ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋದಾವರಿ ಭೂಮಿಯಲ್ಲಿ ಮೇಯಲು ಬಿಟ್ಟರು. ಗೌತಮ ಹಸುವನ್ನು ಹೊಡೆಯಲು ಇಷ್ಟವಿಲ್ಲದೆ. ಒಂದು ನೀರನ್ನು ಹಸುವಿನ ಮೇಲೆ ಚೆಲ್ಲಿದ. ಆ ಹಸು ಅಲ್ಲಿಯೇ ಸತ್ತಿತ್ತು. ಇದನ್ನು ನೋಡಿ ಋಷಿಗಳು ಗೌತಮನು ಗೋಹತ್ಯೆ ಮಾಡಿದನೆಂದು ಅವನ ಮನೆಯಲ್ಲಿ ಅನ್ನವನ್ನು ತಿನ್ನಬಾರದೆಂದೂ ನಿಂದಿಸಿದರು. ಆಗ ಗೌತಮ ಋಷಿಗಳನ್ನು ಬೇಡಿಕೊಂಡು ತಡೆದು, ಈಶ್ವರನನ್ನು ಪ್ರಾರ್ಥಿಸಿದ. ಆಗ ಈಶ್ವರನು ಕಾಣಿಸಿಕೊಂಡು ತನ್ನ ಜಟೆಯಿಂದ ಒಂದು ಹಿಡಿಯಷ್ಟು ಕೂದಲನ್ನು ಕಿತ್ತು. ಗೌತಮನಿಗೆ ಕೊಟ್ಟು ಅದರಲ್ಲಿ ಗಂಗಾ ನೀರನ್ನು ಆ ಸತ್ತ ಗೋವಿನ ಮೇಲೆ ಹಿಂಡಲು ಹೇಳಿದ. ಗೌತಮ ಈಶ್ವರನ ಅಣತಿಯಂತೆ ಮಾಡಲಾಗಿ ಆ ಗೋವು ಬದುಕಿತು. ಗಂಗಾಜಲ ಪ್ರವಾಹ ರೂಪವಾಗಿ ಹರಿಯತೊಡಗಿತು. ಇದರಿಂದ ಈ ನದಿಗೆ ಗೌತಮಿಯೆಂದೂ, ಸತ್ತ ಗೋವು ಬದುಕಿ ನದಿ ರೂಪದಿಂದ ಹರಿಯ ತೊಡಗಿದರಿಂದ ಗೋದಾವರಿಯೆಂದೂ, ಭಗೀರಥ ಗಂಗೆಯನ್ನು ತರುವುದಕ್ಕೆ ಮುಂಚೆ ನಡೆದುದಾಗಿ ವೃದ್ಧ ಗಂಗೆಯೆಂದೂ ಹೆಸರು. ಈಗಲೂ ‍‍‍‍‍ಔದುಂಬರ ವೃಕ್ಷದ ಕೆಳಗೆ ಕುಂಡದಲ್ಲಿ ಮೂಲಗಂಗೆಯನ್ನು ನೋಡಬಹುದೆನ್ನಲಾಗಿದೆ. ಇದೇ ಮುಂದೆ ಗಿರಿಗರ್ಭವನ್ನು ಹೊಕ್ಕು ಬ್ರಹ್ಮಗಿರಿಯ ಪೂರ್ವಭಾಗದಲ್ಲಿ ಪ್ರಕಟವಾಯಿತೆಂದು ನಂಬಿಕೆ. ಆ ಸ್ಥಳದಲ್ಲಿ ಗೋಮುಖವನ್ನು ಮೇಲ್ಭಾಗದಲ್ಲಿ ಗಂಗೆಯ ಚಿಕ್ಕ ದೇವಸ್ಥಾನವನ್ನೂ ಕಟ್ಟಲಾಗಿದೆ. ಶ್ರೀರಾಮ ವನವಾಸದಲ್ಲಿದ್ದಾಗ ಗೋದಾವರಿಯ ಪಂಚವಟೀ ತೀರದಲ್ಲಿ ವಾಸವಾಗಿದ್ದ; ವಾಲ್ಮೀಕಿಗೆ ರಾಮಾಯಣ ಬರೆಯಲು ಸ್ಫೂರ್ತಿ ದೊರಕಿದ್ದು ಗೋದಾವರಿಯ ತೀರದಲ್ಲೇ, ಮಹಾಭಾರತದಲ್ಲಿ ಇದನ್ನು ಸಪ್ತಗೋದಾವರಿ ಎಂದು ಉಲ್ಲೇಖಿಸಲಾಗಿದೆ. ಇದರ ದಂಡೆಯ ಮೇಲೆ ದಶಶ್ವಮೇಧಿಕ, ಗೋವರ್ಧನ, ಸಾವಿತ್ರೀ, ವಿದರ್ಭ, ಮಾರ್ಕಂಡೇಯ, ಕಿಷ್ಕಿಂಧೆ ಮುಂತಾದ ತೀರ್ಥಗಳಿದ್ದುವೆಂದು ತಿಳಿದುಬರುತ್ತದೆ. ಬ್ರಹ್ಮಪುರಾಣದಲ್ಲಿ ಗೋದಾವರಿಯ ೧೦೦ ತೀರ್ಥಗಳ ಉಲ್ಲೇಖವಿದೆಯೆನ್ನಲಾಗಿದೆ. ಅವುಗಳಲ್ಲಿ ತ್ರ್ಯಂಬಕ, ಕುಶಾವರ್ತ, ಜನಸ್ಥಾನ, ಗೋವರ್ಧನ, ಪ್ರವರಾಸಂಗಮ ಮತ್ತು ನಿವಾಸಪುರ ಇವು ವಿಶೇಷ ಪುಣ್ಯಪ್ರದಗಳೆಂದು ಪರಿಗಣಿತವಾಗಿವೆ.ಗೋದಾವರಿಯ ಪ್ರವಾಹಗಳಾದ ವಶಿಷ್ಯ, ವ್ಯೆನತೇಯ ಮತ್ತು ಗೌತಮಿ ಇವುಗಳಿಂದ ನಿರ್ಮಿತವಾದ ಅಮಲಾಪುರ ದ್ವೀಪದಲ್ಲಿ ಭಾನುವಾರ ಸ್ನಾನ ಮಾಡುವುದು ಪುಣ್ಯಪ್ರದವೆಂದು ನಂಬಿಕೆ. ಇದಕ್ಕಾಗಿ ಯಾತ್ರಿಕರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಅಲ್ಲಿಯ ಶಿವದೇವಾಲಯದ ಲಿಂಗನ್ನು ನರ್ಮದಾ ನದಿಯಿಂದ ಗರುಡ ತಂದನೆಂಬುದು ಪುರಾಣಪ್ರೋಕ್ತವಾದ ವಿಚಾರ.ಗೋದಾವರಿ ನದೀತೀರದಲ್ಲಿ ಅನೇಕ ತೀರ್ಥಕ್ಷೇತ್ರಗಳಿವೆ. ಧವಳೇಶ್ವರಂ ಒಂದು ಪ್ರಸಿದ್ಧ ಕ್ಷೇತ್ರ.ಮಾಘಮಾಸದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಹತ್ತಿರದಲ್ಲೇ ಒಂದು ಬೆಟ್ಟವಿದೆ. ಅಲ್ಲಿ ನಾರದಮುನಿಗಳು ವಾಸವಾಗಿದ್ದರೆಂದು ಪ್ರತೀತಿ. ಕಲ್ಲಿನ ಮೇಲೆ ಶ್ರೀರಾಮ ಸೀತೆಯರ ಪಾವಲಿಯಾಕಾರದ ಒಂದು ಮುದ್ರೆಯುಂಟು. ರಾಜಮಹೇಂದ್ರಿಯಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಪುಷ್ಕರ ಎಂಬ ಸ್ನಾನ ಮಹೋತ್ಸವ ನಡೆಯುತ್ತದೆ. ಶ್ರೀರಾಮ ಭದ್ರಾಚಲದಲ್ಲಿ ಬಂದು ವಾಸವಾಗಿದ್ದರಿಂದ ಆ ಸ್ನಾನ ಪವಿತ್ರವೆಂದು ಪರಿಗಣಿಸಲಾಗಿದೆ. ಅಲ್ಲಿಂದ ೫೨ಕಿಮೀ ದೂರದಲ್ಲಿ ಶ್ರೀರಾಮನ ಪರ್ಣಕುಟಿ ಇತ್ತೆಂದೂ ಅಲ್ಲಿಂದಲೇ ರಾವಣ ಸೀತೆಯನ್ನು ಅಪಹರಣ ಮಾಡಿದನೆಂದೂ ಪ್ರತೀತಿಯುಂಟು. ನಾಸಿಕ ಮತ್ತು ಪೈಠಣ ಮತ್ತೆರಡು ಪವಿತ್ರ ಕ್ಷೇತ್ರಗಳು. ಗೋದಾವರಿ ನದಿಗೆ ದಕ್ಷಿಣ ಗಂಗಾ ಎಂದು ಹೆಸರು ಬಂದಿರುವಂತ, ಅದರ ತೀರದಲ್ಲಿ ಪವಿತ್ರ ಕ್ಷೇತ್ರಗಳು ದಕ್ಷಿಣ ಕಾಶಿಗಳೆಂದು ಹೆಸರಾಗಿವೆ. ಪವಿತ್ರ ಗೋದಾವರಿ ಸ್ಮರಣೆ ಮಾತ್ರದಿಂದಲೇ ಮನುಷ್ಯನ ಸರ್ವ ಪಾಪಗಳೂ ನಾಶವಾಗುತ್ತವೆಂಬುದು ಹಿಂದೂಗಳ ನಂಬಿಕೆ. ರಾಮ ಈ ತೀರದಲ್ಲೇ ಪಿತೃಶ್ರಾದ್ಧ ಮಾಡಿದನಂತೆ. ಬ್ರಹ್ಮಾಂಡ ಪುರಾಣ ಮತ್ತು ಸ್ಮಾಂದ ಪುರಾಣಗಳಲ್ಲಿ ಗೋದಾವರಿ ಮಹಿಮೆಯನ್ನು ವಿಶೇಷವಾಗಿ ವರ್ಣಿಸಲಾಗಿದೆ. ಗೋದಾವರಿಯ ನೀರು ಆರೋಗ್ಯದಾಯಕವೆಂದು ಹಲವರ ನಂಬಿಕೆ. ಪಿತ್ತ ಮತ್ತು ರಕ್ತದ ವ್ಯಾಧಿಗಳು, ಕುಷ್ಟರೋಗ-ಇವು ಗೋದಾವರೀ ನೀರಿನಿಂದ ವಾಸಿಯಾಗುತ್ತವೆನ್ನಲಾಗಿದೆ. ಇದು ಪಥ್ಯಕರವಾದ್ದರಿಂದ ಹಸಿವು ಹೆಚ್ಚಿಸುತ್ತದೆಂದು ರಾಜನಿಘಂಟಿನಲ್ಲಿ ಹೇಳಿದೆ.