ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦

ಪು.ತಿ.ನ.ಸಮಗ್ರ

ಮೋಡವೆದ್ದು ವಟಗುಟ್ಟುತ್ತಿದೆ; ಮಿಂಚಿನ ಬಾಲದಿಂದ ಮೈಯನ್ನೆಲ್ಲಾ ಹೊಡೆದುಕೊಳ್ಳುತ್ತಿದೆ; ಮೈಮುರಿದು ನಿಮಿರುತ್ತಿದೆ; ಅತ್ತ ಇತ್ತ ಹೊರಳಾಡುತ್ತಿದೆ; ಜೊತೆಗೆ ಬನ್ನಿರೆಂದು ಆ ಮೂಲೆಯಲ್ಲಡಗಿರುವ ಮೋಡಗಳಿಗೆಲ್ಲಾ ಆರುತ್ತಿದೆ. ಹೋ ಹೋ ಈಗ ನಮ್ಮ ಬಾನು ತುಂಬ ಅವೇಯೆ. ನರಸಿಂಹಗಿರಿಯನ್ನು ಮುತ್ತಿ ಹೊತ್ತುಕೊಂಡು ಹೋಗುವಂತೆ ಅವುಗಳ ಸನ್ನಾಹ. ನರಸಿಂಹ ಮಾತ್ರ ಮೌನದಿಂದ ಅಚಲನಾಗಿ ಮಂತ್ರೋಚ್ಛಾರಣೆ ಮಾಡುತ್ತಿದಾನೆ. ಈ ಹೂಂಕಾರ ಅವನದು. ಮೋಡಗಳನ್ನೆಲ್ಲಾ ತೆನ್ನೆಡೆಗೆ ಸೆಳೆದುಕೊಳ್ಳುವ ಈ ಸುಯ್ ಗಾಳಿಯ ಉಚ್ಛ್ವಾಸವೂ ಅವನದೇ. ತಪ್ಪಲಿನ ಊರಿನಲ್ಲಿ ನಾವು ಈ ಬೆರಗಿನ ನೋಟವನ್ನು ಹರ್ಷ ಕುತೂಹಲಗಳಿಂದ ನಿರೀಕ್ಷಿಸುತ್ತಿದೇವೆ. ಈಗ ಗಿರಿಯ ಶಿಖರ ಕಣ್ಣಿಗೆ ಕಾಣದು; ಮಿಂಚಿನ ಪಾಶಗಳು ಮಾತ್ರ ಬಹು ಬಿರುಸಾಗಿವೆ. ಸುರುಳಿ ಸುರುಳಿಯಗಿ ಬೆಟ್ಟದ ಶಿಖರವನ್ನು ಕುಣಿಕೆ ಹಾಕಿ ಸೆಳೆಯುವಂತೆ ಬಹು ಚಮಕಿನಿಂದ ಹೊಂಚಾಡುತ್ತಿವೆ. ಕಿವಿಯೊಡೆಯುವಂತೆ ಸಿಡಿಲಾರ್ಭಟ; ಶಿಖರವುರುಳುವಂತೆ ಉರುಳುರುಟು ಸಿಡಿ ಸದ್ದು. ಓ, ಮೋಡ ಸೋತು ಮೈಗರೆಯಿತು. ಹನಿ ಬಿತ್ತು ಹನಿ ಬಿತ್ತು, ಮುತ್ತಿನಂಥ ಮಳೆ ಬಿತ್ತು. ದೆಸೆಯೆಲ್ಲಾ ಒಂದಾದವು. ಸೂರ್ಯನ ಸುದ್ದಿಯೇ ಇಲ್ಲ. ಮೇಲೆ ಇದೆಯೋ ಇಲ್ಲವೋ ಅದೂ ಬರಿ ಮುಗಿಲೇ ಆಯಿತೋ ತಿಳಿಯದು. ಗಾಳಿ ಸುಮ್ಮನೆ ಸುದ್ದಿಯೇ ಇಲ್ಲ. ಮಲೆ ಇದೆಯೋ ಇಲ್ಲವೋ ಅದೂ ಬರಿ ಮುಗಿಲೇ ಆಯಿತೋ ತಿಳಿಯದು. ಗಾಳಿ ಸುಮ್ಮನೆ ಅಶ್ವತ್ಥಮರದ ಮೇಲೆ ಕೂತಿತೋ ಏನೋ. ಬಾನಿಗೂ ಭೂಮಿಗೂ ಸೇತುವೆ ಕಟ್ಟಿದ ಹಾಗೆ ಒಂದೇ ಧಾರೆಯಲ್ಲಿ ಮಳೆ; ಬೆಟ್ಟದ ತುಂಬ ಮಳೆ; ಊರು ತುಂಬ ಕಣಿವೆ ತುಂಬ ಮಳೆ. ಇಡೀ ಸುತ್ತಿಗೇ ಬಲೆ ಬಿದ್ದ ಹಾಗೆ, ಬಾನು ಕರಗಿದ ಹಾಗೆ ನೀಲ ಜಲಧಾರೆ. ಬೀದಿಯಲ್ಲಿದ್ದವರಲ್ಲಿ ಕೆಲವರು ಮಳೆ ಬಂತು ಮಳೆ ಬಂತು ಎಂದು ಕೂಗು ಹಾಕಿಕೊಂಡು ಜಗಲಿಗಳಿಗೆ ಹಾರುತ್ತಿದಾರೆ. ಮತ್ತೆ ಕೆಲವರು ಹೋ ಹೋ ಎಂದಾರುತ್ತಾ ನೆನೆಯುತ್ತಲೇ ಓಡಾಡುತ್ತಿದಾರೆ. ಅಮೃತಸೇಚನದಂತಿದೆ ಈ ಅಭಿಷೇಕ ಅವರಿಗೆ. ಎಂಥ ಬೀಕರ ಮಂಗಳದರ್ಶನ ಈ ಮಳೆಯ ದಾಳಿ. ಕಡಲಿನಿಂದ ಉಕ್ಕುವ ಹಾಲಾಹಲವನ್ನು ಕುಡಿದು ಅಮೃತವರ್ಷಕ್ಕೆಡೆಗೊಟ್ಟ ಶಿವನಂತೆ ತೋರುತ್ತಿದಾನೆ ನಮ್ಮ ನರಸಿಂಹ. ಭೋರೆಂದು ಇಳಿಯುವ ಗಂಗೆಗೆ ಶಿವನು ಹರಡಿದ ಜಟೆಯಂತೆ ತೋರುತ್ತಿದೆ, ಮಲೆಯ ಶಿಖರದ ಗುಡಿ. `ನಾನು ಏನು ಹೇಳಿದೆ ನೋಡು' ಎಂದು ನನ್ನ ಜತೆಯಲ್ಲಿ ಕೊಡ ಹೊತ್ತ ಮುದುಕರು ಉತ್ತರೀಯವನ್ನು ಹಾರಿಸುತ್ತಾ ತೋಳುಗಳನ್ನು