ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ವಿಶ್ವಕೋಶ

           ಸಂಪುಟ ಆರು


  ಗಣಕ: ಪೀಟಿಕೆ: ಮನುಷ್ಯನ ಸಾಧನೆಗಳನ್ನು ಸ್ಥೂಲವಾಗಿ ಎರಡು ವಿಭಾಗಗಳಾಗಿ ವರ್ಗೀಕರಿಸಬಹುದು- ದೈಹಿಕ ಪರಿಶ್ರಮವನ್ನು ಬಯಸುವಂಥವು, ಮಾನಸಿಕ ಪರಿಶ್ರಮವನ್ನು ಅವಲಂಬಿಸುವಂಥವು. ಮೊದಲನೆಯ ಕೈಗಾರಿಕಾಕ್ರಾಂತಿಯು ದೈಹಿಕ ಪರಿಶ್ರಮವನ್ನು ಕಡಿಮೆ ಮಾಡುವ ವಿದ್ಯಮಾನವಾದದ್ದನ್ನು ಕಂಡಿದ್ದೇವೆ. ಕಾಲಕ್ರಮದಲ್ಲಿ ಇದು ಮಾನಸಿಕ ಶ್ರಮವನ್ನು ಕಡಿಮೆಮಾಡುವ ಉದ್ದೇಶವನ್ನುಳ್ಳ ಎರಡನೆಯ ಕೈಗಾರಿಕಾಕ್ರಾಂತಿಗೆ ಯುಕ್ತ ವೇದಿಕೆಯನ್ನು ಸಿದ್ಧಗೊಳಿಸಿತು. ಗಣಕದ ಜನ್ಮ ಆದದ್ದು ಈ ಸನ್ನಿವೇಶದಲ್ಲಿ. 
  ತಂತಿಗಳು, ಟ್ರಾನ್ಸಿಸ್ಟರುಗಳು, ಕಾಂತಪಟ್ಟಿಗಳು (ಮ್ಯಾಗ್ನೆಟಿಕ್ ಟೇಪ್ಸ್), ಕಾಂತಕೋಶಗಳು, ಇವೇ ಮೊದಲಾದ ಘಟಕಗಳ ಸಂಕಲಿತ ಯಂತ್ರವೇ ಗಣಕ. ಇವುಗಳ ಜೋಡಣೆ ಒಂದು ನಿರ್ದಿಷ್ಟ ಕ್ರಮದಲ್ಲಿ ಉಂಟು. ತತ್ಪರಿಣಾಮವಾಗಿ ಗಣಕಕ್ಕೆ ಉಣಿಸಿದ ಸಂಖ್ಯೆಗಳನ್ನು ಅದು ನೆನಪಿನಲ್ಲಿಟ್ಟುಕೊಂಡು ಅವನ್ನು ಕೂಡುವ, ಕಳೆಯುವ, ಗುಣಿಸುವ, ಭಾಗಿಸುವ, ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ವರ್ಗಾಯಿಸುವ ಇವೇ ಮುಂತಾದ ಕುಶಾಲ ಪರಿಕರ್ಮಗಳನ್ನು ನಿರ್ವಹಿಸಬಲ್ಲದು. ಮೇಲೆ ಹೇಳಿರುವ ಮೂರು ಪರಿಕರ್ಮಗಳ ಎಂದರೆ, ಜ್ಞಾಪಕೀಕರಣಸಾಮರ್ಥ್ಯ, ಅಂಕಪರಿಕರ್ಮಗಳು, ಸಂಖ್ಯೆಗಳನ್ನು ವರ್ಗಾಯಿಸಬಲ್ಲ ಸಾಮರ್ಥ್ಯ-ನಿರ್ವಹಣೆ ಮಾತ್ರ ಒಂದು ಗಣಕದ ಪ್ರಧಾನಸಿದ್ಧ ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಮಿಕ್ಕುಳಿದ ಪ್ರತಿಯೊಂದು ಸಿದ್ಧಿಯೂ ಮಾನವಗಣಕಕ್ಕೆ ಒದಗಿಸುವ ಕ್ರಮವಿಧಿಯ (ಪ್ರೋಗ್ರಾಂ) ಪರಿಣಾಮವಾದದ್ದು. ಒಂದು ನಿರ್ದಿಷ್ಟವಾದ ಸರಣೆಯನ್ನು ಅನುಸರಿಸಿ ಮೇಲಿನ ಮೂರು ವಿಧಾನಗಳಲ್ಲಿ ಗಣಕಕ್ರಿಯೆ ಎಸಗುವಂತೆ ಮನುಷ್ಯ ಅದಕ್ಕೆ ನಿರ್ದೇಶನಗಳನ್ನು ವಿಧಿಸುತ್ತಾನೆ. ಈ ತರಹದ ಮಾನವ-ಯಂತ್ರ ಅಂತರಕ್ರಿಯೆಗಳಿಂದ ನಮಗೆ ಅನ್ನಿಸುವುದಿಷ್ಟು; ತನ್ನ ಯಜಮಾನನನ್ನೆ ಸೋಲಿಸುವಷ್ಟು ಚಾಕಚಕ್ಕದಿಂದ ಗಣಕ ಚದುರಂಗವನ್ನು ಆದಬಲ್ಲುದು; ಮನುಷ್ಯ ಎಂದೂ ಬಿಡಿಸಲಾಗದ ಒಂದು ಜಟಿಲ ಅರೇಖೀಯ ಅವಕಲ ಸಮೀಕರಣವನ್ನು(ನಾನ್ ಲೀನಿಯರ್ ದಿಫರೆನ್ಸಿಯಲ್ ಇಕ್ವೇಷನ್) ಗಣಕ ಬಿಡಿಸಬಲ್ಲದು; ಸಂಗೀತವನ್ನು ಅದು ರಚಿಸಬಲ್ಲದು; ಷೇಕ್ಸ್ಪಿಯರನ ಹೆಸರಿನಲ್ಲಿರುವ ಸಮಸ್ತ ಕೃತಿಗಳನ್ನೂ ಒಬ್ಬ ವ್ಯಕ್ತಿ ರಚಿಸಿದನೇ ಅಥವಾ ಭಿನ್ನ ವ್ಯಕ್ತಿಗಳು ರಚಿಸಿದರೇ ಎಂದು ಗಣಕ ವಿಷ್ಲೇಶಿಸಬಲ್ಲುದು. ಗಣಕಗಳ ಸಾಮರ್ಥ್ಯವನ್ನು ಕುರಿತು ತೀರ ಸುಶಿಕ್ಷಿತರಲ್ಲೂ ಇರುವ ಭಾವ ಬೆರಗು; ಪ್ರಾಸಾನುಪ್ರಾಸಗಳು ಸಂಗತವಾಗಿರುವ ಗಣಕರಚಿತ ಪದ್ಯವನ್ನು ಕೇಳುವಾಗ ಇಂಥವರು ಆಶ್ಚರ್ಯಚಕಿತರಾಗುತ್ತಾರೆ. ಇನ್ನು ಸಾಮಾನ್ಯ ವ್ಯಕ್ತಿಗಳಿಗೆ ಗಣಕವನ್ನು  ಕುರಿತು ಇರುವ ಭಾವ ಒಂದೇ-ಭಯಮಿಶ್ರಿತ ಗೌರವ. ಈಗೀಗ ಭಯ ಕಡಿಮೆಯಾಗಿ ಅದು ಜೀವನದ ಒಂದುಭಾಗವಾಗಿಬಿಟ್ಟಿದೆ. ತಿಳಿವಿದ್ದಲ್ಲಿ ಅಚ್ಚರಿಗೆ ಸ್ಥಾನವಿಲ್ಲ, ವಿಶ್ಲೇಷಣೆಯಿದ್ದಲ್ಲಿ ಮೂಢನಂಬಿಕೆಗೆ ಸ್ಥಾನವಿಲ್ಲ ಎಂಬುದೊಂದು ಹಳೆಯ ಹೇಳಿಕೆ.
  ಗಣಕವನ್ನು ಕುರಿತಂತೆ ಇಂಥಾ ತಿಳಿವನ್ನೂ ವಿಶ್ಲೇಷಣೆಯನ್ನೂ ಕೊಡಲು ಪ್ರಯತ್ನಿಸಿದೆ. ಮೊದಲಾಗಿ ಗಣಕತಂತ್ರ ವಿಜ್ಞಾನದ ಐತಿಹಾಸಿಕ ಬೆಳವಣಿಗೆಯನ್ನು ಅವಲೋಕಿಸಲಾಗಿದೆ.
  ಗಣಕಗಳ ಇತಿಹಾಸ: ಕಾಲಾನುಕ್ರಮದಲ್ಲಿ ಬಳಕೆಗೆ ಬಂದಂಥ ನೋಮೋಗ್ರಾಮುಗಳು, ಸ್ಲೈಡ್ ರೂಲುಗಳು ಮುಂತಾದ ಗಣನಸಹಾಯಕಗಳು ಕೂಡ ಸಾದೃಶ್ಯೋಪಕರಣಗಳೇ. ಕಾರಣ, ಸರ್ವೇಕ್ಷಣಕಾರನ ಸಾಧನಗಳಂತೆ ಇವು ಸಹ ಆಧರಿಸಿರುವುದು ಬೀಜಗಣಿತೀಯ ಇಲ್ಲವೇ ಲಘುಗಣಕೀಯ ಉತ್ಪನ್ನಗಳಂಥ ಅವಿಚ್ಛಿನ್ನ ರಾಶಿಗಳನ್ನು ಇಂಥ ಉಪಕರಣಗಳನ್ನು ಸಾದೃಶ್ಯಗಣನ ಸಹಾಯಕಗಳು ಎಂದು ವರ್ಗೀಕರಿಸಲಾಗಿದೆ.
  ಮನುಷ್ಯ ತನ್ನ ಹತ್ತು ಬೆರಳುಗಳ ನೆರವಿನಿಂದ ಎಣಿಸಲು ತೊಡಗಿದಾಗಲೇ ಗಣಕದ ಜನನ ಆಯಿತು. ಬೆರಳೆಣಿಕೆಯ ವಿಧಾನ ಪ್ರಶ. ಪೂ. 600 ರಷ್ತು ಹಿಂದೆಯೇ ಮಣಿಚೌಕಟ್ಟಿನ ಉಪಜ್ಞೆಗೆ ಕಾರಣವಾಯಿತು. ಇದು ಅಂಕಗಣನ ಸಹಾಯಕಗಳ ಪ್ರಾರಂಭ. ಸಂಖ್ಯೆಗಳಂಥ ಪೃಥಕ್ಕಾದ ರಾಶಿಗಳ ಗಣನೆಗೆ ಇವು ನೆರವಾಗುತ್ತವೆ.