ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೌಕಾಚಂದ್ರ

ಅಂದು ಕೃಷ್ಣದ್ವಾದಶಿ. ಇರುಳು ದಟ್ಟವಾಗಿ ಹಬ್ಬಿತ್ತು. ಆಗ ತಾನೆ ನಾನು ಮನೋಹರವಾದ ಒಂದು ಉತ್ಸವವನ್ನು ನೋಡಿಕೊಂಡು ಬಂದು ನನ್ನ ಕಿರುಮನೆಯಲ್ಲಿ ಹಾಸಿಗೆಯಮೇಲೆ ಮಲಗಿಕೊಂಡು ಅಂದೆ ತಲುಪಿದ ನನ್ನ ಹೆಂಡತಿಯ ಕಾಗದವೊಂದನ್ನು ಮೂರನೆಯ ಸಾರಿ ಓದುತ್ತಾ, ಅದರಲ್ಲಿದ್ದ ಒಲುಮೆಯ ಸಂದೇಶ, ಚಿರಕಾಲ ಅಗಲಿರುವದರ ಯಾತನೆ, ಸಂದರ್ಶನೋತ್ಸುಕತೆ, ಒಂದು ಜೀವವು ಇನ್ನೊಂದನ್ನು ಅರಸಿಕೊಂಡು ಹರಿದು ಬಂದು ಬೆರೆಯುವ ರೀತಿ, ಇವುಗಳನ್ನು ಕುರಿತು ಮನದಲ್ಲೇ ಮೆಲಕು ಹಾಕುತಿದ್ದೆ. ಪ್ರಣಯವೊಂದು ಅಮೋಘವಾದ ಜೀವಶಕ್ತಿ, ಹಾಗೂ ಗಂಭೀರವಾದ ಮಾಯೆಯೆಂದೆನಿಸಿತು. ಅದು ಎಷ್ಟು ವಿವಿಧ ವಿಚಿತ್ರ ರೀತಿಗಳಲ್ಲಿ ಅವಿರ್ಭವಿಸುತ್ತದೆ! ಅದರ ಪ್ರವಾಹವು ಎಷ್ಟು ಚಿತ್ರಗತಿಯಲ್ಲಿ ಹರಿಯುತ್ತದೆ! ವಿಶ್ವವೆಲ್ಲಾ ಈ ಹೊನಲಿನ ಪಾತ್ರದಂತೆ ತೋರಿತು. ನೀರಿನಲ್ಲಿ ಮೀನುಗಳಂತೆ-ಹಂಸಗಳಂತೆ-ಈ ಹೊನಲಿನಲ್ಲಿ ಚರಾಚರ ಜೀವಿಗಳೆಲ್ಲವೂ ಈಜಿ ತೇಲಿ ಮುಳುಗಿ ಕ್ರೀಡಿಸುತ್ತಿರುವಂತೆ ಭಾಸವಾಯಿತು. ಈ ಪ್ರವಾಹದ ಮೇಲೆ ಮಾನವರ ಅಸಂಖ್ಯಾತವಾದ ಅತಿಲಘೂ ನೌಕೆಗಳು ತೇಲುತ್ತಿರುವುದು ಕಣ್ಣಿಗೆ ಬಿತ್ತು. ಇವುಗಳಲ್ಲಿ ಕೆಲವು ಅಲೆಗಳ ಹೊಡೆತಕ್ಕೆ ಮಗುಚಿಕೊಳ್ಳುವುವು. ಕೆಲವು ಚಂಡಮಾರುತನಿಗೆ ಸಿಕ್ಕಿ ಬಂಡೆಗಳ ಮೇಲೆ ಒಡೆಯುವುವು. ಇನ್ನೂ ಕೆಲವು ಸುಳಿಗಳೊಳಗೆ ಗಿರ್ರನೆ ತಿರುಗಿ ಮಳುಗಿ ಹೋಗುವುವು. ಆದರೆ ಈ ವ್ಯಾಘಾತಗಳಿಂದ ತಪ್ಪಿಸಿಕೊಂಡು ತೇಲುವ ಕ್ರೀಡಾ ನೌಕೆಗಳು ಅಲ್ಪವಾಗಿಲ್ಲ; ಅಸಂಖ್ಯಾತವಾಗಿವೆ. ಈ ದೋಣಿಗಳು ಅಲೆಗಳ ಮೇಲೆ ಕೆಳಕೆ ಧುಮುಕಿ, ಕುಣಿದು, ನಲಿದು, ಪಾರಿವಾಳಗಳಂತೆ-ಅಲ್ಲ, ಉಚ್ಚೈ ಶ್ರವಸ್ಸುಗಳಂತೆ.... ಎಷ್ಟು ಸೋಜಿಗವಾಗಿ ಸಾಗುತ್ತಿವೆ! ಅವುಗಳಲ್ಲಿ ಕುಳಿತಿರುವವರ ವಿನೋದಾನಂದಗಳನ್ನು ಏನು ಹೇಳಲಿ? ವಿಶ್ವವು ಇವರ ನಗೆಯಿಂದ ತುಂಬಿ ತುಳುಕುವಂತೆ ತೋರುತ್ತದೆ. ಭಗ್ನ ನೌಕೆಗಳಲ್ಲಿ ಮುಳುಗಿಹೋಗುತ್ತಿರುವವರ ಆರ್ತನಾದವು ಈ ನಗೆಯ ಸೆರಗನ್ನೂ ಸೋಕುವುದಿಲ್ಲವೇನೋ! ಈ ಆನಂದದ ಗಾನದ ಏಕದೇಶದಲ್ಲಿ ಅದು ಮುಳುಗಿ ಹೋಗುವದೇನೊ ! ಹೀಗೆ