ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮

ನೆರಳು-ನಡುನೆರಳು-ಪಡಿನೆರಳು

ಬೆಳಗ್ಗೆ ನಾನು ಹೊರಗೆ ಹೊರಡಬೇಕಾದರೆ ಪೂರ್ವದಿಕ್ಕಿನ ಕಡೆಗೆ ಹೊರಡುತ್ತೇನೆ; ಸಂಜೆ, ಪಶ್ಚಿಮದ ಕಡೆಗೆ. ನನಗಿಂತ ನನ್ನ ನೆರಳು ಉದ್ದವಾಗಿರುವುದನ್ನು ನೋಡಿ ನಾನು ಸಹಿಸಲಾರೆ. ಹಿಂದೆ ಅದು ಬಾಲಾಂಗಚ್ಛೆಯ ಹಾಗೆ ಬಂದರೆ ಬಂದುಕೊಳ್ಳಲಿ, ನಾನು ಬೇಡವೆನ್ನುವುದಿಲ್ಲ, ಬಾಲದ ಹಾಗಾಯಿತು. ಅದನ್ನು ಮುಂದೆ ಬಿಟ್ಟುಕೊಂಡು ಹೋಗುವುದೇನು ಚೆನ್ನು. ಅದೇನು ಸೀಮೆಯ ನಾಯಿ ಕೆಟ್ಟುಹೋಯಿತೆ? ನಾನು ದೊಡ್ಡವನೋ ನನ್ನ ನೆರಳು ದೊಡ್ಡದೋ? ಅದನ್ನು ನಾನು ಮೆರೆಸಬೇಕೆ? ಬಾಲ್ಯದಲ್ಲಿ ಈ ಬೀದಿಯಿಂದ ಆ ಬೀದಿಯವರೆಗೂ ನನ್ನ ನೆರಳು ಲಂಬಿಸಿರುವುದನ್ನು ನೋಡಿ ನಾನೇನೋ ಆನಂದಪಟ್ಟಿರಬಹುದು. ಈಗ ಅಂಥ ಬಾಲಿಶಭಾವ ನನಗೆ ಖಂಡಿತ ಇಲ್ಲ. ಅಷ್ಟೇಕೆ, ಈಗ ನನಗೆ ಸಂಜೆ-ಬೆಳಗ್ಗೆ ಈ ಎರಡು ಕಾಲಗಳಿಗಿಂತ ಮಧ್ಯಾಹ್ನ ವಾಕಿಂಗ್ ಹೊರಡುವುದಕ್ಕೇ ಹೆಚ್ಚು ಇಷ್ಟ. ಏಕೆಂದರೆ ಆಗ ಪೆಡಂಭೂತ ಗುಜ್ಜಾರಿಭೂತವಾಗುತ್ತದೆ. ಆಗ ಅದು ನನ್ನ ಸಂಪೂರ್ಣ ವಶವರ್ತಿ. ಅದನ್ನು ಹೆಜ್ಜೆಹೆಜ್ಜೆಗೂ ತುಳಿಯುತ್ತಾ ಅಂಧಕಾಸುರನನ್ನು ಮೆಟ್ಟುವ ಶಿವನ ಉತ್ಕರ್ಷವನ್ನು ನಾನು ಅನುಭವಿಸಬಹುದು. ಇದೇನು ಸಾಮಾನ್ಯವಾದ ಆನಂದವೇ? ಆದರೆ ಮಧ್ಯಾಹ್ನಕ್ಕಿಂತಲೂ ಕೃಷ್ಣಪಕ್ಷದ ರಾತ್ರಿ ಇನ್ನೂ ಚೆನ್ನು. ಆಗ ನನಗೂ ದೇವತೆಗಳಂತೆ ನೆರಳೇ ಇರುವುದಿಲ್ಲ. ಅದಕ್ಕೇ ನನಗೆ ಇರುಳನ್ನು ಕಂಡರೆ ಪ್ರೀತಿ. ತಮ್ಮ ನೆರಳಿಗೆ ತಾವಂಜಿಕೊಳ್ಳುವವರು ಅಥವಾ ಅಸಹ್ಯಪಟ್ಟುಕೊಳ್ಳುವವರು ನಿಶಾಚರರಾಗಬಯಸುವುದು ಸಹಜ. ನನಗೆ ಅಂಥ ಬಯಕೆ.

ಹೀಗೆಂದಮಾತ್ರಕ್ಕೇ ನನ್ನಲ್ಲಿ ರಾಕ್ಷಸಾಂಶ ಹೆಚ್ಚೆಂದೂ ನನಗೂ ನನ್ನ ನೆರಳಿಗೂ ಪ್ರದ್ವೇಷವೆಂದೂ ಯಾರೂ ಭಾವಿಸಕೊಳ್ಳಕೂಡದು. ಅದರ ದ್ವೇಷವನ್ನು ಕಟ್ಟಿಕೊಂಡು ಬದುಕುವುದಕ್ಕಾಗುತ್ತೆಯೇ? ಆದರೆ ಎಷ್ಟೇ ಪ್ರಿಯವಸ್ತುವಾಗಲಿ ಅದು ಯಾವಾಗಲೂ, ನಮಗೆ ಬಿಡುವನ್ನೇ ಕೊಡದೆ, ಸುತ್ತು ಮುತ್ತು ಹಿಂಬಾಲಿಸಿ ಮುಂಬಾಲಿಸಿ ಪೀಡಿಸುತ್ತಿದ್ದರೆ, ಅದರ ವಿಚಾರವಾಗಿ ನಾವು ಕೆಲವು ವೇಳೆ ಬೇಸರಪಟ್ಟುಕೊಳ್ಳುವುದು ಸಹಜತಾನೆ.