ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦

ಪು.ತಿ.ನ.ಸಮಗ್ರ

ತನ್ನ ಅಂಗವಿಕಾರಗಳನ್ನು ಬಹು ಮನೋಜ್ಞವಾಗಿ ಮಾಡಿ ನಮ್ಮನ್ನು ನೋಯಿಸದಂತೆ ಅಣಕಿಸುತ್ತಾನೆ. ಉದ್ದವಾಗುತ್ತಾನೆ, ಅಡ್ಡವಾಗುತ್ತಾನೆ, ಕಡ್ಡಿಯಾಗುತ್ತಾನೆ, ಗಿಡ್ಡನಾಗುತ್ತಾನೆ, ಗುಜ್ಜಾರಿಯಾಗುತ್ತಾನೆ, ಭೀಮನಾಗಿ ಬೆಳೆಯುತ್ತಾನೆ, ಕಬಂಧನಂತೆ ತನ್ನ ಹೊಟ್ಟೆಯೊಳಕ್ಕೆ ತನ್ನ ತಲೆಯನ್ನು ಅಡಗಿಸಿಕೊಂಡು ವಿಕಾರನಾಗುತ್ತಾನೆ. ಈ ವಿಕಾರಗಳಲ್ಲಿ ನಮ್ಮನ್ನು ಟೀಕಿಸುವ ಬಗೆ ಸ್ವಲ್ಪವೂ ಇಲ್ಲ. ಈ ಎಲ್ಲ ನಟನೆಗಳೂ ನಮ್ಮ ಸ್ವರೂಪಕ್ಕೆ ನಾವೇ ನಗುವಂತೆ ಮಾಡುತ್ತವೆ ಅಷ್ಟೆ. ನಮಗೆ ನಾವೇ ನಗದಿದ್ದರೆ ಈ ಬಾಳಿನಲ್ಲಿ ಉಲ್ಲಾಸವನ್ನು ಪಡೆಯುವುದೆಂತು? ಈ ವಿದೂಷಕನ ವೈದುಷ್ಯ ನಮಗೆ ಪದೇ ಪದೇ ಲಭಿಸದಿದ್ದರೆ ನಾವು ಹೇಗೆ ತಾನೆ ಗೆಲುವಾಗಿರುವುದಕ್ಕೆ ಸಾಧ್ಯ?

ನಮ್ಮ ನೆರಳಿನಲ್ಲಿ ಮತ್ತೊಂದು ಅನಘರ್ಯ್‌ವಾದ ಗುಣವಿದೆ. ಇದು ಬಿಂಬ ಸಹಚರಿ. ಈ ಸಾಹಚರ್ಯವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆಯೇ ಹೆಂಡತಿಯರು ಗಂಡಂದಿರನ್ನು ನೆರಳಿನಂತೆ ಅನುವರ್ತಿಸಬೇಕು ಎಂದು ಪೂರ್ವಿಕರು ಹೇಳುತ್ತಿದ್ದುದು. ಆದರೆ ಈಗ ಕಾಲ ಬದಲಾಯಿಸಿದೆ. ನೆರಳಿನಂತಿರುವ ಹೆಂಡತಿಯರು ಈಗ ಯಾರಿಗೂ ಬೇಡ; ಪ್ರತಿಬಿಂಬದಂತಿರುವ ಪೋಯಸಿ ಬೇಕು. ನೆರಳು ಪತ್ನಿ, ಪ್ರತಿಬಿಂಬ ಪ್ರೇಯಸಿ. ನೆರಳು ಚೆನ್ನೋ ಪ್ರತಿಬಿಂಬ ಚೆನ್ನೋ-ನೆರಳನ್ನು ನನ್ನಂಥವರಲ್ಲದೆ ಮಿಕ್ಕವರಾರು ಗಮನಿಸುತ್ತಾರೆ? ಪಡಿನೆಳಲನ್ನು ಗಮನಿಸದೆಯೇ ಇರುವುದು ಹೇಗೆ? ನೆರಳನ್ನು ನೀವು ಮೆಚ್ಚಬಹುದು. ಇಲ್ಲ ಅದಕ್ಕೆ ಅಸಹ್ಯಸಿಕೊಳ್ಳಬಹುದು. ಇದರಿಂದ ಅದಕ್ಕೆ ಹಿಗ್ಗೂ ಇಲ್ಲ ತಗ್ಗೂ ಇಲ್ಲ. ಅದು ನಿರ್ಲಿಪ್ತ, ಆದರೂ ಸದಾಸಕ್ತ. ನಿಮ್ಮ ಪ್ರತಿಬಿಂಬದ ರೀತಿಯೇ ಬೇರೆ; ನೀವು ನೆನೆದ ವೇಳೆಯಲ್ಲಿ ಅದನ್ನು ಕಾಣಲಾರಿರಿ. ಅದಕ್ಕೆ ದರ್ಪಣದ ದೌತ್ಯಬೇಕು. ನಿಮ್ಮ ವಿಷಾದ ಹರ್ಷಗಳು ಅದಕ್ಕೂ ತಟ್ಟುತ್ತವೆ. ಪ್ರತಿಬಿಂಬ ನಿಮ್ಮ ವ್ಯಾಮೋಹವನ್ನೇ ಅಪೇಕ್ಷಿಸುತ್ತದೆ; ಅದಕ್ಕೆ ನಿಮ್ಮ ಪ್ರೇಮ ಸಾಲದು. ಅದಕ್ಕೆ ಮೋಹಗೊಳ್ಳದೆ ನೀವು ಅದನ್ನು ಪಡೆಯಲಾರಿರಿ. ನಿಮ್ಮ ವಿಲಾಸದ ಕುರುಹು, ಆತ್ಮಾಭಿಮಾನದ ಪ್ರತೀಕ, ನಿಮ್ಮ ಪ್ರತಿಬಿಂಬ ನಿಮ್ಮ ಸಂಪೂರ್ಣ ಲಕ್ಷ್ಯವನ್ನು ಅದು ತನ್ನ ಕಡೆಗೆ ಸೆಳೆದುಕೊಳ್ಳುತ್ತದೆ. ನಿಮಗೆ ನಿಮ್ಮ ಬೆನ್ನನ್ನು ತೋರಿಕೊಡುವ ವಸ್ತು ನಿಮ್ಮ ನೆರಳು; ಮುಖವನ್ನು ಪ್ರತಿಬಿಂಬ. ನಿಮಗೆ ಏನು ಮೆಚ್ಚು, ಬೆನ್ನೋ ಮುಖವೋ? ವೈರಾಗ್ಯವೋ ಶೃಂಗಾರವೋ, ಭವಸಹಿಷ್ಣುತೆಯೋ ಭಾವವಿಲಾಸವೋ, ನೀತಿಶಠತೆಯೋ ರಸಿಕಜೀವನವೋ, ವೇದಾಂತವೋ ವಿಜ್ಞಾನವೋ? ಯುವಕ ಯುವತಿಯರಿಗೆಲ್ಲಾ ಪಡಿನೆಳಲೇ ಇಷ್ಟ ಎಂದು ಹೇಳಬೇಕೆ? ಆದರೆ ಜೋಕೆ ಪರಾಶ್ರಯವಿಲ್ಲದೆ