ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಚಲು ಮರದ ಕೆಳಗೆ

೬೭

ಇದರಿಂದ ನನಗೂ ಇದಕ್ಕೂ ಸರಸಸಂಬಂಧವುಂಟೆಂದು ಯಾರೂ ಭಾವಿಸಬಾರದು. ಇದು ವ್ಯಸನಕ್ಕೆ ಕಾರಣವಾಗಬಹುದೆಂದು ನಾನು ಜಾಗರೂಕನಾಗಿಯೇ ಇದ್ದೇನೆ. ಆದರೆ ಒಂದು ದಿನ ಅದರ ತಲದಲ್ಲಿ ನಾನು ಕುಳಿತುಕೊಳ್ಳಬೇಕಾಯಿತು. ಸಂದರ್ಭ ಹೀಗೆ: ನಮ್ಮೂರ ತೊರೆ ಎಂದರೆ ನನಗೆ ಪ್ರೀತಿ. ಒಂದು ಬೇಸಗೆಯ ಮಧ್ಯಾಹ್ನ ನಾನು ಅದರ ಕಣಿವೆಯಲ್ಲಿ ಓಡಾಡುತ್ತಿದ್ದೆ. ಗೆಳೆಯರು ಬುತ್ತಿ ತೆಗೆದುಕೊಂಡು ಹಿಂದಿನಿಂದ ಬರುತ್ತೇವೆ ಎಂದಿದ್ದರು. ನಾನು ಒಬ್ಬನೇ ಮುಂದಾಗಿ ಹೊರಟು ಕಾಡುಮೇಡೆಲ್ಲಾ ಸುತ್ತಿ ದಣಿದು ತೊರೆಯ ಸನಿಯಕ್ಕೆ ಬಂದೆ. ಕುಳಿತುಕೊಳ್ಳೋಣ ಎಂದರೆ ಎಲ್ಲೂ ನೆರಳಿಲ್ಲ. ಆದರೆ ಆ ಕಣಿವೆಯ ನಟ್ಟನಡುವೆ ತೊರೆ ಹರಿಯುವ ಜಾಗದಲ್ಲೇ ಒಂದು ದೊಡ್ಡ ಈಚಲಮರ ನಿಂತಿದೆ. ಅದರ ಕೆಳಗೆ ಒಂದು ಪೂಶಸ್ತವಾದ ಬಂಡೆ. ಆ ಬಂಡೆಯನ್ನು ತೊರೆ ತೊಳೆಯುತ್ತಾ ಹರಿಯುತ್ತಿದೆ. ಒಂದು ಮಾರು ದೂರದಲ್ಲಿ ಈ ಜಡೆಯಷ್ಟಗಲದ ನೀರ ಹರಿವು ಒಂದು ಆಳುದ್ದದ ನಾಲಗೆಯ ಕಲ್ಲಿನಿಂದ ಕೆಳಕ್ಕೆ ಧುಮುಕುತ್ತದೆ. ಇದಕ್ಕಿಂತ ಒಳ್ಳೆಯದಾದ ಜಾಗವನ್ನು ಎಲ್ಲಿ ತರೋಣ? ನಾನು ನಿರ್ವಾಹವಿಲ್ಲದೆ ಆ ಬಂಡೆಯ ಮೇಲೆ ಕುಳಿತೆ. ಮೇಲೆ ಈಚಲುಮರ. ಕಾಶಕುಸುಮದ ಚಾಮರದಂತೆ ಇದರ ಗರಿಯ ನೆರಳು ಮೃದುವಾಗಿ ನನ್ನ ತಲೆಯಮೇಲೆ ಬೀಸುತ್ತಿತ್ತು. ನನಗೇನೋ ಹಾಯಾಯಿತು. ಆದರೆ ಆ ಸ್ವಾದುವಾದ ನೆರಳನ್ನು ಚೆಲ್ಲುತ್ತಿದ್ದ ಮರ ಈಚಲು ಮರ! ಒಂಟಿಯಾಗಿದ್ದರೂ ಅದು ದಿಟ್ಟವಾಗಿತ್ತು. ಅದರ ಗರಿಗಳು ಚಟುವಟಿಕೆಯನ್ನು ತೋರುತ್ತಿದ್ದವು. ಆ ಗರಿಗಳು ಸ್ತಬ್ಧವಾಗಿದ್ದಾಗ ಸಿಪಾಯಿಗಳ ಅಟೆನ್ಷನ್ ರೀತಿ, ಅಲುಗಾಡುವಾಗ ಕವಾಯತ್ತಿನ ರೀತಿ ತೋರುತ್ತಿದ್ದುವು. ಅದು ಹಣ್ಣು ಹಿಡಿದ ಮರ. ಮರಕ್ಕೆ ಆ ಸಮಯದಲ್ಲೂ ಧ್ಯಾನಮೌನಗಳಿದ್ದಂತೆ ಕಾಣಲಿಲ್ಲ. ಸೂರ್ಯ ಸುಟ್ಟರೆ ಸುಡಲಿ, ಹಳ್ಳ ಒಣಗಿದರೆ ಒಣಗಲಿ, ತಾನೇನೋ ತಂಪಾಗಿದ್ದೇನೆ ಸಾಕು ಎನ್ನುವಂತಿತ್ತು ಅದು. ಅದನ್ನು ತುಸ ಕಾಲ ನಿಟ್ಟಿಸಿ ಭಲಾಪ್ಪ ಎಂದೆ.

ತಲೆಯ ಮೇಲೆ ನೆರಳು, ಕಾಲಿನ ಮೇಲೆ ಶೀತಲವಾರಿ, ಸುತ್ತ ನಿದಾಘರವಿಕಿರಣಸಮುದ್ರ. ನನಗೆ ಸ್ವಲ್ಪ ಜೊಂಪು ಹಿಡಿಯಿತೇನೋ. ಅಥವಾ ಈಚಲುಮರದ ಮಹಿಮೆಯೋ; ಅದೇ ಇರಬೇಕು. ಮನಸ್ಸು ಹಬೆಹಬೆಯಾಗಿ ಎದ್ದು ನನ್ನ ತಲೆಯ ಮೇಲೆ ತೇಲುತ್ತಿರುವಂತೆ ನನಗೆ ತೋರಿತು. ನನ್ನ ದೇಹ ಸ್ಥಿರ, ಮನಸ್ಸು ಅಸ್ಥಿರ; ನಾನು ಹೊಗೆಯಾಡುತ್ತಿದ್ದ ಕಾರ್ಖಾನೆಯ ಚಿಮಣಿಯಂತೆ ವನದೇವತೆಗಳಿಗೆ ಕಂಡಿರಬೇಕು. ಅಂತು ಪ್ರತ್ಯಕ್ಷದ ಕಠೋರ