ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩


ಬೀದಿಯ ಬಸವ

ಇಲ್ಲ; ಇನ್ನು ದೇವಸ್ಥಾನದಲ್ಲಿ ಕುಳಿತು ಈ ಪೊಂಗಲಿಗೂ ತೇಂಗೊಳಲಿಗೂ ಕಾದು ಪ್ರಯೋಜನವಿಲ್ಲ. ಈಗ ಹಸಿವನ್ನು ತೀರಿಸಿಕೊಳ್ಳುವುದಕ್ಕೆ ಬೇರೊಂದು ದಾರಿ ಹುಡುಕಬೇಕು-ಎಂದುಕೊಂಡೆ ನಾನು ಬಹಳ ಬೇಸರದಿಂದ. ಅಂದು ಗುಡಿಯಲ್ಲಿ ವಿಶೇಷೋತ್ಸವ, ತೇಂಗೊಳಲನ್ನು ಸಾವಿರಗಟ್ಟಲೆ ಮಾಡಿ ಊರವರಿಗೆಲ್ಲ ಹಂಚಬೇಕಾದರೆ ದೊಡ್ಡ ಉತ್ಸವವೇ ಆಗಿರಬೇಕಲ್ಲವೇ? ಈ ಉತ್ಸವದ ಅಥವಾ ಅದರ ಅಂಗವಾದ ಕಲಹದ ವರ್ಣನೆ ಈ ಬರವಣಿಗೆಯ ವಸ್ತುವಲ್ಲ. ಇದರ ಶೂರ ಬೀದಿಯ ಬಸವ. ನಾನು ನಮ್ಮ ಕಥಾನಾಯಕನನ್ನು ಹುಡುಕಿಕೊಂಡು ಹೋಗತಕ್ಕವನಿದ್ದೇನೆ. ದೇವಸ್ಥಾನದಲ್ಲಿ ಕುಳಿತು ಕುಳಿತು ಬೇಸರವಾಗಿದೆ. ಕೂಳಿದ್ದೆಡೆ ಕಲಹ. ಆದರೆ ಇದನ್ನು ಅತಿಯಾಗಿ ಬೆಳಸಿಕೊಂಡು ಹೋಗಬಾರದು. ಇದೇನು ದಾರಿತಪ್ಪಿ ನೀತಿ ಹೇಳುವುದಕ್ಕೆ ಹೊರಟುಬಿಟ್ಟೆನಲ್ಲ. ಇತರರ ಕೆಲಸಕ್ಕೆ ಬಾರದ ಸ್ಪರ್ಧೆಯಿಂದ ನಮ್ಮ ಹಸಿವು ಹೆಚ್ಚಿ ನಮಗೆ ತಾಳ್ಮೆ ತಪ್ಪಿದರೆ ನಾವು ಒಂದು ಹಿರಿಯತನದಿಂದ ನೀತಿ ಹೇಳದೆ ಏನು ಮಾಡಬೇಕು? ಆದರೆ ಕೇಳುವವರಾರೂ ಇಲ್ಲದೇ ಹೋದುದರಿಂದ, ನಾನು ನಡುವಿಗೆ ಸೆಕ್ಕಿಸಿದ್ದ ಎರಡಾಣೆಯ ಬಿಲ್ಲೆ ಇದೆಯೋ ಇಲ್ಲವೋ ಎಂದು ಮುಟ್ಟಿನೋಡಿಕೊಂಡು ಅಂಗಡಿಯ ಬೀದಿಯ ಕಡೆಗೆ ಹೊರಟೆ.

ಈ ಊರ ಅಂಗಡಿಯಲ್ಲಿ ನಮಗೆ ಸಿಕ್ಕಬೇಕಾದುದು ತಾನೇ ಏನಿದೆ. ಇಲ್ಲ ಬಾಳೆಯ ಹಣ್ಣು, ಇಲ್ಲ ತೆಂಗಿನಕಾಯಿ, ಇಲ್ಲ ಕೊಬ್ಬರಿ ಮಿಠಾಯಿ. ಕೊಬ್ಬರಿ ಮಿಠಾಯಿಯನ್ನು ಈ ವಯಸ್ಸಿನಲ್ಲಿ ನಾನೇ ಹೋಗಿಕೊಂಡು ತಿನ್ನುವಹಾಗಿಲ್ಲ. ಮರ್ಯಾದೆ ಹೋಗುತ್ತದೆ. ಹುಡುಗರ ಕೈಯಲ್ಲಿ ತರಿಸಬೇಕು-ಎದೆಗಾರಿಕೆಯ ಕೆಲಸ. ಎಲ ಎಲ ಇದೇನು ಕೇಡುಗಾಲ, ನಮ್ಮ ರಾಮನ ಅಂಗಡಿಯಲ್ಲಿ ಒಂದು ಹಲಸಿನ ಹಣ್ಣು ಇದೆ ಈವೊತ್ತು. ಮುಳ್ಳು ತೋರವಾಗಿ ಅದರ ಮೊನಚು ಕಪ್ಪು ತಿರುಗಿದೆ. ಒಳಮೈ ಹಳದಿಯಾಗಿದೆ. ಒಳ್ಳೆ ಹದದ ಹಣ್ಣು. ಹೊಸೂರಿನ ಮರದ್ದಿರಬೇಕು ಎಂದು ನಾನು ಒಂದು ತೆರದ ಉದಾಸೀನ ಭಾವದಿಂದ (ಖರೀದಿ ಹೆಚ್ಚಾಬಾರದೆಂದು)-ಅದರ ಮೌಲ್ಯವನ್ನು ವಿಚಾರಿಸಿ, ಎರಡಾಣೆಗೇ