ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಳದ ತಡಿಯಲ್ಲಿ

ಶರತ್ಕಾಲದ ನಡುವಗಲು ಶಾಂತವೂ, ಪ್ರಕಾಶನವೂ, ಸುಖೋಷ್ಣವೂ ಆಗಿತ್ತು. ನನ್ನ ಮೆಚ್ಚಿನ ತಿಳಿನೀರಿನ ಕೊಳವು ಈ ನಡುವಗಲ ಬೆಳಕಿನಲ್ಲಿ ಬಹಳ ಅಂದವಾಗಿ ಕಾಣಬಹುದೆಂದುಕೊಂಡೆ. ಅದನ್ನು ನೋಡಬೇಕೆಂಬ ಹಂಬಲ ಹುಟ್ಟಿತು. ಅಂದು ಮನಸ್ಸು ಯಾವ ಕಾರಣದಿಂದಲೋ ಏನೋ ಉದ್ವಿಗ್ನವಾಗಿತ್ತು. ನಿರ್ದೇಶಿಸಲರಿಯದ ಯಾವುದೋ ಒಂದು ಬಯಕೆಗೆ ಉತ್ಸುಕವಾಗಿರುವಂತೆ ತೋರಿತು.

ಮನಸ್ಸು ಈ ಪರಿಸ್ಥಿತಿಯಲ್ಲಿರುವಾಗ ಕೆಳದಿಯಂತಿದ್ದ ಆ ತಿಳಿಗೊಳವನ್ನು ನೋಡಬೇಕೆಂಬ ಬಯಕೆ ನನಗೆ ಸಹಜವಾಗಿ ಹುಟ್ಟಿತು. ಆ ಕೊಳವು ನನಗೊಂದು ಅಚೇತನ ವಸ್ತುವಾಗಿರಲಿಲ್ಲ. ನನ್ನ ಬಾಳಿನೊಡನೆ ಅದೊಂದು ಜೀವಂತ ವ್ಯಕ್ತಿಯಂತೆ ಬೆರೆದಿತ್ತು. ಅದರ ಸೋಪಾನ ಪಂಕ್ತಿಗಳು ನನ್ನ ಕಂಬನಿಯನ್ನು ಆತು ಹೀರಿದ್ದವು. ಅದರ ಕಿರುದೆರೆಗಳು ನನ್ನ ನಗೆಗೆ ಹೊಳಲುಗೊಟ್ಟಿದ್ದವು. ತೀರದ ಸಂಪಗೆಮರವೂ ಹೂಗಿಡಗಳೂ ನನ್ನ ವಿನೋದಕ್ಕೆ ಕೌತುಕಗೊಂಡು ಪಿಸುಗುಟ್ಟಿ ನಕ್ಕಿದ್ದುವು. ಈ ತರದಲ್ಲಿ ನನ್ನ ಬಾಳಿಗೂ ಆ ಕೊಳಕ್ಕೂ ಅತಿ ಸಮೀಪವಾದ ಸುಂದರ ಸಂಬಂಧವೊಂದನ್ನು ನಾನು ಕಲ್ಪಿಸಿಕೊಂಡಿದ್ದೆ. ಅದರ ವಾತಾವರಣದಲ್ಲಿ ನನ್ನ ದುಗುಡವನ್ನು ನೀಗಿಕೊಳ್ಳುವುದು ನನಗೆ ಬಳಕೆಯಾಗಿಬಿಟ್ಟಿತ್ತು.

ಕೊಳವನ್ನು ತಲುಪಿ, ದಕ್ಷಿಣ ಸೋಪಾನದ ಒಂದು ಮೆಟ್ಟಿಲಿನ ಮೇಲೆ ಕುಳಿತೆ. ದಡದಲ್ಲಿದ್ದ ಸಂಪಗೆ ಮರವು, ಹೂ ಗಾಳಿಯಲ್ಲಿ ಚಂಚಲವಾಗಿದ್ದ ತನ್ನೆಲೆಗಳ ನೆರಳುಗಳನ್ನು ನನ್ನ ತಲೆಗೆ ಮುಡಿಸಿ ಮೈದಡವಿ ಸ್ನೇಹವನ್ನು ಸೂಚಿಸುತ್ತಿತ್ತು. ನೂರಾರು ಸೂರ್ಯ ಬಿಂಬಗಳು ಜಲದ ಕಿರುದೆರೆಗಳಲ್ಲೇ ಸಾಲು ಸಾಲಾಗಿ ಸೈನಿಕರಂತೆ ಕವಾಯಿತು ಮಾಡುತ್ತಿದ್ದವು. ಈ ರವಿದಳದ ಲೀಲಾ ರಣಗತಿಯಿಂದ ಕೊಳವು ಜ್ಯೋತಿರ್ಮಯಿಯಗಿ, ಚೈತನ್ಯವತಿಯಾಗಿ ಕಂಗೊಳಿಸುತ್ತಿತ್ತು. ಆ ವನಪೂದೇಶವು ನಿರ್ಜನವಾಗಿತ್ತು. ವೈದಿಕರೊಬ್ಬರು ಮಾಧ್ಯಾಹ್ನಿಕವನ್ನು ಪೂರೈಸಿಕೊಂಡು ಆಗತಾನೆ ಹೊರಟು ಹೋಗಿದ್ದರು. ಸೃಷ್ಟಿಯು ನೀರವವಾಗಿ ಮಧ್ಯಾಹ್ನದ ಬಿಡುವನ್ನು ಅನುಭವಿಸುತ್ತಿರುವಂತೆ ತೋರಿತು. ಆ