ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

111

"ಅವರು ಹೋದ್ಮೇಲೆ__"
"ಗೊತ್ತು ಬಿಡು. ಹಾ ಪ್ರಿಯಾ ಪ್ರಶಾಂತ ಹೃದಯಾ ಹಾನಿ_"
"ಥೂ_ಥೂ...ಮೈಸೂರು ಮಲ್ಲಿಗೇದು ಹಾಡ್ದೆ."
"ಬೇರೆ ಗವಾಯಿಗಳೂ ಇದ್ರೋ?"
"ಇಲ್ದೆ ಇರ್ತಾರ್ಯೆ? ಆದರೆ ಕೊನೇಲಿ_"
"ಏನಾಯ್ತು?"
"ಹಾಡು ಕೇಳೋಕೆ ಬಂದಿದ್ಲೂಂತ ಮೊದಲ್ನೇ ಮನೆ ಯಜಮಾನ ಹೆಂಡತಿಗೆ
ಹೊಡೆದ್ನಂತೆ."
ಬರುತ್ತ ತಾನು ಕಂಡ ದೃಶ್ಯ......ಶಂಕರನಾರಾಯಣಯ್ಯನಿಗೆ ಸ್ಪಷ್ಟವಾಯಿತು
ಈಗ.
"ಅವನಾ_ ಪೋಲಿಸ್ನೋನು! ಅವನ ಪಿಂಡ."
ಪೊಟ್ಟಣವನ್ನು ಬಿಚ್ಚಿ ಚಂಪಾ ಹೂವಿನ ಸುವಾಸನೆಯನ್ನು ಒಳಕ್ಕೆಳೆದು ಶ್ವಾಸ
ಕೋಶಗಳನ್ನು ತುಂಬಿಕೊಂಡಳು. ಆ ಕ್ಷಣ ಮತ್ತೊಮ್ಮೆ ಗಂಡನ ಎದೆಯಲ್ಲಿ ಒರಗುವ
ಮನಸ್ಸಾಯಿತು. ಆದರೆ ಆಗಲೆ ಅತಿಯಾಗಬಾರದೆಂದು ಆಕೆ ಮನಸ್ಸನ್ನು ಬಿಗಿಹಿಡಿದು
ಅಡುಗೆ ಮನೆಯತ್ತ ಹೋದಳು.
"ಆ ದೀಪಾನ ಇನ್ನೂ ಸ್ವಲ್ಪ ಈಚೆಗೆ ತರಬೇಕೂಂದ್ರೆ."
ಆತ ಬಟ್ವೆ ಬದಲಾಯಿಸಿ, ಬಲ್ಬಿನ ಮೇಲುಗಡೆ ಒಂದು ದಾರವನ್ನು ಕಟ್ಟಿ
ಅಡುಗೆ ಮನೆಯ ಛಾವಣಿಯತ್ತ ಎಳೆದು ಬಿಗಿದ. ನಡುವಿನ ಗೋಡೆಗೆ ನೇರವಾಗಿ
ದೀಪ ಬಂದು, ಎರಡೂ ಕಡೆ ಒಂದೇ ಸಮನೆ ಬೆಳಕು ಬಿತ್ತು.
"ಸಾಕೇನೆ?"
"ಹೂಂ. ಸಾಕು. ಸರಿಯಾಗಿದೆ."
ತನ್ನ ಬಡಕಲು ಕುರ್ಚಿಯ ಮೇಲೆ ನಿಂತಿದ್ದ ಶಂಕರನಾರಾಯಣಯ್ಯ ಕೆಳಕ್ಕೆ
ಧುಮುಕುತ್ತ ಹೇಳಿದ:
"ಈಗ ಅಡ್ಡಗೋಡೆ ಮೇಲೆ ಇಟ್ಟ ಹಾಗಾಯ್ತು."
ಚಂಪಾ ನಕ್ಕಳು.
ಆ ದಿನ ತಾನು ಮಾಡಿದ ಕೆಲಸ; ನಡೆದ ಮಾತುಕತೆ; ಹಳೆಯ ಸ್ನೇಹಿತ
ನೊಬ್ಬನ ಸಂದರ್ಶನ; ಹಿಂದೆ ವಾಸವಾಗಿದ್ದ ಮನೆಯ ಪ್ರದೇಶದ ಪರಿಚಿತರೊಬ್ಬರು
ಭೇಟಿಯಾದದ್ದು....ಚಂದ್ರಶೇಖರಯ್ಯನ ಜತೆಯಲ್ಲಿ ಕಾಫಿ ಕುಡಿದದ್ದು....
ಪ್ರತಿಯೊಂದರ ವರದಿಯನ್ನೂ ಆತ ಹೆಂಡತಿಗೆ ಒಪ್ಪಿಸಿದ. ಆಕೆ ಹೂಂಗುಟ್ಟುತ್ತಾ
ಅಡುಗೆ ಮಾಡಿದಳು. ಅನ್ನ ಬೆಂದಿತು. ತಿಳಿಸಾರು ಸಿದ್ಧವಾಯಿತು.
ಚಂಪಾ ಹಾಸಿಗೆ ಹಾಸಿದಳು. ತನ್ನ ತೊಡೆಯ ಮೇಲೆಯೇ ನಿದ್ದೆ ಹೋಗಿದ್ದ
ಮಗುವನ್ನು ಶಂಕರನಾರಾಯಣಯ್ಯ ಹಾಸಿಗೆಯ ಮೇಲೆ ಮಲಗಿಸಿದ.