ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬

ಈಚಲು ಮರದ ಕೆಳಗೆ

ನನಗೆ ತೆಂಗಿನಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿದು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ ಕುಡಿಯುವಂತಿಲ್ಲ. ಕೊಬ್ಬರಿಯ ಸುದ್ದಿಯೇ ಕಾಣೆ. ಅಲ್ಲಿ ಅವನು ಅನುಭವಿಸಬೇಕು, ಇಲ್ಲಿ ನಾನು ಈ ಪದಾರ್ಥಗಳನ್ನು ಒಂದಕ್ಕೆ ಹತ್ತರಷ್ಟು ಕೊಟ್ಟು ಕೊಂಡುಕೊಳ್ಳಬೇಕು. ಈ ಕಾಯಿಗಳೆಲ್ಲಾ ನನ್ನ ದಕ್ಷತೆಯನ್ನು ನೋಡಿ ನಗುವಂತೆ ಕಾಣುತ್ತವೆ. ಆದ್ದರಿಂದ ಇವುಗಳ ಮತ್ತು ಈ ಮರಗಳ ದರ್ಶನ ನನಗೆ ಅಪ್ರಿಯ.

ಆದರೆ ಅದರ ಗೆಳೆಯನಾದ ಈಚಲು ಮರವನ್ನು ಕಂಡರೆ ನನಗೆ ಏನೋ ಒಂದು ಅಭಿಮಾನ. ಇದರ ಧೈರ್ಯವೇ ಧೈರ್ಯ, ದಾಷ್ಟೀಕವೇ ದಾಷ್ಟೀಕ. ಇದು ಇಲ್ಲದ ಜಾಗವಿಲ್ಲ. ಮೈದಾನದಲ್ಲಿ ಎಲ್ಲಿ ಸ್ವಲ್ಪ ನೀರಿನ ಆಸರೆ ಇದ್ದರೆ ಅಲ್ಲಿ ಇದು ಹಾಜರು. ತಾನೇ ಕಾಡಾಗಿ ಬೆಳೆದರೂ ಸರಿಯೆ, ಒಂಟಿಯಾಗಿದ್ದರೂ ಸರಿಯೆ, ಇದು ನಿರ್ಭಯವಾಗಿ ಯಾರ ಹಂಗೂ ನನಗೆ ಬೇಡ, ನನ್ನನ್ನು ತಡೆಯುವವನಾವನು ಎಂದುಕೊಂಡು ಗುಂಗುರುತಲೆಯ ಗರಿಯನ್ನಲ್ಲಾಡಿಸುತ್ತಾ ನಿಂತಿರುತ್ತದೆ. ತರುಗಳಲ್ಲಿ ಇದು ಮ್ಲೇಚ್ಛ, ಕಲ್ಪದ್ರುಮಗಳಲ್ಲಿ ಕೌಶಿಕ ಕಲ್ಪದ್ರುಮ. ಹೊಲದ ಮಧ್ಯದಲ್ಲೋ ಗಿಡದ ಮಧ್ಯದಲ್ಲೋ ತೊರೆಯ ತಡಿಯಲ್ಲೋ ಗುಡಿಯ ತೋಟದಲ್ಲೋ ಹಾಳು ಮಂಟಪದ ಬದಿಯಲ್ಲೋ-ಅಂತೂ ಎಲ್ಲಾದರೂ ಸರಿಯೆ ಇದು ನಿಲ್ಲುವ ನಿಲುವೇ ನಿಲುವು! ಜನಕ್ಕೇನೋ ಇದನ್ನು ಕಂಡರೆ ಅಸಹ್ಯ, ಇದರ ಸೋಂಕು ಮೈಲಿಗೆ. ಆದರೆ ಅವರ ಮೂಗುಮುರಿತಕ್ಕೆ ಸರಿಯಾದ ಬಿಂಕ ಇದಕ್ಕೂ ಉಂಟು. ಕಾಸಿದ ಬಂಗಾರದಂಥ ಬಣ್ಣದ ಹೊಂಬಾಳೆಯನ್ನು ಮೆರೆಸುತ್ತಾ ತನ್ನ ನೀಳವಾದ ಅಲಗಿನಂತಿರುವ ಗರಿಗಳನ್ನು ಗಾಳಿಯಲ್ಲಿ ಅಲುಗಿಸುತ್ತಾ ಸಿತಾರು ಬಾರಿಸುವವನಂತೆ ನಿಂತಿರುವ ಈ ಮ್ಲೇಚ್ಛತರುವಿಲಾಸಿ ನನಗೆ ಯಾವಾಗಲೂ ಹೃದ್ಯನೇ.