ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಲ್ ಮಾಳಿಗೆ ಉತ್ಸವ

೪೧

ಮುಂದುವರಿಯುತ್ತಾರೆ. ಇಂಥ ಜೀವಂತ ಕತ್ತಲೆಯನ್ನು ನಾನು ಇನ್ನು ಎಲ್ಲೂ ಅನುಭವಿಸಿಲ್ಲ. ಇದನ್ನು ದಾಟಿ ಮೇಲಕ್ಕೆ ಬಂದರೂ ಅಲ್ಲೂ ಕತ್ತಲೆ. ಈ ಕೊಠಡಿಯ ಕತ್ತಲು ಮಾಳಿಗೆಯ ಕತ್ತಲಿನ ತಾಳು. ಅಲ್ಲಿ ಇದು ಕವಲೊಡೆದು ಶಾಖೋಪಶಾಖೆಯಾಗಿ ಬಾನು ತುಂಬ ಹರಡಿ ತಾರೆಗಳ ಹೂ ಬಿಟ್ಟು ವಸಂತದ ಸೌಭಾಗ್ಯವನ್ನು ತೋರುತ್ತಿದೆ ಎಂದು ಯಾರಿಗಾದರೂ ತೋಚೀತು. ಮೇಲಕ್ಕೆ ಬಂದಕ್ಷಣ ದೇವರೆಲ್ಲಿದೆ ಎಂಬುದು ಬರಿಯ ಊಹೆಯ ಮಾತಾಗುತ್ತದೆ.

ಮುಂದೆ ಹೋಗುತ್ತಿರುವವರನ್ನು ನಾವು ಸುಮ್ಮನೆ ಹಿಂಬಾಲಿಸಬೇಕು ಅಷ್ಟೆ. ದಾರಿ ಸುಗಮವಲ್ಲ, ಮಧ್ಯೆ ಮಧ್ಯೆ ನೆಲಮಟ್ಟಕ್ಕಿರುವ ಬೆಳಕಿನ ಕಿಂಡಿಗಳು-ಸಲಾಕಿ ಹಾಕಿದ್ದರೂ, ಜೋಕೆ. ಒಂಟೆಯ ಬೆನ್ನಿನಂತೆ ಅಲ್ಲಲ್ಲಿ ಡುಬ್ಬುಗಳು. ಮಾಳಿಗೆಯ ತುಂಬ ಇಂಥ ಏರಿಳಿತಗಳು. ಜಾಗ ತೀರ ಅಪರಿಚಿತ, ಬಹು ವಿಶಾಲ; ಆದುದರಿಂದ ನಾವು ಬೇರೊಂದು ಲೋಕಕ್ಕೆ ಬಂದಿದೇವೆ ಎಂಬ ಭಾವವು ನಮ್ಮನ್ನು ಆವರಿಸುತ್ತದೆ. ಕೊನೆಗೆ ಆವುದೋ ಒಂದು ಮೂಲೆಯಲ್ಲಿ ದೀವಟಿಗೆಯ ಹೊನ್ನು ಬೆಳಕು ಕಂಡಾಗ ಆ ಸುವರ್ಣ ತೇಜೋದರ್ಶನವು ಅತ್ಯಂತ ಮೋಹಕವಾಗುತ್ತದೆ. ದಿಗಂತದ ಕರಿಮುಗಿಲಿನಲ್ಲಿ ಹೊಂಬಣ್ಣದ ಮೂಗುಮಿಂಚು ಮಿಂಚಿದಾಗಲೆಲ್ಲಾ ನನಗೆ ಈ ವೈಲುಮಾಳಿಗೆಯ ಕತ್ತಲಿನಲ್ಲಿ ಚೆಲುವರಾಯನೊಡನೆ ಓಡಾಡುತ್ತಿರುವ ಪಂಜಿನ ಬೆಳಕು ಜ್ಞಾಪಕಕ್ಕೆ ಬರುತ್ತದೆ. ಅಲ್ಲಿ ಚೆಲುವರಾಯ ವೈಕುಂಠನಾಥನಂತೆ ವೇಷ ತಾಳಿ, ಏಳು ಹೆಡೆಯ ನಾಗರದ ಮೇಲೆ ಲೀಲೆಯಲ್ಲಿ ಪವಡಿಸಿ ಬಹು ಸುಂದರವಾಗಿ ಭಕ್ತರ ಚೂರ್ಣಿಕೆಗಳನ್ನು ಲಾಲಿಸುತ್ತಾ ಅತ್ತ ಇತ್ತ ಸುತ್ತುತ್ತಿರುತ್ತಾನೆ. ನೋಟ ಬಲು ಅಂದ, ಬಲು ಅಂದ. ತಮಸ್ಸಿನಿಂದ ಬೆಳಕಿಗೆ ಈ ಯಾತ್ರೆ-ಭವದಿಂದ ಅಭವನ ದರ್ಶನಕ್ಕೆ.

ಈ ದಿನ ನಾಣುವಿಗೆ ಏನಾಗಿದೆಯೋ ಕಾಣೆ. ಯಾವುದೋ ಒಂದು ಪರಸ್ಥಳದಿಂದ ಬಂದಿರುವ ಇನ್ನೂ ಮದುವೆಯಿಲ್ಲದ ಹುಡುಗಿಯೊಂದನ್ನು ನೋಡಿ ಈತ ತಬ್ಬಿಬ್ಬಾಗಿಬಿಟ್ಟಿದ್ದಾನೆ. ಈ ಗುಂಪಿನಲ್ಲಿ ಎಲ್ಲೋ ಆಕೆ ಇರಬಹುದಂತೆ. ಆಕೆ ಮುಡಿದ ಮಲ್ಲಿಗೆಯ ಕಂಪು ಆ ಬಾಗಿಲು ದಾರಿಯ ಕತ್ತಲೆ ಕೈಯಲ್ಲುಳಿದಿದೆಯಂತೆ. ಮೇಲಿನ ಈ ಅಪರಿಚಿತ ವೈಲುಮಾಳಿಗೆ ಬೃಂದಾವನವಂತೆ, ಕೆಳಗೆ ಇರುವ ದೇವರುಗಳಿಗೆ ಮೇಲೆ ಕಟ್ಟಿರುವ ದುಂಡು ದುಂಡನೆ ವಿಮಾನಗಳು ಈ ಕತ್ತಲಲ್ಲಿ ಲತಾಕುಂಜದ ಸಂಕೇತಸ್ಥಾನಗಳಂತೆ ತೋರುತ್ತವೆಯಂತೆ. ಚೆಲುವರಾಯನೇ ಕೃಷ್ಣನಂತೆ, ನಾವೆಲ್ಲ ಗೋಪ ಗೋಪಿಯರಂತೆ, ಈ ಉತ್ಸವ ಒಂದು ಲೀಲೆಯಂತೆ, ಒಲುಮೆ ಇಂದು ಗಾಳಿ ತುಂಬ ತುಂಬಿದೆಯಂತೆ,