ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨

ಪು.ತಿ.ನ.ಸಮಗ್ರ

ಶ್ವಾಸೋಚ್ಛ್ವಾಸಗಳಿಂದ ಎಲ್ಲ ಪ್ರಾಣಿಗಳ, ಮುಖ್ಯ ನಮ್ಮ ಕುಲದ ಆತ್ಮವಂತಿಕೆಯನ್ನು ನಾವು ಗುರುತಿಸುತ್ತೇವೆ. ಮಹತ್ತಾದ ಆಸೆ ಬೇಸರಗಳುಳ್ಳವನು ಮಹಾತ್ಮ-ನಿರಾಶನು ಅನಾತ್ಮ; ದಿಗಿಲುಪಡಬೇಡ-ನೀನು ಆತ್ಮವಂತ;-ನಿನ್ನನ್ನು ರಾಮ ಎಷ್ಟು ಸಲ ಅಟ್ಟಿದರೂ ಈ ಹಣ್ಣಿನ ವಿಚಾರದಲ್ಲಿ ನೀನು ನಿರಾಶನಾಗಲಿಲ್ಲ. ಇಷ್ಟು ಸಾಕು ನಿನ್ನ ಆತ್ಮವಂತಿಕೆಗೆ. ಆದರೆ ಹೀಗೆ ಕರೆಯಿಸಿಕೊಳ್ಳದೆ, ಕರೆದವರ ಅಂತಸ್ತು ಎಷ್ಟು ಎಂದು ಭಾವಿಸದೆ, ಈ ಸಣ್ಣ ಹಲಸಿನ ಹಣ್ಣಿನ ಎಳತಕ್ಕೆ ಸಿಕ್ಕಿ ನನ್ನ ಮನೆಗೆ ಬಂದೆಯಲ್ಲಾ-ನಿನ್ನಾತ್ಮ ನನ್ನದಕ್ಕಿಂತ ಈ ವಿಷಯದಲ್ಲಿ ಲಘು. ಮಾತು ಎಲ್ಲಿಗೋ ಹೋಯಿತಲ್ಲಾ-ತಿಳಿವಳಿಕೆ ಹೆಚ್ಚಾದರೆ ಈ ರೀತಿ ಕಾಡು ಮೇಯುವುದಕ್ಕೆ ಹೋಗುತ್ತದೆ ಬುದ್ಧಿ. ನಮ್ಮ ಪ್ರಾಣಕ್ರಿಯೆ ನಮ್ಮ ದೇಹದಲ್ಲೆ ಇರುವ ಶ್ವಾಸಕೋಶದಿಂದ ನಡೆಯುತ್ತದೆ. ರಾಗ ಭೋಗವಿರಾಗಾತ್ಮಕವಾದ ಪೂರಕಕುಂಭಕರೇಚಕ ಕರ್ಮವುಳ್ಳ ಆತ್ಮಕ್ರಿಯೆ ಅರ್ಥಕೋಶದ ಮೂಲಕ ನಮಗೆ ನಡೆಯಬೇಕಾಗಿದೆ. ನಿನಗೆ ಈ ಅಂಗವಿಲ್ಲ. ನಿನ್ನಾತ್ಮಸ್ಥಿತಿ ಮೇಲು ಗಾಳಿಯನ್ನು ಶ್ವಾಸಿಸಲಾರದಿದ್ದರೂ ನೀರಿನಲ್ಲಿ ಜೀವಂತವಾಗಿರುವ ಮೀನಿನಂತಿದೆ.

ನಮ್ಮಲ್ಲಿ ಬಹುಭಾಗದವರಿಗೆ ಈ ಅಂಗ ಸುಷ್ಠುವಾಗಿ ಅರೋಗವಾಗಿ ದೊರೆತಿಲ್ಲ. ನಾವು ಅನೇಕರು ಈ ಕೋಶವನ್ನು ಅದು ಇರಬೇಕಾದ ಹಾಗೆ ಪಡೆಯದೆ, ಆಮೆಯಂತೆ, ಕಪ್ಪೆಯಂತೆ, ತಿಮಿಂಗಿಲದಂತೆ ಇನ್ನೂ ಅರ್ಧ ನೆಲ ಅರ್ಧ ಜಲ ಜೀವಿಗಳಾಗಿದ್ದೇವೆ ಈ ಆತ್ಮವಿಚಾರದಲ್ಲಿ. ಜಲಚರವಾದದ್ದು ಸ್ಥಲಚರವಾಗುವುದಕ್ಕೆ ಎಷ್ಟು ಕಷ್ಟಪಟ್ಟಿರಬೇಕು, ಎಷ್ಟು ಕಾಲ ಎಷ್ಟು ಸಾವು ನೋವುಗಳನ್ನು ಅನುಭವಿಸಿ ನಾವೆಲ್ಲ ಈ ರೂಪವನ್ನೂ ಅಂಗಸಂಪತ್ತಿಯನ್ನೂ ಪಡೆದೆವು ನೋಡು. ಈ ನಿನ್ನ ದೇಹ-ಹಿಳಿಲು-ಗೊರಸು-ಬಾಲ-ಕೊಂಬು ನಿನ್ನ ಪೂರ್ವಾರ್ಜಿತ ಕರ್ಮಫಲ, ನನ್ನದೂ ಹಾಗೆಯೇ, ``ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವಚಾರ್ಷಭ ತಾನ್ಯಹಂ ವೇದ ಸರ್ವಾಣಿ, ನ ತ್ತ್ವಂವೇತ್ಥ ಪರಂತಪ.

ಅವರವರ ಆಸೆಯಂತೆ ಅವರವರ ವೇಷ! ಹಾಗೆಯೇ ಮಾನವ ಕುಲ ಸುಷ್ಠು ಕುಶಲ ಅರ್ಥಕೋಶವನ್ನು ಪಡೆದು ಆತ್ಮವಂತವಾಗುವುದಕ್ಕೆ ಬಹುಕಾಲದಿಂದ ಶ್ರಮಿಸುತ್ತಿದೆ. ಇದನ್ನು ಸಾಧಿಸುವವರೆಗೂ ಅದಕ್ಕೆ ನೆಮ್ಮದಿಯಿಲ್ಲ. ಲೋಕ ಇದುವರೆಗೆ ನಡೆದು ಬಂದಿರುವುದು ಈ ಕೋಶವನ್ನು ಪೂರ್ಣರೂಪದಲ್ಲಿ ನಿರೋಗವಾಗಿ ಪಡೆದ ಅಲ್ಪ ಸಂಖ್ಯಾತರಿಂದಲೇ. ಆಸೆಯುಸಿರನ್ನು ಸರಾಗವಾಗಿ ಸಹಜವಾಗಿ ಆಡಿಸುವುದಕ್ಕೆ ಯಾರಿಗೆ ಬೇಕಿಲ್ಲ? ಇಂಗ್ಲೆಂಡ್ ಮುಂತಾದ ದೇಶಕ್ಕೆ ಕೆಮ್ಮಲು ನೆಗಡಿ, ಅಮೇರಿಕಾ ಮೊದಲಾದವುಗಳಿಗೆ ಒಂದು ತೆರದ ಮೇಲುಬ್ಬಸ, ಜರ್ಮನಿ