ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೯೪ ಆರ್ಥಿಕ ಅನಭಿವೃದ್ಧಿ

ನಿಗಮನ ವಿಧಾನ ಆರ್ಥಿಕ ವಿಷಯಗಳ ವಿಶ್ಲೇಷಣೆಗೂ ಉಪಯುಕ್ತ. ಇದು ವಿಜ್ಞಾನ ಪ್ರಪಂಚದ ರಾಣಿಯೆನಿಸಿರುವ ನೆಚ್ಚಿಕೆಯ, ತರ್ಕಶಾಸ್ತ್ರದ ನೆರವನ್ನು ಪಡೆಯುತ್ತದೆ. ಇದು ಸರಳ ಅಂಕಿ ಅಂಶಗಳು ಮುಂತಾದ ಆಧಾರಾಂಶಗಳನ್ನು ಸಂಗ್ರಹಿಸುವ ತೊಡಕಿನ ಮತ್ತು ಪ್ರಯಾಸದ ಪೇಚಾಟ ಅದಕ್ಕಿಲ್ಲ. ಚಾರಿತ್ರಿಕ ಆಧಾರ ವಿಷಯಗಳು ದೊರಕುವುದು ಕಷ್ಟ. ದೊರಕಿದರೂ ಅವು ಅಪೂರ್ಣ! ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಸಾಮಾಜಿಕ ನಡುವಳಿಯನ್ನು ಪ್ರಯೋಗ ಪರೀಕ್ಷೆಗೊಳಪಡಿಸುವುದು ಕಷ್ಟಸಾಧ್ಯ. ಈ ಪ್ರತಿಬಂಧಕಗಳು ನಿಗಮನ ವಿಧಾನದ ಅಗತ್ಯತೆಯನ್ನು ಸ್ಥಾಪಿಸಿವೆ.

ನಿಗಮನವಿಧಾನವನ್ನು ಎರಡು ಮಾದರಿಯಾಗಿ ವಿಭಾಗಿಸಬಹುದು. ಗಣಿತಸಂಬಂಧಿ ಮತ್ತು ಗಣಿತಸಂಬಂಧಿಯಲ್ಲದ್ದು. ಎರಡನೆಯ ವಿಧಾನ ಪ್ರೌಢಪ್ರಾಚೀನ ಮತ್ತು ಆಧುನಿಕ ಪ್ರೌಢಪ್ರಾಚೀನ ಅರ್ಥಶಾಸ್ತ್ರ ಪಂಡಿತರಿಗೆ ಪ್ರಯೋಗಸಾಧನವಾಯಿತು. ಆರ್ಥಿಕ ಸಮಸ್ಯೆಗಳ ವಿಶ್ಲೇಷಣೆಯಲ್ಲಿ ೧೯ನೆಯ ಶತಮಾನದಲ್ಲಿ ಎಡ್ಜ್ ವರ್ತ್ ಎಂಬ ಪಂಡಿತ ಗಣಿತ ಸಂಬಂಧಿ ನಿಗಮನ ವಿಧಾನವನ್ನು ಜನರಲ್ಲಿ ಹರಡಿದ. ಈ ವಿಶ್ಲೇಷಣೆಗೆ ಗಣಿತ ಮತ್ತು ರೇಖಾಚಿತ್ರಗಳ ಬಳಕೆ ಹೆಚ್ಚಾದುದು ಆ ಶತಮಾನದ ವೈಶಿಷ್ಟ್ಯ. ಒಂದು ಆರ್ಥಿಕ ಸಮಸ್ಯೆಯನ್ನು ಗಣಿತದ ಸಂಕೇತಗಳಾಗಿ ಹ್ರಸ್ವಗೊಳಿಸಿ ತೋರಿಸುವುದು, ಬೀಜಗಣಿತ ಮತ್ತು ಸಂಕಲನಶಾಸ್ತ್ರಗಳ ನೆರವಿನಿಂದ ದೊರಕಿದ ಪರಿಣಾಮಗಳಿಂದ ತೀರ್ಮಾನಿಸುವುದು - ಇದೇ ನಿಗಮವಿಧಾನ ಪ್ರಯೋಗದ ರೀತಿ. ಇದರ ಉಪಯುಕ್ತತೆ ಮೂರು ಬಗೆ. ಮೊದಲನೆಯದಾಗಿ, ಆರ್ಥಿಕ ತತ್ವಗಳ ಪ್ರತಿಪಾದನೆಗೆ ಇದು ಸಹಾಯಕ; ಎರಡನೆಯದಾಗಿ, ಕ್ರಮಬದ್ಧವಾದ ರೀತಿಯಲ್ಲಿ ತರ್ಕಿಸುವುದು ತುಂಬ ತೊಡಕಿನ ವಿಷಯವಾದ್ದರಿಂದ ವಿವಾದಾಂಶಗಳನ್ನು ವಿಶದಪಡಿಸುವುದಕ್ಕೆ ಗಣಿತ ಸಂಕೇತಗಳು ಅವಶ್ಯಕವಾದ ನೆರವು ನೀಡುತ್ತವೆ. ಅದೂ ಅಲ್ಲದೆ, ಗಣಿತ ರೀತಿಯ ಪ್ರತಿಪಾದನೆ ಅರ್ಥಶಾಸ್ತ್ರದ ವಿಚಾರಗಳಿಗೆ ಸ್ಪಷ್ಟತೆ ನಿಷ್ಕೃಷ್ಪತೆಗಳನ್ನು ಕೊಡುತ್ತದೆ. ಆದರೆ, ಕೆಲವರು ಅರ್ಥಶಾಸ್ತ್ರಜ್ಞರು ಮಾತ್ರ ವಿಸ್ತಾರವಾದ ಗಣಿತ ವಿಶ್ಲೇಷಣೆಯನ್ನು ಅರ್ಥಶಾಸ್ತ್ರದ ವಿಷಯಗಳಿಗೆ ಪ್ರಯೋಗಿಸಿದರೆ ಅದು ಕೇವಲ ಕಾಲ್ಪನಿಕವಾಗುತ್ತದೆ. ವಿನೋದ ವಸ್ತುವಾಗಿ ಕ್ಷೀಣಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞ ಪಂಡಿತರೆಲ್ಲ ಈ ವಿಧಾನದ ಪ್ರತಿಪಾದಕರು.

ಅನುಗಮನ ವಿಧಾನ ಬೆಳೆದದ್ದು, ನಿಗಮನ ವಿಧಾನ ಪಡೆದ ಪ್ರಾಮುಖ್ಯಕ್ಕೆ ಪ್ರತಿಕ್ರಿಯೆಯಾಗಿ. ಈ ಪ್ರತಿಕ್ರಿಯೆ ಜರ್ಮನಿಯ ಚಾರಿತ್ರಿಕಪಂಥದ ರೂಪದಲ್ಲಿ ಹೊರಹೊಮ್ಮಿತು. ಷ್ಮೂಲರ್, ನೀಸ್, ಹಿಲ್ಡಬ್ರಾಂಡ್, ರಾಷಾರ್ - ಇವರು ಈ ಪಂಥದ ಪ್ರತಿಪಾದಕರು. ಇಂಗ್ಲೆಂಡಿನಲ್ಲಿ ಆರ್.ಜೋನ್ಸ್, ಅಷೆ ಮತ್ತು ಸಿ.ಲೆಸ್ಲಿ ಅನುಗಮನ ವಿಧಾನವನ್ನು ಬೆಳೆಸಿದರು.

ಅನುಗಮನ ಅಥವಾ ಚಾರಿತ್ರಿಕ ವಿಧಾನ ನೆಲೆಗೊಂಡಿರುವುದು, ಮುಂಚಿನ ವಿಷಯ ಪರಿಶೀಲನೆಯ ಮೇಲೆ ಸಂಗ್ರಹಿಸಿದ ಆಧಾರಾಂಶಗಳು ಅಥವಾ ವಾಸ್ತವ ಸ್ಥಿತಿಗಳಿಂದ ಪ್ರಾರಂಭಿಸಿ ಅದು ಸಾಮಾನ್ಯೀಕರಣಕ್ಕೆ ಮುಂದುವರಿಯುತ್ತದೆ. ನಿರ್ದಿಷ್ಟದಿಂದ ಪ್ರಾರಂಭಿಸಿ ಸಾಮಾನ್ಯಕ್ಕೆ ಹೋಗುತ್ತದೆ. ವಸ್ತುಗಳ ನಿಜ ಸ್ವರೂಪವನ್ನು ಪರಿಗಣಿಸುವುದರಿಂದ ಅದು ವಸ್ತುಸತ್ತಾವಾದವೆಂದು ಹೆಸರು ಪಡೆದಿದೆ. ಅದನ್ನೇ ವಾಸ್ತವಿಕ ವಿಧಾನವೆನ್ನುತ್ತಾರೆ ಕೆಲವರು. ಏಕೆಂದರೆ, ಅದರ ಪರೀಶೀಲನೆ ಒಂದು ಪೂರ್ತಿ ವಿಷಯದ ನಿಜಸ್ವರೂಪವನ್ನು, ಕೃತಕ ವಿಭಜನೆಗಳನ್ನು ದೂರವಿಡುತ್ತದೆ. ಒಂದು ದೇಶದ ರಾಷ್ಟ್ರೀಯ ಆರ್ಥಿಕ ವ್ಯವಹಾರ ಅಂದರೆ ಸಂಪತ್ತಿನ ಉತ್ಪಾದನೆ, ಹಂಚಿಕೆಗಳು ಮತ್ತು ಬಳಕೆಗಳು. ಒಂದು ದೀರ್ಘ ಕಾಲದ ವಿಕಸನ ಪರಂಪರೆಯ ಪರಿಣಾಮ. ಆದ್ದರಿಂದ ಅದರ ವಿಶ್ಲೇಷಣೆ ವಾಸ್ತವಿಕ ಚಾರಿತ್ರಿಕ ವಿಷಯಗಳಿಗೆ ಮತ್ತು ಸಮಾಜದ ಸಾಮಾನ್ಯನಿಯಮಗಳಿಗೆ, ಅದರ ವಿಕಸನಕ್ಕೆ ಸಂಬಂಧಿಸಿರಬೇಕು ಎಂದು ಜರ್ಮನಿಯ ಚಾರಿತ್ರಿಕ ಪಂಥದವರು ನಂಬಿದ್ದರು.

ಅನುಗಮನ ವಿಧಾನ ಕೆಲವು ಶ್ರೇಷ್ಠ ಗುಣಗಳನ್ನು ಹೊಂದಿದೆ. ಈ ವಿಧಾನದ ಸಮರ್ಥಕರು ನಿಗಮನ ವಾದಿಗಳ ನಿರ್ಣಯಗಳನ್ನು ಪರೀಕ್ಷಿಸಿ ಸರಿ ನೋಡಿದ್ದಾರೆ. ತಮ್ಮ ಪರೀಕ್ಷೆಯಲ್ಲಿ ಆ ನಿರ್ಣಯಗಳನ್ನು ಸಮರ್ಥಿಸಿದ್ದಾರೆ, ಖಂಡಿಸಿದ್ದಾರೆ, ಬದಲಾಯಿಸಿದ್ದಾರೆ, ವಿಸ್ತರಿಸಿದ್ದಾರೆ. ಆರ್ಥಿಕ ಕಲ್ಪನೆಗಳ ಮತ್ತು ಸಂಸ್ಥೆಗಳ ಇತಿಹಾಸ ಹುಟ್ಟಿದ್ದು ಚಾರಿತ್ರಿಕ ವಿಧಾನದ ಪ್ರತಿಪಾದಕರಿಂದ. ಮೇಲಾಗಿ, ಅನುಗಮನ ವಿಧಾನದ ಗುಣವಿಶೇಷ ಕಂಡುಬರುವುದು ಸಾಪೇಕ್ಷಕತ್ವಕ್ಕೆ ಅದು ಕೊಟ್ಟಿರುವ ಪ್ರಾಮುಖ್ಯದಲ್ಲಿ. ಯಾವುದಾದರೊಂದು ಚಾರಿತ್ರಿಕ ಸಂದರ್ಭದಿಂದುಂಟಾದ ಮತ್ತು ಯಾವುದಾದರೊಂದು ವಿಶಿಷ್ಟಕಾಲಕ್ಕೆ ಮಾತ್ರ ಸಮಂಜಸವಾದ, ಒಂದು ಆರ್ಥಿಕ ಸಾಮಾನ್ಯ ಸೂತ್ರವನ್ನು ಎಲ್ಲ ಕಾಲಕ್ಕೂ ಎಲ್ಲ ಸ್ಥಳಗಳಿಗೂ ಅನ್ವಯಿಸುವ ಸೂತ್ರಕ್ಕೆ ಸಮವೆಂದು ಪರಿಗಣಿಸಲಾಗುವುದಿಲ್ಲ. ಅದರ ಕೊರತೆ ಇರುವುದು ಈ ವಿಷಯದಲ್ಲಿ ಈ ವಿಧವನ್ನನುಸರಿಸುವವರು. ವಿಶ್ಲೇಷಣೆಯಲ್ಲಿ ಅವರಿಗೆ ಮಾರ್ಗದರ್ಶಿಯಾಗಿರಲು ಒಂದು ಆಧಾರಭಾವನೆಯಿಲ್ಲದಿರುವುದರಿಂದ, ವಾಸ್ತವಿಕ ಆಧಾರಾಂಶಗಳ ತೊಡಕಿಗೆ ಸಿಕ್ಕ ಸ್ಪಷ್ಟ ಅನುಮಿತಿಗಳನ್ನು ಪಡೆಯಲು ಸಾಧ್ಯವಾಗದಿರಬಹುದು.

ಅನೇಕ ಪ್ರಖ್ಯಾತ ಅರ್ಥಶಾಸ್ತ್ರ ಪಂಡಿತರು, ವಿಶೇಷವಾಗಿ ಆಲ್ ಫ್ರೆಡ್ ಮಾರ್ಷಲ್ ಎರಡು ವಿಧಾನಗಳನ್ನು ಅನುಸರಿಸಿದರು. ವಾಸ್ತವವಾಗಿ ಎರಡು ವಿಧಾನಗಳೂ ಪರಸ್ಪರ ವಿರೋಧಿಗಳಲ್ಲ ಪೂರಕಗಳು. ನಿಗಮನ ವಿಧಾನ ಸೂತ್ರ ಪ್ರತಿಪಾದನೆಗೆ ಉಪಯುಕ್ತವಾಗಿದ್ದರೆ, ಅನುಗಮನ ವಿಧಾನ ವ್ಯಾವಹಾರಿಕ ಅರ್ಥಕ್ಷೇತ್ರದಲ್ಲಿ ಪ್ರಯೋಜನಕಾರಿ. ನಿಗಮನ ಮತ್ತು ಅನುಗಮನ ವಿಧಾನಗಳೆರಡೂ ವೈಜ್ಞಾನಿಕ ಪರ್ಯಾಲೋಚನೆಗೆ ಅವಶ್ಯಕ. ಅವೆರಡೂ ಸರಿಯಾಗಿ ನಡೆಯಲು ಬೇಕಾದ ಬಲಗಾಲು ಎಡಗಾಲುಗಳಿದ್ದಂತೆ ಎಂದು ಆಲ್ ಫ್ರೆಡ್ ಮಾರ್ಷಲ್ ಹೇಳಿರುವುದು ಯುಕ್ತ.(ನೋಡಿ-ಆರ್ಥಿಕ ನಿಯಮಗಳು). (ಎಂ.ಎಸ್.ಕೆ)

ಆರ್ಥಿಕ ಅನಭಿವೃದ್ಧಿ : ಒಂದು ದೇಶದ ಆರ್ಥಿಕ ಅಭಿವೃದ್ಧಿಯನ್ನು ಅಲ್ಲಿನ ವೈಯಕ್ತಿಕ ಹಾಗೂ ರಾಷ್ಟ್ರೀಯ ವರಮಾನದ ಮೇಲೆ ಅಳೆಯುವುದಾದರೆ ಸ್ಥೂಲವಾಗಿ ಎಲ್ಲ ದೇಶಗಳನ್ನೂ ಅಭಿವೃದ್ಧಿ ಮತ್ತು ಅನಭಿವೃದ್ಧಿ ಎಂದು ಎರಡು ಭಾಗ ಮಾಡಬಹುದು. ಅನಭಿವೃದ್ಧಿ (ಅಂಡರ್ ಡೆವಲಪ್ ಮೆಂಟ್) ಎಂಬ ಪದವನ್ನು ಅಲ್ಪಾಭಿವೃದ್ಧಿ, ಹಿಂದುಳಿಕೆ ಎಂಬ ಅರ್ಥದಲ್ಲಿ ಬಳಸಲಾಗಿದೆ. ಈಚೆಗೆ ಆರ್ಥಿಕವಾಗಿ ಹಿಂದುಳಿದ ಅನೇಕ ರಾಷ್ಟ್ರಗಳು ಮುಂದುವರಿಯಲು ಯೋಜನಾಬದ್ಧ ರೀತಿಯಲ್ಲಿ ಪ್ರಯತ್ನಿಸುತ್ತಿರುವುದರಿಂದ ಅಂಥವನ್ನು ಮುಂದುವರಿಯುತ್ತಿರುವ ರಾಷ್ಟ್ರಗಳೆಂದು ಕರೆಯುವುದು ವಾಡಿಕೆ. ವಿಶ್ವಸಂಸ್ಥೆ ಆರ್ಥಿಕ ದೃಷ್ಠಿಯಿಂದ ಎಲ್ಲ ರಾಷ್ಟ್ರಗಳನ್ನೂ ಮೂರು ಬಗೆಯಾಗಿ ವಿಂಗಡಿಸಿದೆ. ೧ ತಲಾ ಆದಾಯ ೯೧೫ ಡಾಲರುಗಳಿಗಿಂತ ಹೆಚ್ಚು ಇರುವ ದೇಶಗಳು ಹೆಚ್ಚು ವರಮಾನದ ರಾಷ್ಟ್ರಗಳು. ೨ ತಲಾ ಆದಾಯ ೩೧೦ ಡಾಲರುಗಳಷ್ಟಿರುವ ದೇಶಗಳು ಮಧ್ಯಮ ವರಮಾನದ ರಾಷ್ಟ್ರಗಳು. ೩ ತಲಾ ಆದಾಯ ೫೪ ಡಾಲರುಗಳಷ್ಟಿರುವುವು ಕಡಿಮೆ ವರಮಾನದ ರಾಷ್ಟ್ರಗಳು. ಹೀಗೆ ರಾಷ್ಟ್ರಗಳಲ್ಲಿನ ಆರ್ಥಿಕ ಹಿಂದುಳಿಕೆಗೆ ಕಾರಣಗಳೇನು, ಮುಂದುವರಿದ ರಾಷ್ಟ್ರಗಳು ತಮ್ಮ ಪ್ರಗತಿಗೆ ಅನುಸರಿಸುವ ಕ್ರಮಗಳೇನು, ಮುಂದುವರಿಯುತ್ತಿರುವ ರಾಷ್ಟ್ರಗಳು ಯಾವ ದಾರಿಯಲ್ಲಿ ಸಾಗುತ್ತಿವೆ ಎಂಬ ವಿಷಯಗಳನ್ನು ಇಲ್ಲಿ ಸೂಕ್ಷ್ಮವಾಗಿ ವಿವೇಚಿಸಲಾಗಿದೆ.

ಒಂದು ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾದ ಅಂಶಗಳು ಅನೇಕ ಇವೆ. ಅಲ್ಲಿನ ವಾತಾವರಣ, ಪ್ರಾಕೃತಿಕ ಸಂಪತ್ತು, ವ್ಯವಸಾಯ, ಕೈಗಾರಿಕೆಗಳು, ಅವುಗಳಿಗೆ ಬಳಸಲಾಗುವ ಯಾಂತ್ರಿಕ ತಾಂತ್ರಿಕ ಸಲಕರಣೆಗಳು, ಆಮದು ರಫ್ತುಗಳು, ಜನಸಂಖ್ಯೆ ಮತ್ತು ಅಭಿವೃದ್ಧಿ ಹೊಂದಲು ಒದಗುವ ಜನಶಕ್ತಿ, ಅವರಲ್ಲಿರುವ ಕ್ರಿಯಾಶಕ್ತಿ, ಅವರ ಸಾಮಾನ್ಯ ಮತ್ತು ತಾಂತ್ರಿಕ ವಿದ್ಯಾ ಸಂಪತ್ತು, ಆರೋಗ್ಯ, ಅವರ ಸಾಂಸ್ಕೃತಿಕ ಮಟ್ಟ, ರಾಜಕೀಯ ಸಂಬಂಧ, ಪ್ರಗತಿಯ ಬಗ್ಗೆ ಅಲ್ಲಿನ ಸರ್ಕಾರಗಳಿಗಿರುವ ಆಸಕ್ತಿ-ಇತ್ಯಾದಿಗಳಲ್ಲಿ ಆ ದೇಶದ ಬೆಳವಣಿಗೆಗೆ ಸಹಾಯಕವಾಗಿವೆ. ಇವುಗಳಲ್ಲಿ ಯಾವುದು ಕುಂಠಿತವಾದರೂ ದೇಶ ಅಭಿವೃದ್ಧಿ ಹೊಂದಲಾರದು. ಜೊತೆಗೆ ಚರಿತ್ರೆ ಈ ಬಗ್ಗೆ ತಿಳಿಸುತ್ತಿರುವ ಪಾಠ ಗಮನಾರ್ಹವಾಗಿದೆ. ವ್ಯಾಪಾರ ಮತ್ತು ವಸಾಹತುಶಾಹಿ ಧೋರಣೆಗಳುಳ್ಳ ಪಾಶ್ಚಾತ್ಯ ರಾಷ್ಟ್ರಗಳು ೧೬ನೆಯ ಶತಮಾನದಲ್ಲಿ ನಡೆಸಿದ ಆರ್ಥಿಕ ಹಾಗೂ ರಾಜಕೀಯ ಆಕ್ರಮಣಗಳಿಂದಾಗಿ ಅನೇಕ ಪೌರಾಸ್ತ್ಯ ರಾಷ್ಟ್ರಗಳು ತೀವ್ರ ಶೋಷಣೆಗೆ ಒಳಗಾಗಿ ಹಿಂದುಳಿದಿವೆ. ೨೦ನೆಯ ಶತಮಾನದಲ್ಲಿ ಹೊಸ ಪ್ರಜ್ಞೆ ಬೆಳೆದ ಮೇಲೆ ಶೋಷಿತ ರಾಷ್ಟ್ರಗಳು ಪ್ರತಿಭಟಿಸಿ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿದವಾದರೂ ಅವುಗಳಲ್ಲಿ ಬಹುಪಾಲಿನವಕ್ಕೆ ಆರ್ಥಿಕ ಸ್ವಾತಂತ್ರ್ಯ ಇನ್ನೂ ದೊರೆತಿಲ್ಲ. ಈಚೆಗೆ ಅಭಿವೃದ್ಧಿಗಾಗಿ ರಾಷ್ಟ್ರಮಟ್ಟದ ಆಸಕ್ತಿ ಹೆಚ್ಚುತ್ತಿರುವಂತೆ ಅಂತಾರಾಷ್ಟ್ರೀಯ ಸೌಹಾರ್ದವೂ ಕಂಡುಬರುತ್ತಿರುವುದರಿಂದ ಪರಿಸ್ಥಿತಿ ಆಶಾದಾಯಕವಾಗಿದೆ.

ಅಭಿವೃದ್ಧಿಗಾಗಿ ಒಂದು ರಾಷ್ಟ್ರ ಕೈಕೊಳ್ಳಬೇಕಾದ ಕಾರ್ಯಕ್ರಮಗಳು ಹೀಗಿವೆ : ೧. ದೇಶದ ಬಂಡವಾಳವನ್ನು ರಚನಾತ್ಮಕ ಕಾರ್ಯಗಳಲ್ಲಿ ವಿನಿಯೋಗಿಸುವುದು. ಉಳಿತಾಯ ಯೋಜನೆಗಳಿಂದ, ರಾಷ್ಟ್ರೀಯ ಸಾಲಗಳಿಂದ, ಲಾಟರಿಗಳಿಂದ, ವಿದೇಶೀ ಸಾಲಗಳಿಂದ ಬಂಡವಾಳ ತುಂಬುವುದು. ೨. ಅಭಿವೃದ್ಧಿ ತ್ವರಿತಗೊಳ್ಳಬೇಕಾಗಿರುವುದರಿಂದ ಯೋಜನೆಗಳನ್ನು ಹಾಕಿಕೊಂಡು ಅತಿ ಶೀಘ್ರವಾಗಿ ಕೆಲಸ ನೆರವೇರುವಂತೆ ನೋಡಿಕೊಳ್ಳುವುದು. ೩. ದೇಶದ ಸಂಪನ್ಮೂಲಗಳನ್ನು ಮುಖ್ಯವಾಗಿ ಪ್ರಾಕೃತಿಕ ಮತ್ತು ಜನರೂಪ ಇವುಗಳನ್ನು ಪೂರ್ಣ ಬಳಸುವುದು. ೪. ಬೇಕಾದ ಯಾಂತ್ರಿಕ ಮತ್ತು ತಾಂತ್ರಿಕ ಸಹಾಯ ಸಹಕಾರಗಳನ್ನು ತಜ್ಞ ರಾಷ್ಟ್ರಗಳಿಂದ ಎರವಲು ಪಡೆಯುವುದು. ೫. ಸ್ಥಳೀಯ ಯೋಗ್ಯತೆಗಳನ್ನು ಯುಕ್ತ ರೀತಿಯಲ್ಲಿ ಬಳಸುವುದು. ೬. ಜನಸಂಖ್ಯೆಯನ್ನು ನಿಯಂತ್ರಿಸಿ ಇರುವ ಜನಬಲ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು. ೭. ಉಳುಮೆಯ ಕ್ರಮ, ವ್ಯಾಪ್ತಿಗಳನ್ನು ಸ್ಥಳೀಯ ಅಗತ್ಯಗಳಿಗನುಸಾರ ಬದಲಾಯಿಸುವುದು. ೮. ಜನರ ವಿದ್ಯಾಭ್ಯಾಸದ ಮಟ್ಟ ಹೆಚ್ಚುವಂತೆ ಮಾಡುವುದು. ೯. ಸಾಧಾರಣವಾಗುತ್ತಿರುವ ವಿನಾಶಕಾರಿ ಒಳಜಗಳಗಳು, ಯುದ್ಧಗಳು, ಮುಷ್ಕರಗಳು, ಮುಂತಾದವುಗಳನ್ನು ನಿವಾರಿಸಲು ಯತ್ನಿಸುವುದು. ೧೦. ರಾಷ್ಟ್ರೀಯ ಆಮದು ರಫ್ತುಗಳನ್ನು ದೇಶದ ಹಿತದೃಷ್ಠಿಯಿಂದ ರೂಪಿಸುವುದು. ಭಾರತ ಸ್ವತಂತ್ರವಾದ ಮೇಲೆ ಈ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿರುವುದನ್ನು ಒಂದು ನಿದರ್ಶನವಾಗಿ ತೆಗೆದುಕೊಳ್ಳಬಹುದು. ಮುಖ್ಯವಾಗಿ ದೇಶದ ಆರ್ಥಿಕ ಪ್ರಗತಿ ಅಲ್ಲಿನ ಜನರ ಕ್ರಿಯಾಶಕ್ತಿಯನ್ನು ಅವಲಂಬಿಸಿದೆ ಎನ್ನಬಹುದು.

(ನೋಡಿ-ಆರ್ಥಿಕ ಬೆಳವಣಿಗೆ:ಆರ್ಥಿಕ ಯೋಜನೆಗಳು;ಆರ್ಹಿಕ ರಾಷ್ಟ್ರೀಯತೆ;ಆರ್ಥಿಕ ಸಂಪನ್ಮೂಲಗಳು;ಆರ್ಥಿಕ ಸ್ವಾತಂತ್ರ್ಯ)

                                                    (ಜಿ.ಟಿ.ಎಚ್.)