ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆವರ್ತಲೇಖಕ - ಆವಾಹನೆ

ಇದರ ವ್ಯಾಸ ಕೆಲವು ಮೀ.ಗಳಿಂದ ಹಲವು ಕಿಮೀಗಳವರೆಗೂ ಇರಬಹುದು. ವೇಗ 200-300 ಕಿಮೀ. ಸುಳಿ ಸುಳಿಯಾಗಿ ಎದ್ದು ಬೀಳುವ ಈ ಗಾಳಿ ಬಹಳ ಆನಾಹುತಗಳಿಗೆ ಕಾರಣವಾಗಿದೆ. ವಾಯುಮಂಡಲದ ಕೆಳಪದರಗಳಲ್ಲಿ ಕಡಿಮೆ ಒತ್ತಡವಿರುವ ಕಡೆ ಇದು ಸಾಮಾನ್ಯವಾಗಿ ಉದ್ಭವಿಸುತ್ತದೆ. ಕಡಿಮೆ ಒತ್ತಡದ ಪ್ರದೇಶ ಕೇಂದ್ರದಲ್ಲಿದ್ದು ಹೆಚ್ಚು ಒತ್ತಡದ ವಾಯು ಅದನ್ನು ಸುತ್ತುವರಿರುತ್ತದೆ. ಈ ಹೆಚ್ಚು ಒತ್ತಡದ ವಾಯು ಕೇಂದ್ರದೆಡೆಗೆ ನುಗ್ಗಿ ಫೆ ನ ನಿಯಮದ ಪ್ರಕಾರ ಅಪಸರಣಗೊಳ್ಳುತ್ತದೆ. ಆದ್ದರಿಂದ ಆವರ್ತಮಾರುತ ಭೂಮಿಯ ಸುತ್ತುವಿಕೆಗನುಗುಣವಾಗಿ ಉತ್ತರಾರ್ಧಗೋಳದಲ್ಲಿ ಆಪ್ರದಲಕ್ಷಿಣವಾಗಿಯೂ ದಕ್ಷಿಣಾರ್ಧಗೋಳದಲ್ಲಿ ಪ್ರದಕ್ಷಿಣ ರೂಪವಾಗಿಯೂ ಸುತ್ತುತ್ತವೆ.

ಆವರ್ತಮಾರುತ ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೇಸಗೆಯಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಇದಕ್ಕೆ ಕಾರಣ ಸಮುದ್ರಗಳ ಮೇಲ್ಮೈಯಲ್ಲಿ ಆಗ ಉಂಟಾಗುವ ಶಾಖವೈಪರೀತ್ಯಹಳು. ಆವರ್ತಮಾರುತದ ವ್ಯಾಸ ಚಿಕ್ಕದಾಗಿದ್ದು ವಾಯು ಮಂಡಲದಲ್ಲಿ ಕಂಬದೋಪಾದಿಯಲ್ಲಿ ಬಹಳ ಎತ್ತರದವರೆಗೂ ಪಸರಿಸುತ್ತದೆ. ಉಷ್ಣವಲಯದಲ್ಲಿ ಈ ಮಾರುತ ಬಹಳ ಬಿರುಸು ಮತ್ತು ವಿನಾಶಕಾರಿ. ಇದರ ಚಲನ ಸಾಮಾನ್ಯವಾಗಿ ಪಶ್ಚಿಮದ ಕಡೆಗೆ. ಇದರ ಆಡ್ಡಳತೆ 80-300 ಕಿಮೀವರೆಗೆ ಇರುತ್ತದೆ. ಒತ್ತಡವು ಕೇಂದ್ರದಲ್ಲಿ ಅತ್ಯಂತ ಕಡಿಮೆ, ಹೊರಭಾಗಕ್ಕೆ ಹೋದಂತೆಲ್ಲ ಬಲು ಹೆಚ್ಚು. ಇದರ ವೇಗ ಗಂಟೆಗೆ 100 ಕಿಮೀಗೂ ಹೆಚ್ಚು. ಸಮುದ್ರ ಪ್ರದೇಶಗಳ ಮೇಲೆ ಬಹಳ ಬಿರುಸಾಗಿದ್ದು ಭೂಪ್ರದೇಶವನ್ನು ತಲಪಿದಂತೆಲ್ಲ ದುರ್ಬಲವಾಗುತ್ತದೆ. ಇದಕ್ಕೆ ಕಾರಣ, ಈ ಮಾರುತ ಭೂಮಿಯನ್ನು ತಲಪುವ ವೇಳೆಗೆ ತೇವಾಂಶ ಹೋಗಿ ಭೂಮಿಯ ಮೇಲ್ಮೈಯೊಡನೆ ಘರ್ಷಣೆ ಹೊಂದುವುದು.

ಆವರ್ತಮಾರುತದ ಕೇಂದ್ರಪ್ರದೇಶದಲ್ಲಿ ಯಾವಾಗಲೂ ಶಾಂತಸ್ಥಿತಿಯಿರುತ್ತದೆ. ಈ ಶಾಂತಪ್ರದೇಶವನ್ನು ಆವರ್ತಮಾರುತದ ಕಣ್ಣು (ಐ ಆಫ್ ಸೈಕ್ಲೋನ್) ಎಂದು ಕರೆಯುತ್ತಾರೆ. ಇದನ್ನು ಹೆಚ್ಚು ಒತ್ತಡದ ಪ್ರಬಲ ಗಾಳಿ ಕೋಟೆಯಂತ ಸುತ್ತುವರಿದಿರುತ್ತದೆ. ಈ ಶಾಂತಪ್ರದೇಶದಲ್ಲಿ ಹವಾಮಾನ ಸ್ವಚ್ಛವಾಗಿದ್ದು ಉಳಿದ ಕಡೆಗಳಲ್ಲಿ ಮೋಡಕವಿದ ಹಾಗೂ ಮಳೆಯಿಂದ ಕೂಡಿದ ವಾತಾವರಣವಿರುತ್ತದೆ. ಆವರ್ತಮಾರುತದ ಆಗಮನಕ್ಕೆ ಮೊದಲು ಹವೆ ಸ್ವಚ್ಛವಾಗಿ ಹಿತಕರವಾಗಿರುತ್ತದೆ. ಅನಂತರ ದಟ್ಟವಾದ ಮೋಡಕವಿದ ವಾತಾವರಣವುಂಟಾಗಿ ಧಾರಾಕಾರವಾಗಿ ಮಳೆಯಾಗುತ್ತದೆ. ಇಂಥ ಆವರ್ತಮಾರುತಗಳು ಪ್ರಪಂಚದ ವಿವಿಧಭಾಗಗಳಲ್ಲಿ ಗೋಚರಿಸಿ, ಅಧಿಕವಾಗಿ ಮಳೆ ಸುರಿಸುತ್ತವೆ. ಸಮುದ್ರದಲ್ಲಿರುವ ದ್ವೀಪಗಳಿಗೂ ಭೂಖಂಡಗಳ ತೀರಪ್ರದೇಶಗಳಿಗೂ ಉಷ್ಣವಲಯದ ಈ ಮಾರುತಗಳು ವಿನಾಶಕಾರಿಗಳಾಗಿವೆ. ಸಾಮಾನ್ಯವಾಗಿ ಇಂಥ ಪರಿಸ್ಥಿತಿ ಬಂಗಾಲಕೊಲ್ಲಿ ಅರಬ್ಬೀ ಸಮುದ್ರ, ಪೂರ್ವ ಹಿಂದೂ ಮಹಾಸಾಗರ. ಮೆಕ್ಸಿಕೋದ ತೀರ ಪ್ರದೇಶ, ಚೀನ ಹಾಗೂ ಆಸ್ಟ್ರೇಲಿಯಗಳ ಪೂರ್ವ ತೀರಗಳಲ್ಲಿ ಉಂಟಾಗುತ್ತದೆ. ಭಾರತದ ದಕ್ಷಿಣ ಭಾಗದ ಪೂರ್ವ ತೀರದ ಮೇಲೆ ಇದರ ಪ್ರಭಾವ ಹೆಚ್ಚು. ಇದು ಬಂಗಾಲಕೊಲ್ಲಿಯಲ್ಲಿ ಹುಟ್ಟಿ ಪಶ್ಚಿಮದೆಡೆಹಗೆ ನುಗ್ಗುತ್ತದೆ. ದಕ್ಷಿಣ ಭಾರತದ ಹಲವಾರು ನದಿಗಳ ಮುಖಜಭೂಮಿಗಳಲ್ಲೂ ಆವುಗಳ ಕಣಿವೆಗಳಲ್ಲೂ ವಿಪರೀತವಾಗಿ ಮಳೆ ಸುರಿಸಿ, ಬೆಳೆಗಳಿಗೂ ಆಸ್ತಿಪಾಸ್ತಿಗಳಿಗೂ ಅಪಾರ ನಷ್ಟವುಂಟುಮಾಡುತ್ತವೆ. ಕೆಲವುಸಾರಿ ಪ್ರಾಣಹಾನಿಗಳಾಗುವುದೂ ಉಂಟು. ಗಂಗಾನದಿ, ಮಹಾನದಿ, ಕೃಷ್ಣಾ, ಗೋದಾವರಿ, ಕಾವೇರಿ ನದಿಗಳ ಮುಖಜಭೂಮಿ ಹಾಗೂ ಚೆನ್ನೈ, ವಿಶಾಖ ಪಟ್ಟಣ ಮತ್ತು ಕೋಲ್ಕತ ನಗರಗಳ ಹಲವು ಸಾರಿ ಇಂಥ ಪಿಡುಗಿಗೊಳಗಾಗಿವೆ.

ಸಮಶೀತೋಷ್ಣವಲಯಗಳಲ್ಲಿ ಇದನ್ನು ತಗ್ಗು (ಲೋ ಡಿಪ್ರೆಷನ್) ಮಾರತ ಎಂದು ಕೆರೆಯುತ್ತಾರೆ. ಪಶ್ಚಿಮ ಮಾರುತ ಮತ್ತು ಧ್ರುವ ಮಾರುತ ಒಂದಕ್ಕೊಂದು ಸೇರುವ ಪ್ರದೇಶದಲ್ಲಿ ಈ ತಗ್ಗುಗಳೇರ್ಪಡುತ್ತವೆ. ಇವುಗಳ ವ್ಯಾಸ ದೊಡ್ಡದಾಗಿದ್ದು ಇವು ಬೃಹತ್ ವೃತ್ತಗಳಲ್ಲಿ ಚಲಿಸುತ್ತವೆ. ಆದ್ದರಿಂದ ಈ ಮಾರುತ ಅಷ್ಟು ತೀವ್ರವಾಗಿಯೂ ಪ್ರಭಾವಶಾಲಿಯೂ ಆಗಿರುವುದಿಲ್ಲ: ವೇಗವೂ ಕಡಿಮೆ; ಸಾಮಾನ್ಯವಾಗಿ ಮಳೆಯನ್ನು ತರುತ್ತದೆ.ಉಷ್ಣವಲಯ ಆವರ್ತಮಾರುತಕ್ಕೆ ವಿರುದ್ಧವಾಗಿ ಇದು ಪೂರ್ವಾಭಿಮುಖ ಸಂಚರಿಸುತ್ತದೆ. ಉತ್ತರ ಅಮೆರಿಕದ ಪಶ್ಚಿಮ ಭಾಗ, ಯುರೋಪಿನ ಪಶ್ಚಿಮ ಹಾಗೂ ಉತ್ತರ ತೀರಪ್ರದೇಶಗಳ ಮೇಲೆ ಇದರ ಪ್ರಭಾವ ಹೆಚ್ಚು.

ಆವರ್ತ ಪ್ರತಿಮಾರುತ: ಹೆಚ್ಚು ಒತ್ತಡದ ಕೇಂದ್ರದ ಸುತ್ತ ಕಡಿಮೆ ಒತ್ತಡವಿರುವ ಮಾರುತಕ್ಕೆ ಈ ಹೆಸರಿದೆ (ಆಯಾಂಟಿ ಸೈಕ್ಲೋನ್). ಇದು ಎದ್ದಾಗ ಗಾಳಿ ಹೆಚ್ಚು ಒತ್ತಡದ ಕೇಂದ್ರದಿಂದ ಹೊರಭಾಗಕ್ಕೆ ಎಲ್ಲ ದಿಕ್ಕುಗಳಲ್ಲೂ ನುಗ್ಗಿ ಚದರಿ ಹೋಗುತ್ತದೆ.

ವಾಯುವಿನ ಅಪಸರಣದಿಂದಾಗಿ ಇದು ಉತ್ತರಾರ್ಧಗೋಳದಲ್ಲಿ ಪ್ರದಕ್ಷಿಣ ಗತಿಯಲ್ಲೂ ದಕ್ಷಿಣಾರ್ಧಗೋಳದಲ್ಲಿ ಅಪ್ರದಕ್ಷಿಣ ಗತಿಯಲ್ಲೂ ಬೀಸುತ್ತದೆ. ಇದು ಬೀಸಿದಾಗ ಮಳೆ ಬಾರದು. ವಾತಾವರಣ ಮೋಡಹಿತವಾಗಿರುತ್ತದೆ. ಕಡಿಮೆ ಮೇಘದಿಂದ ಕೂಡಿದ ಮಂದಮಾರುತಗಳು ಬೀಸುವ ಸಾಧ್ಯತೆಯೂ ಉಂಟು. ಈ ಮಾರುತದ ಆಗಮನದೊಡನೆ ವಾಯುಭಾರಮಾಪಕಗಳಲ್ಲಿನ ಪಾದರಸದ ಮಟ್ಟಕ್ರಮವಾಗಿ ಹೆಚ್ಚುತ್ತ ಹೋಗುತ್ತದೆ.(ಕೆ.ಎನ್.ಸೆ.)

ಆವರ್ತಲೇಖಕ: ನೋಡಿ - ಆಂದೋಲನಲೇಖಕ

ಆವರ್ತಿತ: ನಾಟ್ಟ ಪ್ರತ್ಯಂಗವಾದ ಜಂಘೆಯ ಹತ್ತು ವಿಧಗಳಲ್ಲಿ ಒಂದು. ಎಡಗಾಲು ಬಲಗಡೆಯೂ ಬಲಗಾಲು ಎಡಗಡೆಯೂ ಬರುವಂತೆ ಮಾಡಿ ಜಂಘೆಗಳನ್ನು ಸೇರಿಸಿ ನಡೆಯುವುದು. ವಿದೂಷಕ ನಡೆಯುವುದನ್ನು ತೋರಿಸುವಾಗ ಇದನ್ನು ವಿನಿಯೋಗಿಸಬೇಕು. (ಎಸ್.ಎನ್.ಕೆ.)

ಆವಾಹನೆ: ಪೂಜೆಯನ್ನು ಸ್ವೀಕರಿಸಲ್ಲು ಸನ್ನಿಹಿತವಾಹುವಂತೆ ದೇವತೆಗಳನ್ನು ಪ್ರಾರ್ಥಿಸುವ ಕರೆ. ಪೂಜಾರಂಭದಲ್ಲಿ ಮಾಡುವ ಕ್ರಿಯೆ ಪೂಜಾಂಗವಾದ ಹದಿನಾರು ವಿಧ ಉಪಚಾರಗಳಲ್ಲಿ ಮೊದನೆಯದು. ಉದ್ದಿಷ್ಟ ದೇವತಾ ಪ್ರಾರ್ಥನರೂಪ ಮಂತ್ರವನ್ನು ಉಚ್ಚರಿಸುವ ಮೂಲಕ ಆಹ್ವಾನಿಸಿ ಬಳಿಕ ಆಸನ ಸಮರ್ಪಣೆ ಮಾಡಬೇಕು. ವಿಗ್ರಹ ರೂಪದಲ್ಲು ಆಹ್ವಾನಿಸಿ ನಿತ್ಯದಲ್ಲೂ ಪೂಜಿಸುವುದು ಅನಿಯತಕಾಲಿಕ ಆವಾಹನೆ. ವ್ರತಾದಿಪೂಜೆಗಳಲ್ಲಿ ಗೊತ್ತಾದ ಕಾಲದವರೆಗೆ ಆವಾಹಿಸುವುದು ನಿಯತಕಾಲಿಕ. ಇದರಲ್ಲಿ ಮಂಡಲಾಕಾರದ ವೇದಿಕೆಯ ಮೇಲೆ ಗೊತ್ತಾದ ಸ್ಥಳಗಳಲ್ಲಿ ಆಯಾ ದೇವತೆಗಳನ್ನು ಆವಾಹಿಸಿ ಪೂಜೆ ನಡೆಸಬೇಕು. ಪುಣ್ಯಾಹಕ್ರಿಯೆಗಾಗಿ ಪೂರ್ಣಕುಂಭದಲ್ಲಿ ವರುಣನನ್ನು ಆವಾಹಿಸುವುದು, ಧಾನ್ಯಗಳಲ್ಲಿ ಗ್ರಹಗಳನ್ನು ಆವಾಹಿಸುವುದು, ದರ್ಭೆಯ ಕೂರ್ಚದಲ್ಲಿ ಪಿತೃಗಳನ್ನು ಆವಾಹಿಸುವುದು-ಇವು ಆವಾಹನೆಯ ಕ್ರಮದಲ್ಲಿ ಕಂಡುಬರುವ ಕೆಲವು ಭೇದಗಳು. ಸಂಧ್ಯಾವಂದನೆಯಲ್ಲಿ ಗಾಯತ್ರೀ ಜಪಾರಂಭಕ್ಕೆ ಮೊದಲು ಮಾಡುವ ಗಾಯಿತ್ರೀ ಸರಸ್ವತಿಯರ ಆವಾಹನೆ, ಶ್ರಾದ್ಧದಲ್ಲಿ ಬ್ರಾಹ್ಮಣರು ಸ್ವಯಂ ತಮ್ಮ ಮೇಲೆ ಮಾಡಿಕೊಳ್ಳು ಪಿತೃಗಳ ಆವಾಹನೆ, ಪ್ರತಿನಿತ್ಯದ ಹೋಮಾನಂತರದಲ್ಲಿ (ಔಪಾಸನಾಂತ್ಯದಲ್ಲಿ) ಮಾಡುವ ಅಗ್ನಿಯ ಆತ್ಮಸಮಾರೋಪಣರೊಪ ಆವಾಹನೆ-ಇವು ವ್ಯಕ್ತಿನಿಷ್ಠ ಆವಾಹನೆಗಳು. ಎಲ್ಲ ವಿಧದ ಆವಾಹನೆಗಳೂ ಪೂಜಾರಂಭದಲ್ಲಿ ಮಾಡುವ ಕ್ರಿಯೆಗಳಾದರೆ ಆತ್ಮಸಮಾರೋಪಣ ರೂಪ ಆವಾಹನೆ ಕೊನೆಯಲ್ಲಿ ಮಾಡುವಂಥದು. ಸಪ್ತವ್ಯಾಹೃತಿಗಲ್ಲಿ ಭೂಃ ಭುವಃ ಸುವಃ-ಎಂಬ ಮೊದಲ ಮೂರನ್ನು ಓಂಕಾರಪೂರ್ವಕ ಉಚ್ಚರಿಸಿ ಆವಾಹನೆ ಮಾಡುವುದು ಸಾಮಾನ್ಯ ನಿಯಮ. ಪಿತೃಗಳ ಆವಾಹನೆಯಲ್ಲಿ ತಿಲಾಕ್ಷತೆಯಿಂದಲೂ ದೇವತೆಗಳ ಆವಾಹನೆಯಲ್ಲಿ ಶೋಭನಾಕ್ಷತೆಯಿಂಲೂ (ಅರಿಸಿನ ಹಚ್ಚುದ ಅಕ್ಕಿ) ಪೂಜಿಸುತ್ತಾರೆ. ಸಾಲಿಗ್ರಾಮ ಪೂಜೆಯಲ್ಲಿ ಯಾವ ವಿಧವಾದ ಆವಾಹನೆಯೂ ಇಲ್ಲ.

ಜನಪದ ಸಮಾಜದಲ್ಲಿ ದೇವತಾರಾಧನೆಗಳ ಸಂದರ್ಭದಲ್ಲಿ ದೈವಾಹನೆ ಸರ್ವೇಸಾಮಾನ್ಯ ಆವಾಹನೆಗೆ ಮೊದಲು ಜಾಗಟೆ, ಗಂಟೆ, ತಮ್ಮಟೆಗಳ ನಿನಾದವನ್ನು ಉಂಟುಮಾಡುವುದು ಕ್ರಮ. ಜನತೆಯ ದುಃಖ ದುಮ್ಮಾನ, ಕಷ್ಟ ಸಂಕಷ್ಟಗಳಿಗೆ ಪರಿಹಾರ ಸೂಚಿಸುವ ಕೆಲಸವನ್ನು ಈ ದೈವಾಹನೆಗೊಂಡು ವ್ಯಕ್ತಿ ಮಾಡುತ್ತಾನೆ. ಹೀಗೆ ದೈವಾಹನೆಗೊಂಡು ಜನರಿಗೆ ಸ್ಪಂದಿಸುವ ವ್ಯಕ್ತಿಯನ್ನು 'ಗಣಮಗ' ಎಂದೂ ಕರೆಯುವುದುಂಟು. ದೈವಾವೇಶದಿಂದ ವಿಮುಕ್ತಿ ಹೊಂದುವಾಗ ಗ್ರಾಮದೇವತೆಗೆ ಮಂಗಳಾರತಿ ಮಾಡುವುದು ಪದ್ಧತಿ. (ಎನ್.ಎಸ್.ಕೆ.)