ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧

ನಾರಾಯಣನ ಗುಡಿಯಲ್ಲಿ

ಶ್ರೀ ನಾರಾಯಣನ ದೇಗುಲವನ್ನು ನಿಮಗೆ ಪರಿಚಯ ಮಾಡಿಕೊಡುವುದು ಸುಲಭವಲ್ಲ. ನುಡಿಯ ಬಲದಿಂದಲೇ ಅದರ ಭಾವವನ್ನು ನಿರ್ದೇಶಿಸುವುದು ಕಷ್ಟ. ಆದರೂ ನಿಮ್ಮ ಊಹೆಗೆ ಕೈಮರವಾಗಿರಲೆಂದು ಒಂದೆರಡು ಮಾತುಗಳನ್ನು ಹೇಳ ಹೊರಟಿದ್ದೇನೆ.

ಈ ಗುಡಿ ನಮ್ಮೂರಿಗೆ ಅದರ ಆತ್ಮದಂತಿದೆ ಎನ್ನಬಹುದು. ತನ್ನ ಸುತ್ತ ಮುತ್ತಲೂ ಎದ್ದು ಬಿದ್ದು ನರಳಿ ನಲಿದು, ಹುಟ್ಟಿ ಸತ್ತು ಸಾಗುವ ನಶ್ವರ ಸಂಸಾರದ ಶಾಶ್ವತ ಸತ್ವದಂತಿದೆ ಎಂದರೆ ಹೆಚ್ಚು ಹೇಳಿದಂತಾಗುವುದಿಲ್ಲ. ನಾನು ಹುಡುಗನಾಗಿದ್ದಾಗ ಇದನ್ನು ಸೃಷ್ಟಿಯ ಕೇಂದ್ರಸ್ಥಾನವೆಂದು ಭಾವಿಸಿಕೊಂಡಿದ್ದೆ. ಸಕಲ ಚರಾಚರ ಪೂಪಂಚದ ಸತ್ವವೆಲ್ಲ -ನಮ್ಮತ್ತೆಯು ಹೇಳುತ್ತಿದ್ದ ರಾಕ್ಷಸನ ಪ್ರಾಣದ ಭರಣಿಯಂತೆ, ಅಲ್ಲ ಹಾವಾಡಿಗನ ಬುಟ್ಟಿಯಂತೆ-ಇದರಲ್ಲಿ ಅಡಗಿದೆ ಎಂದೂ ತಿಳಿದುಕೊಂಡಿದ್ದೆ. ಗುಡಿಯ ವಿಮಾನವನ್ನು ಸುತ್ತುಗಟ್ಟಿ ಮಿನುಗುತ್ತಿದ್ದ ತಾರೆಗಳೂ, ಗೋಪುರದಲ್ಲೂ ಪ್ರಾಕಾರದ ತೆನೆಗಳಲ್ಲೂ ಗೂಡು ಕಟ್ಟಿಕೊಂಡು ಹಾರಾಡುತ್ತಿದ್ದ ಹಕ್ಕಿಗಳೂ, ಪ್ರಾಕಾರದಲ್ಲಿ ಮಲಗಿ ಮೆಲುಕು ಹಾಕುತ್ತಿದ್ದ ಎಮ್ಮೆ, ಹಸು ಮತ್ತು ಕರುಗಳೂ, ಬೃಂದಾವನದಲ್ಲಿ ಗರುಕೆಯೊಡಗೂಡಿ ಬೆಳೆದು ಪೂಜೆಗೊಳ್ಳುತ್ತಿದ್ದ ತುಳಸಿಯ ಗಿಡವೂ, ಹೂತಟ್ಟೆಗಳಲ್ಲಿ ತುಂಬಿದ ವಿಧವಿಧ ಪುಷ್ಪಗಳೂ, ವನಮಾಲಿಕೆಯೂ, ಸದಾ ದೇವಪರಿಚರ್ಯೆಯಲ್ಲಿ ಭಾಗಿಗಳಾಗಿ ಅದರಿಂದಲೆ ವ್ಯಕ್ತಿಶಾಲಿಗಳಾಗಿದ್ದಂತೆ ತೋರುತ್ತಿದ್ದ ಮನುಷ್ಯರೂ ಇವರೆಲ್ಲರೂ ನನ್ನಲ್ಲಿ ಈ ಭಾವವನ್ನುಂಟುಮಾಡಿದ್ದರು. ದೇವದೇವನ ಶುಶ್ರೂಷೆಯಲ್ಲಿ ನಿರತರಾಗಿದ್ದ ಈ ಮಾನವರು ಆಗ ನನ್ನ ಕಣ್ಣಿಗೆ ದೇವಲೋಕದ ವ್ಯಕ್ತಿಗಳಂತೆ ಹೇಗೆ ಕಾಣುತ್ತಿದ್ದರು! ದೇಗುಲದ ಹೊರಗೆ ಅವರು ಛಾಯಾಸ್ವರೂಪರು-ಆಟದ ಗೊಂಬೆಗಳಂತೆ. ಅಲ್ಲಿ ಅವರಿಗೆ ಅಸ್ತಿತ್ವವಿಲ್ಲ. ಅವರ ನಡೆನುಡಿಗಳಿಗೆ ಅರ್ಥವಿದ್ದಂತೆ ನನಗೆ ಕಂಡುಬರುತ್ತಿರಲಿಲ್ಲ. ನಾರಾಯಣನಿಗೆ ಚಾಮರಬೀಸುವ, ಮಂಗಳಾರತಿಯನ್ನು ಹೊತ್ತಿಸಿಕೊಡುವ, ಓಲಗವನ್ನೂದುವ, ವೇದಪಾರಾಯಣವನ್ನು ಹೇಳುವ, ಇತ್ಯಾದಿ ಕೈಂಕರ್ಯಗಳನ್ನು ಬಿಟ್ಟು ಇಲ್ಲಿ ಇವರೇನು