ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨

ಪು.ತಿ.ನ.ಸಮಗ್ರ

ಮಾಡುತ್ತಿದಾರೆ! ಎಂದು ನನಗೆ ಆಶ್ಚರ್ಯವಾಗುತ್ತಿತ್ತು. ದೇಗುಲದಲ್ಲಿ ಅವರಿಗೆ ಏನು ಪದವಿ, ನಾರಾಯಣನೊಡನೆ ಅವರಿಗೆ ಎಷ್ಟು ಬಳಕೆ! ಪರಿಚರ್ಯೆಯಿಂದ ಅವರಿಗೆ ಈ ಪದವಿ ಮತ್ತು ಈ ಬಳಕೆ ಬಂದಿತ್ತು. ಅಲ್ಲಿ ಪ್ರತಿಯೊಬ್ಬನಿಗೂ ಅವನವನಿಗೆ ನಿಯಮಿತವಾದ ಊಳಿಗಗಳಿದ್ದವು. ಊಳಿಗದ ಹಕ್ಕನ್ನು ಓಲಗದವನಿಂದ ಅರ್ಚಕನವರೆಗೂ ಅವನವನು ತನ್ನ ಮಾನದಂತೆ ಕಾದಿಟ್ಟುಕೊಂಡಿರುತ್ತಿದ್ದನು. ಅವರವರ ಕೈಯಿಂದ ಹೀಗೆ ಆಯಾ ನಿಯಮಿತ ಕಾರ್ಯಗಳನ್ನು ಮಾಡಿಸಿಕೊಳ್ಳುವುದರಲ್ಲಿ ನಾರಾಯಣನಿಗೆ ಪ್ರೀತಿಯೆಂದೂ ಇತರರು ಯಾರಾದರೂ ಈ ಹಕ್ಕನ್ನು ಕಸಿದುಕೊಂಡರೆ ಆತನಿಗೆ ಅಸಮಾಧಾನವಾಗುತ್ತದೆಂದೂ ನಾನು ಭಾವಿಸಿಕೊಂಡಿದ್ದೆ. ಈ ಶುಶ್ರೂಷೆಯಿಂದ ನಮ್ಮೂರ ಜನರೆಲ್ಲರೂ (ಎಲ್ಲರಿಗೂ ದೇವಾಲಯದಲ್ಲಿ ಊಳಿಗವಿತ್ತು.) ನಾರಾಯಣನ ಕುಟುಂಬಕ್ಕೆ ಸೇರಿದ ದಿವ್ಯ ವ್ಯಕ್ತಿಗಳಂತೆಯೂ ಆತನಲ್ಲಿ ತಮ್ಮ ಅಸ್ತಿತ್ವವನ್ನು ತಾವು ಗಳಿಸಿಟ್ಟುಕೊಂಡಿರುವಂತೆಯೂ ನನಗೆ ಕಂಡುಬರುತ್ತಿತ್ತು. ಆಗ ಅವರ ಬಾಳನ್ನು ಹೊಸ ತೇಜಸ್ಸೊಂದು ಆವರಿಸುತ್ತಿತ್ತು. ಅವರ ನಡೆನುಡಿಗಳಿಗೆ ಅರ್ಥವಿರುತ್ತಿತ್ತು. ಈ ಪರಿಚರ್ಯೆಯಲ್ಲಿ ನನ್ನ ಜೊತೆಯ ಹುಡುಗರಲ್ಲಿ ಅನೇಕರಿಗೆ ಅವರವರ ಬಂಧುಮುಖೇನ ಭಾಗ ಸಿಕ್ಕಿತ್ತು. ನನಗೆ ಪಾಲಿರಲಿಲ್ಲ; ಇದರಿಂದ `ನಾನು ನಾರಾಯಣನಿಗೆ ಹೊರಗಾಗಿದ್ದೇನೆ. ಆತನ ಕುಟುಂಬಕ್ಕೆ ಸೇರಿಲ್ಲ' ಎಂಬ ಭಾವ ಮೊಳೆತು ನನ್ನನ್ನು ಖಿನ್ನನನ್ನಾಗಿ ಮಾಡಿತ್ತು. ಒಮ್ಮೊಮ್ಮೆ ಏನಾದರೂ ಮಾಡಿ ಹೇಗಾದರೂ ಮಾಡಿ ಈ ಸಂಸಾರಕ್ಕೆ ಸೇರಿಕೊಳ್ಳಬೇಕೆಂದು ಪರ್ಯುತ್ಸುಕವಾಗಿ, ನಂದಾ ದೀವಿಗೆಯ ಕುಡಿಯನ್ನು ಮಿಡಿದು ಬತ್ತಿಯನ್ನು ಮೀಟುತ್ತಿದ್ದೆ. ಗುಂಬಾರಾತಿಯ ಬತ್ತಿಯ ತುಪ್ಪವು ತೀರಹೋಗಿ ಜ್ವಾಲೆ ಮಂಕಾಗಿರುವ ವೇಳೆಯಲ್ಲಿ ಅದನ್ನು ಉದ್ದೀಪನ ಮಾಡುವುದಕ್ಕೆ ಗುಂಬಾರತಿಯವನು ಹತ್ತಿರದಲ್ಲಿ ಇಲ್ಲದಿರುವ ಸಮಯವನ್ನು ನಿರೀಕ್ಷಿಸಿಕೊಂಡಿದ್ದು ಆ ಕೆಲಸವನ್ನು ನಾನು ಮಾಡುತ್ತಿದ್ದೆ. ಇದರಿಂದ ಆ ವೇಳೆಗಳಲ್ಲಿ ಮನಸ್ಸಿಗೆ ಸ್ವಲ್ಪ ಸಮಾಧಾನವಾಗುತ್ತಿತ್ತು. ಆದರೆ ಭಯವಾಗುತ್ತಲೂ ಇತ್ತು.

ಒಂದು ದಿನ ರಾತ್ರಿ, ನನಗಿನ್ನೂ ಚೆನ್ನಾಗಿ ಜ್ಞಾಪಕ-ಹೀಗೆಯೇ ಈ ಪರಿತ್ಯಕ್ತ ಭಾವದಿಂದ ಖಿನ್ನನಾಗಿ ಒಳಗಿನ ಪ್ರಾಕಾರದಲ್ಲಿರುವ ಬೃಂದಾವನವನ್ನು ಒರಗಿಕೊಂಡು ನಿಂತಿದ್ದೆ. ತುಳಸಿಯ ಗಿಡದ ಸಾನ್ನಿಧ್ಯವು ಮನಸ್ಸಿಗೆ ಒಂದು ತೆರದ ನೆಮ್ಮದಿಯನ್ನು ತಂದಿತ್ತು. ಓಲಗದ ರಾಗವೂ, ಅದರೊಡನೆ ತಾನವಾಗಿ ಬೆರೆದ ಗಂಟೆಯ ನಾದವೂ ಇರುಳಿನ ಮೌನದ ಮೂಲಕ ಶೋಧಿಸಿ ಬಂದಂತೆ,