ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫

ಬೀದಿಯ ಬಸವ

ಎಸೆಯುತ್ತಾ ಹವಣಾಗಿ ಹೊಸಿಲ ಮೇಲೆ ಕುಳಿತೆ. ಕುಳಿತು ನಾನೂ ಅದನ್ನು ದುರುದುರು ನೋಡಿದೆ. ಈ ದೃಷ್ಟಿಯುದ್ಧದಲ್ಲಿ ನಾವಿಬ್ಬರೂ ಸೋಲಲಿಲ್ಲ. ಇಬ್ಬರೂ ಮೆತ್ತಗಾದೆವು ಅಷ್ಟೆ. ಸ್ವಲ್ಪಹೊತ್ತಿನ ಮೇಲೆ ಹಲಸಿನ ತೊಳೆಯ ರುಚಿ ನನ್ನ ಬಾಯಿಗೂರಿ, ಸಿಪ್ಪೆಯ ರುಚಿ ಬಸವನ ಬಾಯಿಗೂರಿ, ಕೀತಿನ ಕಿರುತೊಳೆಗಳು ದಕ್ಕದೆ ಹೋದುವಲ್ಲಾ ಎಂದು ಕರೆಕರೆ ಹಿಂಗಿ, ನಮ್ಮಿಬ್ಬರ ಮನಸ್ಸೂ ಇಂತು ಸ್ವಸ್ಥವಾದಾಗ, ಬಸವ ನನಗೆ ಅಷ್ಟು ಭಯಂಕರನಾಗಿ ಕಾಣಲಿಲ್ಲ. ಬೇಡದವನಾಗಿಯೂ ತೋರಲಿಲ್ಲ. ನಮ್ಮ ಮನೆ ಕರುವಿನ ತಂದೆಯಾಗಿರಬಹುದೀತ. ಈವೊಂದು ದಿನವಾದರೂ ಈ ತೊಂಡು ತಿರುಗುವ ಅಳಿಯನನ್ನು ಭಾವಿಸೋಣ ಎಂದುಕೊಂಡು ನಮ್ಮ ಮನೆ ಹಸುವಿಗೂ ಕೆಲವು ಸಿಪ್ಪೆಗಳನ್ನು ಮಿಗಿಸಿಟ್ಟುಕೊಳ್ಳದೆ ಎಲ್ಲವನ್ನೂ ಬಸವನಿಗೇ ಬಿಟ್ಟುಕೊಡಬೇಕೆಂದು ಮನಸ್ಸು ಮಾಡಿ ನಾನು ತೊಳೆಯನ್ನು ಮೆಲ್ಲುತ್ತಾ ಅದಕ್ಕೆ ಕೀತನ್ನೆಸೆಯುತ್ತಾ ಈತನ ಪರಿಚಯಭಿಕಾಂಕ್ಷೆಯಿಂದ ಕುಳಿತೆ.

ಬಸವ ದಿಟವಾಗಿ ಬಲು ದೊಡ್ಡದು. ನಮ್ಮ ಓಣಿಯ ತುಂಬ ಅದೇಯೆ. ನಾನು ಹೊರಕ್ಕೂ ಹೋಗುವ ಹಾಗಿಲ್ಲ, ಬೇರೆಯವರು ಮನೆಯೊಳಕ್ಕೂ ಬರುವ ಹಾಗಿಲ್ಲ, ಹಾಗೆ ನಿಂತುಬಿಟ್ಟಿದೆ. ಇದನ್ನು ಹಿಡಿದು ನಿಲ್ಲಿಸುವವರು ನಮ್ಮ ಊರಿನಲ್ಲಿ ಯಾರೂ ಇಲ್ಲ. ಕಿರುಬನ ಕೈಯಲ್ಲಿ ಪರಚಿಸಿಕೊಂಡು ಅದನ್ನು ತಿವಿದು ಎತ್ತಿಹಾಕಿ ಬದುಕಿ ಬಂದಿತ್ತು ಈ ಪ್ರಾಣಿ. ತನ್ನನ್ನು ಕೆಣಕಿದವರನ್ನು ಇದು ತಿವಿಯುವುದಕ್ಕೆ ಹಿಂದು ಮುಂದು ನೋಡುತ್ತಿರಲಿಲ್ಲ. ಹಣ್ಣು ಕಾಯಂಗಡಿಯವರಿಗೂ ಇದರ ಅಂಜಿಕೆ ಹೆಚ್ಚು. ಇದರಿಂದ ನಮ್ಮೂರಿಗೆ ಒಂದು ಕಳೆ. ತುರುಗಾಹಿ ಈರನೊಬ್ಬನಿಗೇ ಇದರೊಡನೆ ಬಳಕೆ ಮತ್ತು ಮಾತು. ನಾನು ಊರಿಗೆ ಬಂದಾಗ ಇದನ್ನು ಆಗಾಗ ದೂರದಿಂದ ನೋಡಿದ್ದೆನೇ ಹೊರತು ಇಷ್ಟು ಹತ್ತಿರದಲ್ಲಿ ಈ ಪೂಸನ್ನ ಭಾವದಲ್ಲಿ ನೋಡಿರಲಿಲ್ಲ. ಇಂಥ ಮಹಾ ವೃಷಭನನ್ನು ನಾನು ಕೌತುಕದಿಂದ ನೋಡುತ್ತಾ, ಈ ಬೃಹದ್ವಸ್ತುವನ್ನು ನಮ್ಮ ಮನೆ ಓಣಿಗೆ ತಂದ ಈ ಸಣ್ಣ, ನಾನೆತ್ತಿಕೊಂಡು ಬರುವಂಥ, ಹಲಸಿನ ಹಣ್ಣಿನ ಪರಾಕ್ರಮವನ್ನು ಮೆಚ್ಚುತ್ತಾ ಇರುವಾಗ, ಗೂಳಿಯ ಕಣ್ಣಿನ ಹತ್ತಿರವಿದ್ದ ಒಂದು ಕರಿಯ ಮಚ್ಚೆ ನನಗೆ ಪರಿಚಿತವಾದಂತೆ ನೆನಪಾಗಿ, ಕರುವಾಗಿದ್ದಾಗ ಅದನ್ನು ನಾನು ಚೆನ್ನಾಗಿ ಬಲ್ಲೆ ಎಂಬ ಒಂದು ತಿಳಿವಳಿಕೆ ಉಂಟಾಯಿತು. ಅದನ್ನು ಪ್ರಶ್ನಿಸಲು ಕುತೂಹಲಗೊಂಡೆ.