ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೆರಳು-ನಡುನೆರಳು-ಪಡಿನೆರಳು


ಪ್ರತಿಬಿಂಬ ಲಭಿಸುವುದಿಲ್ಲ. ಈ ವಿಷಯದಲ್ಲಿ ನೆರಳು ಇದಕ್ಕಿಂತ ಎಷ್ಟೋ ವಾಸಿ. ಅದರ ಆವಿರ್ಭಾವಕ್ಕೆ ನಾವು ಯಾರ ಹಂಗನ್ನೂ ಕೋರುವ ಹಾಗಿಲ್ಲ. ಪ್ರತಿಬಿಂಬಕ್ಕೆ ಕನ್ನಡಿಬೇಕು, ಅದು ನಿರ್ದುಷ್ಟವೂ ನಿಸ್ಸ್ವಾರ್ಥವೂ ಆಗಿರಬೇಕು. ``ಇದೇ ನಾನು ಎಂಬ ವಿಷಯದಲ್ಲಿ ನಿಮಗೆ ನಿಷ್ಕೃಷ್ಟಜ್ಞಾನ ಬೇಕಾಗಿದ್ದರೆ ನಿಮ್ಮ ಕನ್ನಡಿಯ ವಿಷಯದಲ್ಲಿ ಜಾಗರೂಕರಾಗಿರಿ. ಈ ಆತ್ಮಜ್ಞಾನ ಸುಲಭವಾಗಿ ದೊರಕತಕ್ಕುದಲ್ಲ. ಏಕೆಂದರೆ ಈ ವಿಜ್ಞಾನ ಯುಗದಲ್ಲಿ ನಮ್ಮ ವಿಚಾರ ನಮಗೆ ಸುತರಾಂ ತಿಳಿಯದು. ಈಗ ನಮ್ಮ ಮನಸ್ಸೆಲ್ಲಾ ಬಹಿರ್ಮುಖವಾಗಿದೆ. ಅದಕ್ಕೆ ಅಂತರ್ ಮುಖತೆಯೇ ಇಲ್ಲ. ನಮ್ಮ ಪ್ರತಿಬಿಂಬಕ್ಕೂ ಏಕರೂಪತೆ ಇಲ್ಲ. ಒಂದೊಂದು ಕನ್ನಡಿಯಲ್ಲಿ ಅದು ಒಂದೊಂದು ತೆರನಾಗಿ ತೋರುತ್ತವೆ. ನಾವು ನಾವೆಂದುಕೊಂಡಿರುವಷ್ಟು ಚೆಲುವಾಗಿ ಯಾವ ಕನ್ನಡಿಯೂ ತೋರದು. ನಾವು ಇನ್ನೂ ಸುಂದರ ಯುವಕರೆಂದೇ ತಿಳಿದುಕೊಂಡಿರುವಾಗ ಕನ್ನಡಿ ಇದ್ದಕ್ಕಿದ್ದ ಹಾಗೆಯೇ ಸುಕ್ಕು ಮೋರೆಯನ್ನು ತೋರಿಸುವುದುಂಟು. ಈ ವಿಚಾರದಲ್ಲೂ ನೆರಳು ಪ್ರತಿಬಿಂಬಕ್ಕಿಂತಲೂ ಮೇಲು. ಕಾಲದೊಡನೆ ಈ ತರದ ಪಕ್ಷಪಾತ ನೆರಳಿಗೆ ಇಲ್ಲ. ಪ್ರತಿಬಿಂಬಕ್ಕೂ ಕಾಲಪುರುಷನಿಗೂ ಅತಿ ಮೈತ್ರಿ. ಇದನ್ನು ತಪ್ಪಿಸಬೇಕೆಂದೇ ಮನುಷ್ಯನ ಸಂತತ ಪೂಯತ್ನ. ಅವನು ಕನಸು ಕಾಣುವುದಕ್ಕೆ ಮೊದಲಿಟ್ಟುದು ಈ ಪ್ರಯತ್ನದಿಂದ. ಚಿತ್ರಕಲೆ ಬೆಳೆದುದು ಹೇಗೆ? ಈ ಉದ್ಯಮದ ಫಲವಾಗಿ ಅಲ್ಲವೆ? ರಾಜರು ತಮ್ಮ ಆಸ್ಥಾನಗಳಲ್ಲಿ ಕವಿಪುಂಗವರನ್ನು -ಅಂದರೆ ಶಬ್ದವರ್ಣಿಗಳನ್ನು-ಬೆಳೆಸಿ ಇಟ್ಟುಕೊಂಡಿದ್ದುದು ಬಿಂಬದಿಂದ ಪ್ರತಿಬಿಂಬವನ್ನು ಪ್ರತ್ಯೇಕಿಸುವ ಇಚ್ಛೆಯಿಂದ ಎಂದು ತೋರುವುದಿಲ್ಲವೆ? ಈ ವಿಜ್ಞಾನಯುಗದಲ್ಲಿ ಈ ವಿಚ್ಛೇದ ಸುಲಭವಾಗಿ, ಇವಕ್ಕೆ ಚಲಚ್ಚಿತ್ರ ಮಂದಿರಗಳು ಏರ್ಪಟ್ಟಿವೆ. ಚಿತ್ರಕಾರರಿಗೂ ಕವಿಗಳಿಗೂ ಈಗ ಸಹಜವಾಗಿಯೇ ಪುರಸ್ಕಾರ ಕಡಿಮೆ: ಈಗಿನ ಕಲಾವಿಲಾಸಿಗಳಿಗೆ ಬಿಂಬಗಳಿಗಿಂತಲೂ ಪ್ರತಿಬಿಂಬಗಳಲ್ಲೇ ಹೆಚ್ಚು ಆಸಕ್ತಿ ಮತ್ತು ವಿಶ್ವಾಸ. ಅಷ್ಟೇಕೆ, ಈಗ ಪಡಿನೆಳಲುಗಳಿಂದಲೇ ಬಿಂಬಗಳಿಗೆ ಯಶಸ್ಸು, ಗೌರವ, ಶ್ರೀಮಂತಿಕೆ. ಭವ್ಯ ಭವನಗಳಲ್ಲಿ ಇವಕ್ಕೆ ಈಗ ನಮ್ಮೆಲ್ಲರ ಪೂಜೆ ಸರ್ವದಾ ಸಲ್ಲುತ್ತಿದೆ. ಈ ಪೂತಿಬಿಂಬ ಪ್ರೀತಿಯೇ ನಮ್ಮ ರಸಿಕತೆಯ ಮಾನವೂ ಆಗಿದೆ. ಪ್ರಾಚೀನ ಗ್ರೀಕರು ಇಂಥ ಭವನಗಳನ್ನು ನೋಡಿದ್ದರೇ ಅವರು ಅವನ್ನು ಪ್ರೇತಭವನಗಳೆಂದು ಕರೆಯುತ್ತಿದ್ದರು. ಅವರಿಗೂ ಈ ಬಿಂಬ-ಪ್ರತಿಬಿಂಬ-ವಿಚ್ಛೇದ ಪ್ರೀತಿ ಇತ್ತು. ಆದರೆ ಇದನ್ನು ಸಾಧಿಸುವಷ್ಟು ವಿಜ್ಞಾನವನ್ನು ಅವರು ಬೆಳಸಿಕೊಳ್ಳಲಿಲ್ಲ. ಬದುಕಿರುವಾಗ ಬಿಂಬದಲ್ಲಿ ಪ್ರತಿಬಿಂಬಗಳೆಲ್ಲಾ ಐಕ್ಯವಾಗುತ್ತಾ