ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪

ಪು.ತಿ.ನ.ಸಮಗ್ರ

ತಟಕ್ಕನೆ ನಿಲ್ಲುತ್ತಾನೆ. ನೋಡಬೇಕು ಈ ವೈಖರಿಯನ್ನು. ಯಥಾಪೂಕಾರ ಒಂದೊಂದಾಗಿ ಈ ಮೆಟ್ಟಲುಗಳನ್ನು ಮೆಲ್ಲನಿಳಿದು ಈಗ ಹೆಗಲನ್ನೇರಿ, ದಾಬುಗಾಲೋಟದಲ್ಲಿ ಅತ್ಯಂತ ವಿಸ್ಮಯಜನಕವಾದ ರೀತಿಯಲ್ಲಿ ನಡೆಯುತ್ತಾ, ಭುಜಗಳನ್ನು ಕುಣಿಸುತ್ತಾ ಕುಣಿಯುತ್ತಾ ಕುಪ್ಪಳಿಸುತ್ತಾ, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಈ ಅಂಗಳ ದಾಟಿ ಗುಡಿಯೊಳಕ್ಕೆ ಹೊಕ್ಕು, ರಾಮಾನುಜರ ಸನ್ನಿಧಿಯ ಬಳಿ ಸ್ವಲ್ಪ ನಿಂತು ಮಂಗಳಾರತಿ ಸ್ವೀಕರಿಸಿ, ಪುನಃ ಅದೇ ನಡಗೆಯಲ್ಲಿ ನಡೆದು ತನ್ನ ಒಳಗುಡಿಗೆ ಹೋಗಿ ಸೇರಿ ಧಡಮ್ಮನೆ ಬಾಗಿಲು ಹಾಕಿಕೊಳ್ಳುತ್ತಾನೆ. ಛತ್ರ ಚಾಮರವೆಲ್ಲಾ ಹೊರಗೆ ನಿಲ್ಲುತ್ತದೆ. ಜನದ ಕೋಲಾಹಲ ಹೊಮ್ಮಿ ಹರಿಯುತ್ತ ಕಲ್ಲೋಲವಾಗುತ್ತದೆ. ಇದು ನಿಜವಾಗಿ ವಿಜಯೋನ್ಮಾದದ ಲೀಲೆ. ಈ ಉತ್ಸವವನ್ನು ಬಿಜಯ ಮಾಡಿಸುವವರು ಬಲಶಾಲಿಗಳು, ನುರಿತವರು, ನಡೆಬಲ್ಲವರು. ಛತ್ರ ಚಾಮರ ಕುಂಚ ಪಂಜುಗಳನ್ನು ಹಿಡಿದಿರುವವರಿಗೂ, ದೇವರ ಎದುರಿನಲ್ಲಿ ಕೈಗನ್ನಡಿ ಹಿಡಿದಿರುವವರಿಗೂ ಶ್ರಮ ಹೆಚ್ಚು. ಈ ಕನ್ನಡಿಯವರೂ ಅರೆಯರೂ ಮೃದಂಗದವನೂ ಹಿಂದೆ ಹಿಂದಕ್ಕೆ ಹೆಜ್ಜೆಯಿಟ್ಟು ಓಡಬೇಕಾಗಿರುವುದರಿಂದ ಇವರು ಹೆಚ್ಚು ಎಚ್ಚರದಿಂದಿರಬೇಕು. ಈ ಅರೆಯರ ವೇಷವೂ, ಹಾಡೂ, ತಾಳವೂ, ಓಟವೂ ಬಹಳ ವಿನೋದಕರವಾಗಿವೆ; ಉತ್ಸವಕ್ಕೆ ವಿಲಕ್ಷಣ ಕಳೆಯನ್ನೂ ಘನತೆಯನ್ನೂ ಕೊಡುತ್ತವೆ. ಇಷ್ಟು ಬಗೆಯ ನಡೆಯೂ ಓಟವೂ, ಅಸಾಧ್ಯ ಜನಸಂದಣಿಯಲ್ಲಿ ಜರುಗಬೇಕು. ಮಣಿಯಗಾರರ `ದಾರಿ ದಾರಿ, ಎಚ್ಚರಿಕೆ ಎಚ್ಚರಿಕೆ', ಎಂಬ ಕೂಗು ಅಂದವೇ ಸರಿ.

ಎಲ್ಲರಿಗೂ ಒಂದು ತೆರೆದ ಹುಚ್ಚಿನ ಆನಂದ; ಗೆಲವನ್ನು ಪಡೆದವ ಚೆಲುವರಾಯ, ಆತನ ಪಡೆ ನಾವು, ನೋಟಕರಲ್ಲ ಪಾತ್ರಗಳು ನಾವು. ಇದು ಲೀಲೆಯಾದರೆ ನಲಿವವರು ನಾವು. ನಾಟಕವಾದರೆ ವೇಷಧಾರಿಗಳು ನಾವು. ನಮಗುಂಟಾಗುವ ಆನಂದ ಮತ್ತೊಬ್ಬರ ನಟನದಿಂದಾಗುವ ಅನುರಣನವಲ್ಲ; ಸ್ವಯಂ ಅನುಭವ ಸಿದ್ಧವಾಗುವ ಆನಂದ. ಹೀಗೆ ಅಬಾಲವೃದ್ಧರಿಗೂ ಪಂಡಿತ ಪಾಮರರಿಗೂ ಹಿಗ್ಗಾಗುವಂತೆ ಈ ಅಂದವಾದ ಉತ್ಸವವನ್ನು ಕಲ್ಪಿಸಿದವರ ಕಲಾವಂತಿಕೆಯನ್ನು ಎಷ್ಟು ಹೊಗಳಿದರೂ ಸ್ವಲ್ಪವೇ. ಇಂಥ ಸಂದರ್ಭಗಳಲ್ಲಿ ಪ್ರಕೃತಿಬದ್ಧ ಜೀವಾತ್ಮವು ಮುಕ್ತವಾಗಿ ಒಂದಕ್ಕೊಂದಕ್ಕೆ ಬೆರೆದುಕೊಂಡು ಹೋಗಿ ವಿಶ್ವಾತ್ಮವಾಗುತ್ತದೆಯೊ ಏನೊ. ನೆರೆ ಬಂದಾಗ ಕೊಳ ಬಾವಿ ನೀರೆಲ್ಲಾ ಒಂದಾಗಿ ಹರಿದು, ನೆರೆನಿಂತಮೇಲೆ ತಿರುಗಿ ಕೊಳಬಾವಿಕಟ್ಟೆಯಾದರೂ ಕಲ್ಮಷ ನೀಗಿ ಹೊಸ ನೀರು ತುಂಬಿ ನಿರ್ಮಲವಾಗುವಂತೆ ನಾವೆಲ್ಲ ಈ ಆನಂದದ ನೆರೆಯಲ್ಲಿ