ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗ್ರೆಸ್, ಭಾರತ ರಾಷ್ಟ್ರೀಯ

೧೯ನೆಯ ಶತಮಾನದ ಪೂರ್ತಿ ಕಾಂಗ್ರೆಸ್ಸು ಸರ್ಕಾರದ ನೀತಿಯನ್ನು ಟೀಕಿಸುವುದರಲ್ಲೂ ಸುಧಾರಣೆಯ ಬೇಡಿಕೆಗಳನ್ನು ಮುಂದಿಡುವುದರಲ್ಲೂ ನಿರತವಾಗಿತ್ತು. ಯಾವಾಗಲೂ ಅದು ತನ್ನ ಗಾಂಭೀರ್ಯವನ್ನಾಗಲಿ ಮಿತವಾದನ್ನಾಗಲಿ ಬಿಟ್ಟು ಹೋಗಲಿಲ್ಲ. ಸ್ವಯಮಾಡಳಿತದ ಬೆಳೆವಣಿಗೆ, ಇಂಡಿಯ ಕೌನ್ಸಿಲಿನ ರದ್ದು, ಶಿಕ್ಷಣಾಭಿವೃದ್ಧಿ, ಸೈನ್ಯ ವೆಚ್ಚದಲ್ಲಿ ಕಡಿತ, ಕಾರ್ಯಾಂಗ ಶಾಸನಾಂಗಗಳ ಪ್ರತ್ಯೇಕತೆ, ಉನ್ನತ ಹುದ್ದೆಗಳಲ್ಲಿ ಭಾರತೀಯರ ನೇಮಕ_ಇವು ಅದರ ಕೆಲವು ಬೇಡಿಕೆಗಳು. ಯಾವುದೇ ಸಂದರ್ಭದಲ್ಲೂ ಅದು ಬ್ರಿಟಿಷ್ ರಾಜಕಾರಣಿಗಳ ಮುತ್ಸದ್ದಿತನದಲ್ಲಾಗಲಿ ನ್ಯಾಯ ದೃಷ್ಟಿಯಲ್ಲಾಗಲಿ ಔದಾರ್ಯದಲ್ಲಾಗಲಿ ನಂಬಿಕೆ ಕಳೆದುಳೊಳ್ಳಲಿಲ್ಲ. ರಾಜಭಕ್ತಿ ಪ್ರದರ್ಶನದಲ್ಲೂ ಅದು ಹಿಂದೆಗೆಯಲಿಲ್ಲ.

೧೮೯೬ರಲ್ಲಿ ಕಾಂಗ್ರೆಸು ಆರ್ಥಿಕ ಸಾಮಾಜಿಕ ದೃಷ್ಟಿಗಳನ್ನೂ ಕೂಡಿಸಿಕೊಂಡಿತು. ಭಾರತೀಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೈಗಾರಿಕಾ ಪ್ರದರ್ಶನವೊಂದನ್ನು ಏರ್ಪಡಿಸಿತು. ಸಮಾಜದ ಪೀಡೆಗಳನ್ನು ನಿವಾರಿಸುವ ಉದ್ದೇಶದಿಂದ ಸಾಮಾಜಿಕ ಸಮ್ಮೇಳವೊಂದನ್ನು ವ್ಯವಸ್ಥೆಗೊಳಿಸಿದ್ದೂ ಅದೇ ವರ್ಷ.

ಮೊದಮೊದಲು ಸರ್ಕಾರ ಕಾಂಗ್ರೆಸ್ ಚಳವಳಿಯ ಬಗ್ಗೆ ಪ್ರೋತ್ಸಾಹಕರ ನಿಲವನ್ನೇ ತಳೆದಿತ್ತು. ಅಸಹನೆಯಂತೂ ಇರಲೇ ಇಲ್ಲ. ೧೮೮೬ರಲ್ಲಿ ಕಲ್ಕತ್ತದ ಅಧಿವೇಶನಕ್ಕೆ ಬಂದಿದ್ದ ಕಾಂಗ್ರೆಸ್ ಸದಸ್ಯರನ್ನು ವನಭೋಜನವೊಂದಕ್ಕೆ ಕೂಡ ಆಗಿನ ಗವರ್ನರ್ ಜನರಲ್ ಲಾರ್ಡ್ ಡಫರಿನ್ ಕರೆದಿದ್ದ.

ಆದರೆ ಕ್ರಮೇಣ ಈ ನಿಲವು ಬದಲಾಯಿತು. ತನ್ನ ಅಧಿಕಾರ ಬಿಟ್ಟುಕೊಡುವ ಮುನ್ನ ಲಾರ್ಡ್ ಡಫರಿನನೇ ಕಾಂಗ್ರೇಸಿನ ನೀತಿ ವಿಧಾನಗಳ ಬಗ್ಗೆ ಅತೃಪ್ತಿ ಸೂಚಿಸಿದ. ಈ ಸುದ್ದಿ ಸರ್ಕಾರಿ ಕಚೇರಿಗಳಲ್ಲೆಲ್ಲ ಹಬ್ಬಿತು. ಅಧಿಕಾರಿಗಳ ಧೋರಣೆ ಬಿಗಿಯಾಯಿತು. ಕಾಂಗ್ರೆಸೂ ಡಫರಿನ್ ಆಶಿಸಿದ ರೀತಿಯಲ್ಲೇ ಮುಂದುವರಿಯಲಿಲ್ಲ. ಭಾರತದ ಜನರ ಆಶೋತ್ತರಗಳಿಗೆ ರೂಪುಕೊಟ್ಟು ಹೋರಾಡಲು ಅದು ಮುಂದೆ ಬಂತು. ಕ್ರಮೇಣ ಅದರ ಶಕ್ತಿ ವರ್ಧಿಸಿತು. ಹ್ಯೂಂ ಮಾತ್ರ ಭಾರತ ಹಾಗೂ ಪರದೇಶಗಳಲ್ಲಿ (ವಿಶೇಷತಃ ಬ್ರಿಟನ್ನಿನಲ್ಲಿ) ಕಾಂಗ್ರೆಸಿನ ಏಳ್ಗೆಗಾಗಿ ಶ್ರಮಿಸಿದ. ಅವನ ಪರಿಶ್ರಮದ ಫಲವಾಗಿ ಬ್ರಿಟಿಷ್ ಪಾರ್ಲಿಮೆಂಟಿನ ಕೆಲಸದಸ್ಯರ ಸಹಾನುಭೂತಿಯನ್ನು ಗಳಿಸಲಾಯಿತು. ೧೮೯೩ರಲ್ಲಿ ಲಾಹೋರಿನಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಅಂದಿನ ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯ ದಾದಾಭಾಯಿನವರೋಜಿ ವಹಿಸಿದ್ದರು.

ಆವರೆಗೆ ಮಂದಗಾಮಿಗಳ ನೇತೃತ್ವದಲ್ಲಿ ಸಂಘಟಿತವಾಗಿದ್ದ ಕಾಂಗ್ರೆಸ್ ಸಂಸ್ಥೆ ಚಿಕ್ಕಪುಟ್ಟ ಸುಧಾರಣೆಗಳಿಗಾಗಿ ಸರಕಾರಕ್ಕೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಿತ್ತು. ಅದರೆ ಅವಕ್ಕೆ ಸರ್ಕಾರ ಗಮನ ಕೊಡುತ್ತಿರಲಿಲ್ಲ. ಈ ಮಧ್ಯೆ ಹಿಂದೂ ಧರ್ಮಸುಧಾರಕರ ವಾಣಿ ಜನತೆಯನ್ನೆಚ್ಚರಿಸಿತು.

ಕಾಂಗ್ರೆಸ್ ಸಂಸ್ಥೆ ಕೈಗೊಳ್ಳುತ್ತಿದ್ದ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾದರು. ಇದರಿಂದ ಆ ವರೆಗೆ ಕೆಲವೇ ಸುಶಿಕ್ಷಿತರ ಸಂಘಟನೆಯಾಗಿದ್ದ ಕಾಂಗ್ರೆಸ್ ಸಂಸ್ಥೆ ರಾಷ್ಟ್ರೀಯ ಸಂಸ್ಥೆಯಾಗಿ ಮಾರ್ಪಟ್ಟಿತು.

ಬಂಗಾಳ ವಿಭಜನೆ : ಇಂಥ ಪರಿಸ್ಥಿತಿಯಲ್ಲಿ ಬ್ರಿಟಿಷರು ಭಾರತದಲ್ಲಿ ಒಡಕು ಹುಟ್ಟಿಸಲು ಪ್ರಯತ್ನಿಸಿದರು. ನಾಡಿನಲ್ಲಿ ಬೆಳೆಯುತ್ತಿದ್ದ ಏಕತೆಗೆ ಧಕ್ಕೆ ತರಲು ಮಾರ್ಗ ಹುಡುಕಿದರು. ಆ ವಿಚಾರದ ಫಲವಾಗಿಯೇ ಬಂಗಾಳ ವಿಭಜನೆಯ ಯೋಚನೆ ಬ್ರಿಟಿಷರಲ್ಲಿ ಬಂದದ್ದು.

ಬಂಗಾಳ ವಿಭಜನೆಯಿಂದ ಕಾಂಗ್ರೆಸಿನ ದೃಷ್ಟಿ ಧೋರಣೆಗಳಲ್ಲೂ ಬದಲಾವಣೆಯುಂಟಾಯಿತು. ಆವರಿಗೆ ಶಾಂತಿ ಸಹಕಾರಗಳಿಗೆ ಹೆಚ್ಚಿನ ಮಹತ್ತ್ವ ನೀಡಿದ್ದ ಕಾಂಗ್ರೆಸಿನ ಮಂದಗಾಮಿಗಳ ಪಾತ್ರ ಹಿರಿಯದಾಗಿತ್ತು. ಆದರೆ ಮುಂದೆ, ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ತೀರುತ್ತೇನೆ ಎಂಬ ಘೋಷಣೆಯೊಂದಿಗೆ ಲೋಕಮಾನ್ಯ ತಿಲಕರು ಕಾಂಗ್ರೆಸ್ಸಿನಲ್ಲಿ ಮಹತ್ತ್ವದ ಪಾತ್ರ ವಹಿಸಿದರು. ತಿಲಕರು ಮಂದಗಾಮಿಗಳ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಲ್ಲದೆ, ಪರದೇಶೀ ಬಹಿಷ್ಕಾರವೊಂದೇ ಕಾಂಗ್ರೆಸಿಗೆ ಉಳಿದ ಮಾರ್ಗವೆಂದು ಘೋಷಿಸಿದರು.

ಲೋಕಮಾನ್ಯ ತಿಲಕರ ನೇತೃತ್ವದಲ್ಲಿ ಕಾಂಗ್ರೆಸ್ ಸ್ವದೇಶಿಯ ಪರವಾಗಿಯೂ ಬಂಗಾಳ ವಿಭಜನೆಯ ವಿರುದ್ಧವಾಗಿಯೂ ಚಳವಳಿಗಳನ್ನು ಸಂಘಟಿಸಿತು. ಈ ಚಟುವಟಿಕೆಗಳೆಲ್ಲ ನ್ಯಾಯಬದ್ಧವಾದವೆಂದು ೧೯೦೬ರಲ್ಲಿ ಕಾಂಗ್ರೆಸ್ ಸಂಸ್ಥೆ ಗೊತ್ತುವಳಿಯೊಂದನ್ನು ಸ್ವೀಕರಿಸಿತು.

ಬಂಗಾಳ ವಿಭಜನೆ ಬ್ರಿಟಿಷರು ಭಾರತದಲ್ಲಿ ಅನುಸರಿಸುತ್ತಿದ್ದ 'ಒಡೆದು ಆಳುವ ಧೋರಣೆ'ಯ ಒಂದು ನಿದರ್ಶನ. ಇದರಿಂದ ಹಿಂದೂ ಮುಸ್ಲಿಂ ಏಕತೆಯನ್ನು ನಾಶಪಡಿಸಿ, ತಮ್ಮ ಸಾಮ್ರಾಜ್ಯವನ್ನು ಶಾಶ್ವತಗೊಳಿಸಲು ಅವರು ಪ್ರಯತ್ನಿಸಿದರು ಎಂದು ಹೇಳಬಹುದು.