂಕಾರವಿದೆ.ರಚನಾ ರೀತಿಯಲ್ಲಿ ಬಾಲ್ಕನ್ ಸ್ತೂಪಗಳ ಅನುಕರಣವಿದೆ.ಇದೇ ರೀತಿಯ ಸ್ತೂಪಗಳು ಗಾಂಧಾರ,ಸ್ವಾಟ್,ಕಪಿಶ ಮತ್ತು ನಗರಾಹಾರಗಳಲ್ಲೂ ಸಹ ಇವೆ.ಇವೆಲ್ಲ ಕುಶಾನ ಸ್ತೂಪರಚನಾ ಶೈಲಿಗೆ ಉದಾಹರಣೆಗಳು.ಆಫ್ಘಾನಿಸ್ತಾನದ ಹಲವು ಸ್ಥಳಗಳಲ್ಲಿ ಗಾಂಧಾರ ಶಿಲ್ಪಗಳು ದೊರಕಿವೆ.ಗ್ರೀಕ್ ಶಿಲ್ಪ ರೀತಿಯ ಸ್ವಾಭಾವಿಕತೆ,ಮನುಷ್ಯರ ಶಿಲ್ಪಗಳಲ್ಲಿ ಗ್ರೀಕರ ರೀತಿಯ ಮೈಮಾಟ,ಕೇಶಬಂಧ,ವಸ್ತ್ರವಿನ್ಯಾಸ ಮುಂತಾದವು ಕಂಡುಬಂದರೂ ಶಿಲ್ಪವಸ್ತುವಿನಲ್ಲಿ ಮಾತ್ರ ಇದು ಅಚ್ಚ ಭಾರತೀಯ.ಹೆಚ್ಚಿನ ಶಿಲ್ಪಗಳೆಲ್ಲ ಬುದ್ಧನ ಜೀವನದ ವಿವಿಧ ಘಟನೆಗಳನ್ನೋ ಬೌದ್ಧ ಜಾತಕದ ಕಥೆಗಳನ್ನೋ ಚಿತ್ರಿಸುತ್ತವೆ.ಜಲಾಲಾಬಾದ್ ಬಳಿಯ ಹಡ್ಡದಲ್ಲಿ ಗಾಂಧಾರ ಶೈಲಿಯ ಶಿಲ್ಪಕೃತಿಗಳು ಬಹಳವಾಗಿ ಸಿಕ್ಕಿವೆ.ಅಲ್ಲದೆ ಕುಶಾನರ ಕಾಲದ ಕೆಲವು ಸ್ತೂಪಾವಶೇಷಗಳೂ ಗಾಂಧಾರ ಶಿಲ್ಪಶೈಲಿಯಲ್ಲೇ ತಯಾರಿಸಿದ ಸುದ್ದೆಮಣ್ಣಿನ ವಿಗ್ರಹಗಳೂ ಇಲ್ಲಿ ದೊರಕಿವೆ.

ಉತ್ತರ ಆಫ್ಘಾನಿಸ್ತಾನದ ಹೈಬಕ್ ನಗರದ ಬಳಿ ಒಂದೇ ಬಂಡೆಯಲ್ಲಿ ಕೊರೆದ ಒಂದು ಸ್ತೂಪವೂ ಹಲವು ಬೌದ್ಧಗುಹೆಗಳೂ ಇವೆ.ಇವು ಪ್ರ.ಶ.೪-೫ನೆಯ ಶತಮಾನಕ್ಕೆ ಸೇರಿದೆವು.ಇಲ್ಲಿಯ ಗುಹೆಗಳು ಚಚ್ಜೌಕವಾಗಿದ್ದರೂ ಛಾವಣಿಯ ಭಾಗ ಮಾತ್ರ ಗುಮ್ಮಟದಂತೆ ಕೆತ್ತಲ್ಪಟ್ಟಿದೆ.ಇದು ಸಸ್ಸಾನೀಯ ವಾಸ್ತುಶೈಲಿಯ ಅನುಕರಣೆಯೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.ಫೂಚೆ ಎಲ್ಲೋರದ ಭಾರತೀಯ ವಾಸ್ತುಶೈಲಿಯ ಛಾಯೆ ಕೂಡ.ಈ ಬಂಡೆಗೆತ್ತನೆಗಳಲ್ಲಿವೆಯೆಂದು ಊಹಿಸಿದ್ದಾರೆ.ಜಲಾಲಾಬಾದ್ ಬಳಿಯ ದರುತಾದಲ್ಲಿ ಇದೇ ಬಗೆಯ ಬಂಡೆಯಲ್ಲಿ ಕೊರೆದ ಗುಹೆಗಳಿವೆ.ಕಾಬೂಲಿನಿಂದ ಸುಮಾರು ೧೨೮ ಕಿಮೀ ವಾಯವ್ಯಕ್ಕಿರುವ ಬಾಮಿಯಾನ್ ನಲ್ಲಿ ಪ್ರ.ಶ.೫-೬ನೆಯ ಶತಮಾನದ ಆನಂತರದ ಬೌದ್ಧಶಿಲ್ಪಿಗಳಿವೆ.ಇವುಗಳಲ್ಲಿ ಕಮರಿಯ ಪಕ್ಕದ ದೊಡ್ದ ಬಂಡೆಯಲ್ಲಿ ಕೊರೆದಿರುವ ಎರಡು ಬುದ್ಧವಿಗ್ರಹಗಳು ಮುಖ್ಯವಾದವು.ಒಂದು ೫೩ಮೀ ಎತ್ತರವಿದ್ದು ಪ್ರಪಂಚದಲ್ಲೇ ಅತಿ ದೊಡ್ಡ ವಿಗ್ರಹವಾಗಿದೆ.ಇನ್ನೊಂದು ೩೬ ೧/೨ಮೀ ಎತ್ತರವಿದೆ.ಇತ್ತೀಚೆಗೆ ತಾಲಿಬಾನ್ ಸರ್ಕಾರವಿದ್ದಾಗ ಈ ವಿಗ್ರಹಗಳನ್ನು ಫಿರಂಗಿಗಳ ಸಹಾಯದಿಂದ ಧ್ವಂಸಗೊಳಿಸಲಾಯಿತು.ಈ ಶಿಲ್ಪಗಳು ಸಸ್ಸಾನೀಯರಿಂದ ಪ್ರಭಾವಿತವಾದ ನವೀಕೃತ ಗಾಂಧಾರ ಶೈಲಿಯಲೀವೆ.

ಶಿಲ್ಪಗಳ ಪಕ್ಕದಲ್ಲಿ ವರ್ಣಚಿತ್ರಗಳೂ ಇವೆ.ಸಸ್ಸಾನೀಯರು,ಹೆಫ್ತಲೀಯರು ಮತ್ತು ಶಾಹೀ ಅರಸರ ಕಾಲದ ಅವಶೇಷಗಳು ಫೋಂಡುಕೀಸ್ತಾನದಲ್ಲಿ ಬಹಳವಾಗಿ ಸಿಕ್ಕಿವೆ.ಬಾಮಿಯಾನ್ ಬಳಿಯ ಜೋಹಕ್ ಎಂಬಲ್ಲಿರುವ ಇಟ್ಟಿಗೆಯ ಕೋಟೆ ಇವುಗಳಲ್ಲಿ ಮುಖ್ಯವಾದುದು.ಈ ಕಾಲಕ್ಕೆ ಸೇರಿದ ಕೆಲವು ಹಿಂದೂ ವಿಗ್ರಹಗಳು ಈ ಪ್ರಾಂತ್ಯದಲ್ಲಿ ದೊರಕಿವೆ.ಕಾಬೂಲಿನಲ್ಲಿ ಒಂದು ಹಿಂದೂ ದೇವಾಲಯವೂ ಇದೆ.

ಪ್ರ.ಶ.೭ನೆಯ ಶತಮಾನದ ಹೊತ್ತಿಗೆ,ಆಫ್ಘಾನಿಸ್ತಾನಕ್ಕೆ ಇಸ್ಲಾಮ್ ಸಂಪರ್ಕ ಒದಗಿದ್ದರೂ ಅದು ಪೂರ್ಣವಾಗಿ ಆ ಧರ್ಮೀಯರಿಗೆ ಒಲಪಟ್ಟಿದ್ದು ಪ್ರ.ಶ.೧೦ನೆಯ ಶತಮಾನದಲ್ಲಿ.ಸಹಜವಾಗಿ ಆ ಕಾಲದಿಂದ ಈಚಿನ ಕಟ್ಟಡಗಳು ಬೇರೆಯ ವರ್ಗಕ್ಕೆ ಸೇರುತ್ತವೆ.ಕಾಬೂಲ್ ಬಳಿಯ ಲಷ್ಕರೀ ಬಜಾರಿನಲ್ಲಿ ಘಜ್ನಿ ಮಹಮ್ಮದನ ಕಾಲದ(೯೯೮-೧೦೩೦)ಕೋಟೆ,ಅರಮನೆ,ಮಸೀದಿ ಮದರಸ ಮತ್ತು ಗೋರಿಗಳು ಬೆಲಕಿಗೆ ಬಂದಿವೆ.ಘಜ್ನಿ ವಾಸ್ತುಶೈಲಿ ಇಸ್ಲಾಮಿ-ಅದರಲ್ಲೂ ಪರ್ಷಿಯ-ಸಂಪ್ರದಾಯಕ್ಕೆ ಸೇರಿದುದು.ಆದರೂ ಆ ಕಾಲದ ಕೆಲವು ಅಮೃತಶಿಲೆಯ ಕಟ್ಟಡಗಳು,ಅರಮನೆಯಲ್ಲಿ ಅಲಂಕರಣಕ್ಕಾಗಿ ಮಾಡಿರುವ ಸುದ್ದೆಮಣ್ಣಿನ ಶಿಲ್ಪಗಳು ಮತ್ತು ವರ್ಣಚಿತ್ರಗಳು ಭಾರತ ಮತ್ತು ಮಧ್ಯಏಷ್ಯ ಕಲಾಸಂಪ್ರದಾಯಗಳ ಪ್ರಭಾವವನ್ನು ಬಿಂಬಿಸುತ್ತವೆ.ಘೋರಿ ಅರಸರ ಕಾಲದ ಭಗ್ನಕಟ್ಟಡಗಳು ಘೋರ್ ನಲ್ಲಿವೆ.ಕಾಬೂಲ್ ನಗರದಲ್ಲಿ,ಸುಂದರ ತೋಟದ ಮಧ್ಯದಲ್ಲಿರುವ ಬಾಬರ್ ನ ಸಮಾಧಿ ಮೊಗಲ ಅರಸರ ಕಾಲದ ಉತ್ತಮ ಕಟ್ಟಡ.ಹಾಗೆಯೇ ಅಲ್ಲ್ಲಿನ ಲೋಹದ ಗುಮ್ಮಟವಿರುವ ತೈಮೂರನ ಸಮಾಧಿಯೂ ಪ್ರಖ್ಯಾತವಾದುದು.ಆಫ್ಘಾನಿಸ್ತಾನದ ಹೆರಾತ್ ನಗರ ಮುಸಲ್ಮಾನ ಸಂಸ್ಕೃತಿಯ ಕೇಂದ್ರ,ಮಹಮದ್ ಘೋರಿ ಕಟ್ಟಿಸಿದ ಇಲ್ಲಿಯ ಮಸೀದಿ ಬಹಳ ದೊಡ್ಡ ಕಟ್ಟಡ.ಇದೇ ಊರಿನ ಅರ್ಗ್ ಕೋಟೆ,ಮುಸಲ್ಲಾ ಕಾಲೇಜು,ಜವಹರ್ ಶದ್ ನಸಮಾಧಿ,ಹುಸೇನ್ ಬೈಖರಾನ ಮದರಸ,ಪ್ರಸಿದ್ಧ ಮುಸಲ್ಮಾನ ಕವಿ ಅಬ್ದುಲ್ಲ ಅಸ್ಸರಿಯ ಸಮಾಧಿ ಇವು ಪ್ರ.ಶ.೧೩ರಿಂದ ೧೮ನೆಯ ಶತಮಾನಕ್ಕೆ ಸೇರಿದ ಇತರ ಮುಖ್ಯ ವಾಸ್ತುಕೃತಿಗಳು.

ಇತ್ತೀಚಿನವರೆಗೆ ಅಫ್ಘಾನಿಸ್ತಾನದಲ್ಲಿ ಪುರಾತತ್ತ್ವಸಂಶೋಧನೆಯ ಬಗ್ಗೆ ಫ್ರೆಂಚ್ ಸಂಸ್ಥೆಯೊಂದು ಏಕಸ್ವಾಮ್ಯವನ್ನು ಹೊಂದಿದ್ದಿತಾದ್ದರಿಂದ ಆ ದೇಶದ ಬಗ್ಗೆ ಹೆಚ್ಚು ಸಾಹಿತ್ಯವೆಲ್ಲವೂ ಫ್ರೆಂಚ್ ಭಾಷೆಯಲ್ಲಿವೆ.ಪೂಚೆ,ರೀನೆಗ್ರಾಸೆ,ಜೆಮೆಯೂನೀ,ಡಿಶ್ಲುಂಬರ್ಗರ್ ಮುಂತಾದವರು ಅಫ್ಘಾನಿಸ್ತಾನದ ಪುರಾತತ್ತ್ವಜ್ಞರಲ್ಲಿ ಆದ್ಯರು.ಭೂಖನನಗಳಲ್ಲಿ ಸಿಕ್ಕಿರುವ ಹೆಚ್ಚು ಅವಶೇಷಗಳು ಪ್ಯಾರಿಸ್ಸಿನ ಮ್ಯೂಸಿಯಂ ಮತ್ತು ಕಾಬೂಲ್ ವಸ್ತುಸಂಗ್ರಹಾಲಯಗಳಲ್ಲಿವೆ.(ಎಸ್.ಎನ್.)

ಬುಡಕಟ್ಟುಗಳು:ಮುಖ್ಯವಾಗಿ ಆಫ್ಘಾನರು,ಪರ್ಷಿಯನ್ನರು,ತುರ್ಕಿಸ್ತಾನದವರು,ಮಂಗೋಲರು ಮತ್ತು ಹಿಂದೂಕುಷ್ ನ ಆರ್ಯರು ಇಲ್ಲಿ ವಾಸಮಾಡುತ್ತಾರೆ.ರಾಜಕೀಯವಾಗಿ ಪ್ರಬಲರೆಂದರೆ ಜನಸಂಖ್ಯೆಯ ಶೇ.೬೦ ಇರುವ ಆಫ್ಘಾನರು.ಅವರ ಬಣ್ಣ ಹಸನಾಗಿದ್ದು ಮೂಗು ಉಬ್ಬಾಗಿದೆ.ಅವರ ನಿಜವಾದ ಹೆಸರು ಪಕ್ತೂನ್(ಇದರಿಂದಲೇ ಪಠಾಣ ಬಂದಿದೆ).ಇವರು ಪುಷ್ತು ಭಾಷೆಯನ್ನು ಬಳಸುತ್ತಾರೆ.ಮಹ್ಮಂದ್,ಮಂಗಲ್,ವಜೀರಿಗಳೇ ಆದಿಯಾದ ಅನೇಕ ಗುಂಪುಗಳು ಈ ವರ್ಗಕ್ಕೇ ಸೇರುತ್ತವೆ.ಸುಮಾರಾಗಿ ಎಲ್ಲರೂ ಮುಸಲ್ಮಾನ ಸುನ್ನಿ ಪಂಗಡದವರು.ಇವರಲ್ಲಿ ಬಹುಮಂದಿ ಪೂರ್ಣ ಅಲೆಮಾರಿಗಳು.ಎಲ್ಲರೂ ಯುದ್ಧವಿದೆಯಲ್ಲಿ ನಿಪುಣರು.ಗುಂಪಿನ ನಾಯಕನಿಗೆ ಖಾನ್ ಎಂದು ಹೆಸರು.