ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾರ್ಡ್ನರ್, ಸ್ಯಾಮ್ಯುಯಲ್ ರಾಸನ್-ಗಾರ್ನೆಟ್

೧೮೩೧ರಲ್ಲಿ ಸೈಯದ್ ಅಹಮದನ ನೇತೃತ್ವದಲ್ಲಿ ಮಹಮ್ಮದಿಯರು ಸಿಖ್ಖರ ವಿರುದ್ಧ ದಂಗೆ ಎದ್ದು ಮನ್ಸೆಹ್ರಾದ ಬಳಿಯ ಬಾಲಾಕೋಟ್ ಎಂಬಲ್ಲಿ ನಡೆಸಿದ ಧಾಳಿಯಲ್ಲಿ ಸಿಖ್ ಸೈನಿಕರಿಂದ ಅಹಮದ್ ಕೊಲ್ಲಲ್ಪಟ್ಟದ್ದನ್ನು ಕೆಲವೇ ಗಜಗಳ ದೂರದಲ್ಲಿ ನಿಂತು ನೋಡಿದೆನೆಂದು ಗಾರ್ಡ್ನರ್ ಹೇಳಿಕೊಂಡಿದ್ದಾನೆ. ಆಗ ಯಾವ ದೇವದೂತನೂ ಈ ವೀರನನ್ನು ದಿವ್ಯಲೋಕಕ್ಕೆ ಕೊಂಡೊಯ್ಯಲು ಬರಲಿಲ್ಲವೆಂದು ವ್ಯಂಗ್ಯವಾಗಿ ನುಡಿದಿದ್ದಾನೆ. ೧೮೩೯ರ ಅಕ್ಟೋಬರ್ ೯ರಂದು ರಣಜಿತ್ ಸಿಂಗ್ನ ಮಗನಾದ ಖಡಕ್ಸಿಂಗ್ನ ಮಂತ್ರಿ ಜೇತ್ಸಿಂಗ್ ಬಾಜ್ವಾನನ್ನು ಧ್ಯಾನ್ಸಿಂಗ್ ಡೋಗ್ರಾ ಎಂಬವನು ರಾಜಕುಮಾರನ ಎದುರಿನಲ್ಲೇ ಇರಿದು ಕೊಂದುದನ್ನು ಕಂಡೆನೆಂಬುದು ಅವನ ಹೇಳಿಕೆ. ಖಡಕ್ಸಿಂಗ್ ೧೮೪೦ರ ನವೆಂಬರ್ ೫ರಂದು ಮರಣ ಹೊಂದಿದಾಗ, ಅವನ ದೇಹವನ್ನೂ ಅವನೊಡನೆ ಸತ್ತಿ ಹೋದ ಅವನ ಇಬ್ಬರು ಪತ್ನಿಯರ ದೇಹಗಳನ್ನೂ ಚಿತೆಗೆ ಒಪ್ಪಿಸಿ ಅವನ ಮಗ ನವ್ನಿಹಲ್ಸಿಂಗ್ ಅರಮನೆಗೆ ಹಿಂದಿರುಗುತ್ತಿದ್ದಾಗ ಕೋಟೆಯ ದ್ವಾರದ ಕಮಾನು ಕುಸಿದು ನವ್ನಿಹಲ್ಸಿಂಗ್ ಸತ್ತನೆಂದು ಹೇಳುತ್ತಾನೆ. ಗಾರ್ಡ್ನರ್ನ ಬಖೈರಿನಲ್ಲಿರುವ ಇಂಥ ಅನೇಕ ಹೇಳಿಕೆಗಳಲ್ಲಿ ಹಲವು ಸತ್ಯಕ್ಕೆ ದೂರವೆಂದು ಇತಿಹಾಸಕಾರರು ತೋರಿಸಿಕೊಟ್ಟಿದ್ದಾರೆ.

ಗಾರ್ಡ್ನರ್, ಸ್ಯಾಮ್ಯುಯೆಲ್ ರಾಸನ್: ೧೮೨೯-೧೯೦೨. ಇಂಗ್ಲಿಷ್ ಇತಿಹಾಸಕಾರ. ಆಲಿವರ್ ಕ್ರಾಮ್ವೆಲ್ ವಂಶಸ್ಥ. ೧೮೨೯ರ ಮಾರ್ಚ್ ೪ರಂದು ಹ್ಯಾಂಪ್ ಷಿರ್ನ ಆರ್ಲೆಸ್ಫರ್ಡ್ನಲ್ಲಿ ಜನಿಸಿದ. ವಿಂಚೆಸ್ಟರಿನಲ್ಲೂ ಆಕ್ಸ್ಫರ್ಡಿನ ಕ್ರೈಸ್ಟ್ ಚರ್ಚ್ ಕಾಲೇಜಿನಲ್ಲೂ ವಿಧ್ಯಾಬ್ಯಾಸ ಮಾಡಿ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಆಧುನಿಕ ಇತಿಹಾಸ ಪ್ರಾಧ್ಯಾಪಕನಾಗಿದ್ದ(೧೮೭೧-೮೫) ೧೮೮೪ರಲ್ಲಿ ಆಲ್ ಸೋಲ್ಸ್ ಕಾಲೇಜಿನ ಮತ್ತು ಮೆರ್ಟನ್ ಕಾಲೇಜಿನ ಫೆಲೊ ಆಗಿ ಆಯ್ಕೆಗೊಂಡ.

ಗಾರ್ಡ್ನರ್ ಇಂಗ್ಲೆಂಡಿನ ಅಂತರ್ಯುದ್ಧ ಕಾಲದ ಇತಿಹಾಸವನ್ನು ವಿಶೇಷವಾಗಿ ಅಧ್ಯಯನಮಾಡಿದ. ಈ ಕಾಲಕ್ಕೆ ಸಂಬಂಧಿಸಿದಂತೆ ಹಲವಾರು ಸ್ಥಳಗಳಲ್ಲಿದ್ದ ಮೂಲದಾಖಲೆಗಳನ್ನು ಪರಿಶೀಲಿಸಿ ೧೮೬೩ ರಿಂದ ೧೯೦೦ರವರೆಗೆ ಹಲವಾರು ಉದ್ಗ್ರಂಥಗಳನ್ನು ರಚಿಸಿದ. ಒಂದನೆಯ ಜೇಮ್ಸನ ಸಿಂಹಾಸನಾರೋಹಣ ಕಾಲದಿಂದ ಅಂತರ್ಯುದ್ಧದ ಆರಂಭದವರೆಗಿನ (೧೬೦೩-೪೨) ಕಾಲದ ಇತಿಹಾಸವನ್ನು ಕುರಿತು ಹತ್ತು ಸಂಪುಟಗಳೂ(೧೮೮೩-೮೪) ಅಂತರ್ಯುದ್ಧವನ್ನು ಕುರಿತು ಮೂರು ಸಂಪುಟಗಳೂ (೧೮೮೬-೯೩) ಹೊರಬಿದ್ದವು. ಕಾಮನ್ವೆಲ್ತ್ ಮತ್ತು ಪ್ರೊಟೆಕ್ಟೊರೇಟ್ ಕಾಲದ ಸಮಗ್ರ ಚರಿತ್ರೆಯೂ (೧೬೪೯-೬೦) ನಾಲ್ಕು ಸಂಪುಟಗಳಲ್ಲಿ ಪ್ರಕಟವಾಯಿತು(೧೯೦೩).

ಗಾರ್ಡ್ನರನ ಕೃತಿಗಳನ್ನು ವಿಮರ್ಶಕರು ಮೊದಮೊದಲು ಒಪ್ಪಲಿಲ್ಲ. ಆದರೆ ಇವನ ವಿಶ್ಲೇಷಣೆ ದೃಷ್ಟಿ ಕ್ರಮೇಣ ಮೆಚ್ಚುಗೆ ಗಳಿಸಿತು. ೧೭ನೆಯ ಶತಮಾನದ ಸಾಮಾಜಿಕ ಆರ್ಥಿಕ ಬೌದ್ಧಿಕ ವಿದ್ಯಮಾನಗಳನ್ನು ಇವನು ಸೂಕ್ಷ್ಮವಾಗಿ ಗ್ರಹಿಸಿದ್ದ. ಇಂಗ್ಲೆಂಡಿನ ರಾಷ್ಟ್ರೀಯ ಭಾವನೆಯನ್ನು ಪುರಸ್ಕರಿಸಿ ಬರೆದ ಇವನ ಇತಿಹಾಸ ಈ ಧೋರಣೆಯಿಂದಾಗಿ ಮಹತ್ವ ಗಳಿಸಿದೆ. ಕಾಲಾನುಕ್ರಮಣಿಕೆಯ ವಿಧಾನವನ್ನನುಸರಿಸಿ, ವಿದ್ಯಮಾನದ ಯಾವ ಮುಖವನ್ನೂ ಕಡೆಗಣಿಸದೆ ಆತ ಮಾಡಿರುವ ನಿರಾಪಣೆಯಿಂದಾಗಿ ಇಂಗ್ಲೆಂಡಿನ ಇತಿಹಾಸದಲ್ಲೇ ಇದು ಅತ್ಯಂತ ಪರಿಚಿತವಾದ ಕಾಲವೆನಿಸಿದೆ. ಮೇಲೆ ಹೇಳಿದ ಗ್ರಂಥಗಳಲ್ಲದೆ ಇನ್ನೂ ಹಲವಾರು ಕೃತಿಗಳನ್ನು ಇವನು ರಚಿಸಿದ್ದಾನೆ. ಇತಿಹಾಸ ಲೇಖನಕ್ಕಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದ ಗಾರ್ಡ್ನರನ ಬಾಳು ಆರ್ಥಿಕವಾಗಿ ಅಷ್ಟೇನು ತೃಪ್ತಿಕರವಾಗಿರಲಿಲ್ಲ. ೧೮೮೨ರ ಅನಂತರ ಇವನಿಗೆ ದೊರಕಿದ ವಿಶ್ರಾಂತಿ ವೇತನದಿಂದ ಸ್ವಲ್ಪ ಅನುಕೂಲವಾಯಿತು. ಇವನ ೬೫ನೆಯ ವಯಸ್ಸಿನಲ್ಲಿ ಆಕ್ಸಫರ್ಡಿನಲ್ಲಿ ರೀಜೆಯಸ್ (ವಿದ್ವತ್ ಪೀಠಾಧಿಕಾರಿ) ಪ್ರಾಧ್ಯಾಪಕನ ಸ್ಥಾನವನ್ನು ನೀಡಿದಾಗ ಈತ ಇದನ್ನು ಸ್ವೀಕರಿಸಲಿಲ್ಲ. ಇತಿಹಾಸ ರಚನೆಯ ಕಾರ್ಯಕ್ಕೆ ಅದರಿಂದ ಅಡ್ಡಿಯಾದೀತೆಂಬುದು ಕಾರಣ. ಗಾರ್ಡ್ನರ್ ೧೯೦೨ರಲ್ಲಿ ತೀರಿಕೊಂಡ.

ಗಾರ್ತ್, ಸರ್ ಸ್ಯಾಮ್ಯುಯೆಲ್: ೧೬೬೧-೧೭೧೮. ವೈದ್ಯ ಹಾಗೂ ಕವಿ. ಜನನ ಯಾರ್ಕ್ ಷೈರಿನ ಗಣ್ಯ ಕುಟುಂಬದಲ್ಲಿ. ಕೇಂಬ್ರಿಜ್ನಲ್ಲಿ ಉಚ್ಚ ಶಿಕ್ಷಣ ಮುಗಿಸಿ, ಲಂಡನ್ ವೈದ್ಯ ವಿದ್ಯಾಲಯದ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಒಳ್ಳೆಯ ಸ್ವಭಾವ, ವಾಕ್ಕೌಶಲ. ವಿದ್ವತ್ತು, ಮತ್ತು ಜನಸೇವಾ ಪ್ರವೃತ್ತಿಯಿಂದಾಗಿ ಇವನ ವೃತ್ತಿ, ವ್ಯಾಪ್ತಿಗಳೆರಡೂ ವೃದ್ಡಿಸಿದವು. ರಾಜಕೀಯವಾಗಿ ಈತ ಹ್ವಿಗ್ ಬಣಕ್ಕೆ ಸೇರಿದವನು. ಪ್ರಸಿದ್ಧ ಪ್ರಬಂಧಕಾರನಾದ ಅಡಿಸನ್ ಮತ್ತು ಕವಿ ಪೋಪ್ ಈತನ ಗೆಳೆಯರು. ತನ್ನ ನಿವೃತ್ತಿಯ ಸಮಯದಲ್ಲಿ ಗಾರ್ತ್ ಒಂದನೆಯ ಜಾರ್ಜ್ ದೊರೆಗೆ ವೈದ್ಯನಾಗಿದ್ದು ಅವನಿಂದ ನೈಟ್ ಪದವಿಯನ್ನು ಪಡೆದ(೧೭೧೪).

ಗಾರ್ತ್ ಬರೆದ ಡಿಸ್ಪೆನ್ಸರಿ(೧೬೯೯) ಎಂಬ ಅಣುಕು ಕವನ ಆ ಕಾಲಕ್ಕೆ ಬಹು ಪ್ರಸಿದ್ಧವಾಗಿತ್ತು. ಈತ ತನ್ನ ಗೆಳೆಯರಾದ ಅಡಿಸನ್, ಪೋಪ್ ಮೊದಲಾದವರ ನೆರವಿನಿಂದ ಓವಿಡ್ಡನ ಮೆಟಮಾರ್ಫಸಿಸ್ ಎಂಬ ಕೃತಿಯನ್ನು ಅನುವಾದ ಮಾಡಿದ್ದಾನೆ.

ವೈದ್ಯಕೀಯ ಸಹಾಯ ಬಡಬಗ್ಗರಿಗೆ ಉಚಿತವಾಗಿ ದೊರೆಯಬೇಕು ಎಂಬ ವಿಷಯ ಪ್ರಚಲಿತವಾಗಿದ್ದ ಆ ಕಾಲದಲ್ಲಿ ಬಹಳಷ್ಟು ಜನ ವೈದ್ಯರು ಆ ಅಭಿನಂದನೀಯ ಉದ್ದೇಶಕ್ಕೆ ಬೆಂಬಲ ಕೊಟ್ಟರು. ಈ ಯೋಜನೆಯ ಬಗ್ಗೆ ಗಾರ್ತ್ ಬಹಳ ಆಸಕ್ತಿ ವಹಿಸಿದನಲ್ಲದೆ ಅದಕ್ಕಾಗಿ ಶ್ರಮಿಸಿದ ಕೂಡ. ಆದರೆ ಗ್ರಂದಿಗೆಯವರು ತಮ್ಮ ವ್ಯಾಪಾರ ಕುಂದುತ್ತದೆಂದು ಬಗೆದು ಆ ಸಲಹೆಗೆ ಒಪ್ಪಲಿಲ್ಲ. ತಿಕ್ಕಾಟ ಪ್ರಾರಂಭವಾಯಿತು. ಗಾರ್ತ್ ಈ ತಿಕ್ಕಾಟವನ್ನೇ ವಸ್ತುವಾಗಿಟ್ಟುಕೊಂಡು ತನ್ನ ಡಿಸ್ಪೆನ್ಸರಿ ಎಂಬುದೊಂದು ಆರು ಕಾಂಡಗಳ ವ್ಯಂಗ್ಯ ಕವನವನ್ನು ರಚಿಸಿದ. ಇಂದು ಸಾಮಾನ್ಯ ಸಾಹಿತ್ಯಾಸಕ್ತನಿಗೆ ಗಾರ್ತ್ನ ನೆನಪಿದ್ದಲ್ಲಿ ಅದು ಈ ಪದ್ಯದಿಂದ ಮಾತ್ರ್. ಅತಿ ಉದ್ದವೆನಿಸುವ ಈ ಕೃತಿ ಕಡೆಗೂ ಹಠಾತ್ತನೆ ನಿಂತಂತೆ ತೋರುತ್ತದೆಯಲ್ಲದೆ ಸಹಜವಾಗಿ ಮೂಗಿಯಿತೆನಿಸುವುದಿಲ್ಲ. ಅಲ್ಲಲ್ಲೇ ಕೆಲವು ಭಾಗಗಳು ಬಹಳ ಚೆನ್ನಾಗಿವೆ. ಪಿತ್ಥ ಗಹ್ವರದ ವರ್ಣನೆ, ಸಮಕಾಲೀನ ಲೇಖಕ ಸರ್ ರಿಚರ್ಡ್ ಬ್ಲ್ಯಾಕ್ ಮೋರ್ಗೆ, ಮಾಡಿರುವ ಹಿತೋಪದೇಶ, ಅಟರ್ ಬರಿಯ ಪಾತ್ರಚಿತ್ರಣ ಮುಂತಾಗಿ ಒಂದೆರಡನ್ನು ಹೆಸರಿಸಬಹುದು. ಕವನದ ಓಟ ಸರಾಗವಾಗಿದೆ.

೧೭೧೦ರಲ್ಲಿ ವ್ಹಿಗ್ ಸರ್ಕಾರ ಉರುಳಿದಾಗ ಲಾರ್ಡ್ ಗೊಡಾಲ್ಫಿನ್ ಪದಚ್ಯುತನಾದುದರ ಬಗ್ಗೆ ಬರೆದ ಸಣ್ಣ ಕವಿತೆಯೊಂದು ಅಡಿಸನ್ನನ ಪ್ರಶಂಸೆಗೆ ಪಕ್ಕಾಯಿತೆಂದು ಜಾನ್ಸನ್ ಹೇಳುತ್ತಾನೆ.

ನಿಷ್ಠ ಹ್ವಿಗ್ ಆಗಿದ್ದರೂ ಗಾರ್ತ್ ತನ್ನ ಉತ್ತಮ ಸ್ವಭಾವ, ವ್ಯಕ್ತಿಗಳಿಂದಾಗಿ ಎಲ್ಲರಿಗೂ ಬೇಕಾದವನಾಗಿ ಬಾಳಿದ. ಪೋಪ್ ನಂಥ ತೀಕ್ಷ್ಣ ವಿಡಂಭಕ ಕೂಡ ಇವನ ವ್ಯಕ್ತಿತ್ವವನ್ನು ಮೆಚ್ಚಿ ಬರೆದಿದ್ದಾನೆ.

ಗಾರ್ನೆಟ್: ಸಂಮಿಶ್ರಿತ ಸಿಲಿಕೇಟ್ ಖನಿಜ. ಇದರಲ್ಲಿ ಸಾಮಾನ್ಯವಾಗಿ ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನೀಸಿಯಂ, ಕ್ಯಾಲ್ಸಿಯಂ ಮತ್ತು ಅಲ್ಯೂಮಿನಿಯಂ ಧಾತುಗಳಿರುತ್ತವೆ. ಇದು ಗಾಜಿನಂಥ ಒಂದು ಬಗೆಯ ಖನಿಜ. ಪಾರದರ್ಶಕವಾದ ದಟ್ಟ ಕೆಂಪು ಜಾತಿಯ ಗಾರ್ನೆಟ್ ಅನ್ನು ರತ್ನವನ್ನಾಗಿ ಬಳಸುತ್ತಾರೆ. ಇದಕ್ಕೆ ರಕ್ತಮಣಿ, ಪದ್ಮರಾಗ ಎಂಬ ವಿವಿಧ ಹೆಸರುಗಳಿವೆ. ಇದರ ಕಾಠಿಣ್ಯ ೬.೫-೭.೫. ಇದು ಬಹಳ ಹೇರಳವಾಗಿ ಸಿಕ್ಕುವ ಖನಿಜ ಮತ್ತು ಸಾಮಾನ್ಯವಾಗಿ ರಾಪಾಂತರಿತ ಶಿಲೆಗಳಾದ ಪದರು ಶಿಲೆ ಮತ್ತು ನೈಸ್ಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿದ್ದಾಗ ಆ ಬಗೆಯ ರಾಪಾಂತರಿತ ಶಿಲೆಯನ್ನು ಗಾರ್ನೆಟ್ ಪದರು ಶಿಲೆಯಂದೂ ಕರೆಯುವುದುಂಟು. ಗಾರ್ನೆಟ್ ಎಂಬ ಹೆಸರು ರಚನೆಯಲ್ಲಿಯೂ ಹೊರ ರೂಪದಲ್ಲಿಯೂ ಭೌತ ಲಕ್ಷಣದಲ್ಲಿಯೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುವ ಏಳು ವಿಧದ ಬೇರೆ ಬೇರೆ ಖನಿಜಗಳಿಗೆ ಅನ್ವಯಿಸುತ್ತದೆ. ಇವೆಲ್ಲವೂ ಸಮಾನ ಪರಿಮಾಣದ ಸ್ಫಟಿಕಗಳಾಗಿ ೧೨ ಅಥವಾ ೨೪ ಲಂಬ ಕೋನ ಫಲಕಗಳಿರುವ ಹರಳುಗಳಂತೆ ರೂಪುಗೊಳ್ಳುತ್ತವೆ. ಅಲ್ಲದೆ ಕಣಗಳಾಗಿಯೂ ಉಂಡೆಗಳಾಗಿಯೂ ಸಿಗುವುದುಂಟು. ಈ ವರ್ಗದ ಖನಿಜಗಳು ಊದಾಬಣ್ನ, ಕಂದು, ಕಿತ್ತಳೆ, ಕೆಂಪು, ಎಲೆಹಸರು, ಪಚ್ಚೆಹಸರು, ಕಪ್ಪು ಮತ್ತು ಬಣ್ಣ ರಹಿತವಾದ ವಿವಿಧ ಛಾಹೆಗಳಲ್ಲಿ ಕೂಡ ಸಿಗುತ್ತದೆ. ಅಪಾರಕ ವಿಧಗಳನ್ನು ಬಹುವಾಗಿ ಘರ್ಷಕ ವಸ್ತುವಾಗಿ ಉಪಯೋಗಿಸುತ್ತಾರೆ. ಈ ದೃಷ್ಠಿಯಿಂದ ಕಬ್ಬಿಣ ಸಂಯೋಜಿತ ಅಲ್ ಮಂಡಿನ್ ವಿಧದ ಗಾರ್ನೆಟ್ ಬಹಳ ಉತ್ತಮವಾದುದು. ಮರಳು ಕಾಗದದ ತಯಾರಿಕೆಗೆ ಸಾಮಾನ್ಯವಾಗಿ ಶುದ್ಧ ಗಾರ್ನೆಟ್ ಕಣಗಳನ್ನು ಉಪಯೋಗಿಸುತ್ತಾರೆ. ಇದರ ಹೊಳಪು ಮುತ್ತಿನಂತೆ ಅಥವಾ ಗಾಜಿನಂತೆ. ಸಾಂದ್ರತೆ ೩.೧೫-೪.೩.

ಭಾರತದಲ್ಲಿ ಗಾರ್ನೆಟ್ ದೊರೆಯುವ ಮುಖ್ಯ ಪ್ರದೇಶಗಳು ತಿರುನೆಲ್ವೇಲಿ, ನೆಲ್ಲೂರು, ಹೈದರಾಬಾದು, ತಿರುವಾಂಕೂರು, ಕೋಲಾರ, ತುಮಕೂರು ಬಾಗಲಪುರ(ಬಿಹಾರ್), ಕಿಷನ್ಘರ್(ರಜಸ್ತಾನ), ಸರ್ಗೂಜ(ಮಧ್ಯಪ್ರದೇಶ) ಇತ್ಯಾದಿ.