ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಥಸಪ್ತಿಮಿ

೨೯

ಮಾಡುವವರ ಜೊತೆಯಲ್ಲಿ ತಾನೂ ಸ್ವರವೆಳೆಯದೆ ಇದ್ದರೆ ಕೆಟ್ಟುಹೋದದ್ದೇನು. ಅಪ್ಪ ಅದೇಕೆ ಬರಲೊಲ್ಲ? ಮಗುವು ಉತ್ಸುಕತೆಯಿಂದ ಅವರ ಬರವನ್ನು ನಿರೀಕ್ಷಿಸುತ್ತದೆ. ಕೊನೆಗೆ ಅವರು ಬಂದು, ಹಸುಳೆಯನ್ನೆತ್ತಿಕೊಂಡು, ಫಲಪುಷ್ಪಗಳ ತಟ್ಟೆಯನ್ನು ಕೈಯಲ್ಲಿ ತೆಗೆದುಕೊಂಡು ಜನಸಂದಣಿಯಲ್ಲಿ ನುಸಿದು ವಾಹನದ ಹತ್ತಿರಕ್ಕೆ ಹೋಗುತ್ತಾರೆ. ಮಗು ತನ್ನ ಪುಟ್ಟ ಕೈಗಳಿಂದ ತಟ್ಟೆಯನ್ನು ಮೇಲಕ್ಕೆತ್ತಿ ಭಟ್ಟರ ಕೈಗೆ ಸಮರ್ಪಿಸುತ್ತದೆ. ಅದೇನು ಸಂತೋಷಾಶ್ಚರ್ಯಗಳಿಂದ ದೇವದೇವನನ್ನು ನೋಡುತ್ತಿದೆ! ಅಗೋ ಸಾರಥಿ ಮತ್ತು ಕುದುರೆಗಳು! ನಿಜವಾಗಿ ದೇವಾಶ್ವಗಳವು. ಈ ದಿವ್ಯ ವ್ಯಕ್ತಿ ಸಾನ್ನಿಧ್ಯದ ಸಂತೋಷೋತ್ಕರ್ಷದಲ್ಲಿ ಮಗುವಿನ ಕುತೂಹಲವಳಿದು ಹೋಗಿದೆ, ವ್ಯಕ್ತಿತ್ವವು ಕೊಚ್ಚಿಹೋಗಿದೆ. ಈ ಸಂತೋಷಕ್ಕೆ ಮೇರೆಯಿಲ್ಲ, ಈ ಭಕ್ತಿಗೆ ಸ್ವಾರ್ಥವಿಲ್ಲ, ಈ ಪ್ರೀತಿಗೆ ರಾಗವಿಲ್ಲ, ಈ ಪೂಜೆಗೆ ಫಲಾಪೇಕ್ಷೆಯಿಲ್ಲ. ಈ ಪಾರವಶ್ಯಕ್ಕೆ ತಪಸ್ಸು ಸಾಟಿಯಿಲ್ಲ. ಆತ್ಮಸಮರ್ಪಣೆಯ ಚರಮಭಾವವದು. ಈ ಭಾವ ಮಗುವಿಗೆ ಮಾತ್ರ ಸಾಧ್ಯ.

ಈ ಸಂಪೂರ್ಣ ನಿವೇದನ ಭಾವದ ನೆರೆ ಇಳಿದು ಮಗುವು ತನ್ನ ಶಿಶುತನಕ್ಕೆ ಹಿಂದಿರುಗುವ ವೇಳೆಗೆ ಹಣ್ಣುಕಾಯಿ ಪೂಜೆ ಸಲಿಸಿ, ಅಪ್ಪ ಮಗುವನ್ನೆತ್ತಿಕೊಂಡು ಹಿಂದಿರುಗುತ್ತಾರೆ. ಕೆಳಗಿಳಿಯುವುದಕ್ಕೆ ಅದೊಪ್ಪದು. ವಾಹನದ ಜೊತೆಯಲ್ಲಿಯೇ ಹೋಗಬೇಕೆಂದು ಅದರಾಸೆ. ಆದರೆ ಅದರ ಮಾತು ಕರ್ತವ್ಯನಿಷ್ಠರಾದ ಅಪ್ಪನ ಕಿವಿಗಳಿಗೆ ಸೋಕದು. ಆದರೂ ಮೋಹದಿಂದ ಆ ಮಗುವನ್ನೆತ್ತಿಕೊಂಡು, ವಾಹನದ ಹಿಂದೆ ವೇದಪಾರಾಯಣ ಮಾಡುತ್ತಿರುವ ವಿಪ್ರ ಗೋಷ್ಠಿಯನ್ನು ತಿರುಗಿ ಸೇರುತ್ತಾರೆ. ವೇದೋಪನಿಷತ್ತುಗಳಂತೆ ಶುದ್ಧವಾದ ಶ್ರದ್ಧಾಪೂತವಾದ ತನ್ನಾತ್ಮವನ್ನು ಆ ವೇದಸ್ವರಗಳ ಮೇಲೆ ತೇಲಿಸಿ, ಸ್ವಾಮಿಯೆಡೆಗೆಯ್ದಿಸಿ, ಉತ್ಸವದೊಂದಿಗೆ ಆ ಮಗು ಮುಂದೆ ಸಾಗುತ್ತದೆ. ಸ್ವಲ್ಪ ಹೊತ್ತಿನ ಮೇಲೆ ದಿಬ್ಬಣವು ಈ ಬೀದಿಯ ಆಚೆಯ ಮೂಲೆಯನ್ನು ತಿರುಗಿ ಕಣ್ಮರೆಯಾಗುತ್ತದೆ.

  • * *

ಉತ್ಸವವು ಸಾಗಿಹೋಯಿತು. ಅದರೊಂದಿಗೆ ನನ್ನ ಕನಸೂ ಕಣ್ಮರೆಯಾಯಿತು. ಕಾವಾರಿದ ಕೆಂಡದಂತೆ ನನ್ನ ಬಾಳು ಮಾತ್ರ ಹಿಂದೆ ಉಳಿದಿದೆ. ಇಂದಿಗೂ ಅಂದಿಗೂ ಅಂತರವೆಷ್ಟು! ಅಂದಿನ ಉಲ್ಲಾಸವೆಲ್ಲಿ, ಶ್ರದ್ಧೆಯೆಲ್ಲಿ, ಸಂಭ್ರಮವೆಲ್ಲಿ-? ಅಂತಜರ್ವ್ರವೊಂದು ಜನಜೀವನವನ್ನು ಹೊಕ್ಕು ಅದನ್ನು ಶೋಷಿಸುತ್ತಿರುವಂತೆ ಕಾಣುತ್ತದೆ. ಜನತೆಯಲ್ಲಿ ಶಾಂತಿ ಅಳಿದಿದೆ. ಬೇವಸ ಮೂಡಿದೆ. ಇಂದು ಅದೇ ರಥಸಪ್ತಮಿ ಹಬ್ಬ, ಅದೇ ಸೂರ್ಯಮಂಡಲ ವಾಹನ, ಅದೇ