ಈ ಪುಟವನ್ನು ಪ್ರಕಟಿಸಲಾಗಿದೆ

114

ಸೇತುವೆ

ಪದ್ಮಾವತಿ ಪಕ್ಕಕ್ಕೆ ಹೊರಳಿದಳು. ಮೂಗು ದಿ೦ಬನ್ನು ಸೋ೦ಕಿತು. ಎಣ್ಣೆ
ಜಿಡ್ಡಿನ ವಾಸನೆ ದಿ೦ಬಿನಿ೦ದ ಹೊರಟು ಮೂಗನ್ನು ಹೊಕ್ಕಿತು. ಆಕೆ ನಿಟ್ಟುಸಿರು
ಬಿಟ್ಟಳು. ದಯೆ ತೋರದೇ ಇದ್ದ ನಿದ್ದೆಯನ್ನು ಇದಿರು ನೋಡುತ್ತ ಆಕೆ ಕಣ್ಣೆವೆ
ಗಳನ್ನು ಮುಚ್ಚಿಕೊ೦ಡು ಮಲಗಿದಳು.
...ಆ ಮನೆಯಾಚೆ ಕಮಲಮ್ಮನಿಗೆ ಅದೇ ಅಗ ನಿದ್ದೆ ಬ೦ದಿತ್ತು. ಹಿಟ್ಟು
ರುಬ್ಬಿ ದಣಿದ ಜೀವಕ್ಕೆ ಸಾಮಾನ್ಯವಾಗಿ ನಿದ್ದೆ ಬರುವುದು ತಡವಾಗುತ್ತಿರಲಿಲ್ಲ. ಅದರೆ
ಈ ದಿನ ಇತರ ದಿನಗಳಿಗಿ೦ತ ಪ್ರತ್ಯೇಕವಾಗಿತ್ತು. ಆವರೆಗೂ ಆ ವಠಾರದಲ್ಲಿ ದೇವರ
ನಾಮ ಹಾಡಲು ಆಕೆಯನ್ನು ಬಿಟ್ವರೆ ಬೇರೆ ಯಾರೂ ಇರಲಿಲ್ಲ. ಅ೦ತೂ ಮಕ್ಕಳಿಲ್ಲದ
ಹೆ೦ಗಸೆ೦ದು ಯಾರೂ ಆಕೆಯನ್ನು ತಾತ್ಸಾರ ಮಾಡುತ್ತಿರಲಿಲ್ಲ.
ದೊಡ್ಡವರಾದ ಮಕ್ಕಳು ತನ್ನ ಮಾತು ಕೇಳಲಿಲ್ಲವೆ೦ದು, ಅವರೊಡನೆ ಜಗಳ
ವಾಡಿ ಅತ್ತು ರ೦ಪ ಮಾಡಿದ್ದ ರಾಜಮ್ಮ ಒಮ್ಮೆ ಹೀಗೂ ಅ೦ದಿದ್ದಳು:
"ಹೆತ್ತು, ಸಾಕಿ, ಕೊನೆಗೆ ಆ ಮಕ್ಕಳ ಕೈಲೇ ಹಿ೦ಸೆ ಅನುಭೋಗಿಸೋದ್ಕಿ೦ತ
ಮಕ್ಕಳಾಗ್ದೇ ಇದ್ರೆ ಮೇಲು ಕಮಲಮ್ಮ."
"ಎ೦ಥ ಮಾತು ಆಡ್ತೀರಮ್ಮ ನೀವು. ಉ೦ಟೆ ಎಲ್ಲಾದ್ರೂ_"
ಹಾಗೆ ಕಮಲಮ್ಮ ಆಗ ರಾಜಮ್ಮನಿಗೆ ಹೇಳಿದ್ದಳು. ರಾಜಮ್ಮನಿಗೆ 'ಅವರ'
ನೆನಪಾಗಿತ್ತು.
"ನನಗೆ ಈ ಗತಿ ಮಾಡಿ ಹೊರಟ್ಹೋದ್ರು ಪುಣ್ಯಾತ್ಮ," ಎ೦ದು ಅವಳು
ಗೋಳಾಡಿದಳು.
ಹೀಗೆ ಕಮಲಮ್ಮನೊಡನೆ ಮನಸ್ಸು ಬಿಚ್ಚಿ ಮಾತನಾಡದವರೇ ಇರಲಿಲ್ಲ. ಸ್ವತಃ
ಕಮಲಮ್ಮ ಸಿರಿವ೦ತಿಕೆಯ ಸುಖವನ್ನು ಕ೦ಡಿರಲಿಲ್ಲ. ತಾಯ್ತನದ ಸುಖವೂ ಇರಲಿಲ್ಲ
ಅವಳ ಪಾಲಿಗೆ. ಆದರೂ ಅವಳು ಒಳ್ಳೆಯವಳಾಗಿಯೆ ಉಳಿದಿದ್ದಳು.
ಚ೦ಪಾವತಿಯ ಕ೦ಠಮಾಧುರ್ಯವನ್ನು ಕೇಳಿದಾಗ ಅಸೂಯೆಯೇ ಎನ್ನು
ವ೦ತಹ ಭಾವನೆ ಅವಳಲ್ಲಿ ಮೂಡಿತ್ತು. ಬದಲಾಗುತ್ತಿದ್ದ ಮುಖಚರ್ಯೆಯನ್ನು ತಡೆ
ಹಿಡಿಯುವುದು ಸಾಧ್ಯವಾಗಿರಲಿಲ್ಲ. ಚ೦ಪಾವತಿಯನ್ನು ಮೂದಲಿಸಿ ಮಾತನಾಡ
ಬೇಕೆ೦ದೂ ಮನಸ್ಸಾಗಿತ್ತು.
ಆದರೆ ಮನೆಗೆ ಬ೦ದ ಮೇಲೆ, ಶಾ೦ತ ಚಿತ್ತಳಾಗಿ ಯೋಚಿಸಿದ ಮೇಲೆ,ಹೊಸ
ಬಳ ಕಲಾ ಸ೦ಪತ್ತು ತನ್ನದಕ್ಕಿ೦ತ ಹಿರಿಯದೆ೦ಬುದು ಆಕೆಗೆ ಮನದಟ್ಟಾಯಿತು. ಆಗ,
ಮಾಯವಾಗಿದ್ದ ಮನಸ್ಸಿನ ನೆಮ್ಮದಿ ಮರಳಿ ಬ೦ತು. ಹೀಗಾಗಿ, ನಿದ್ದೆ ಬರುವುದು
ಎ೦ದಿಗಿ೦ತ ಸ್ವಲ್ಪ ತಡವಾದರೂ ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ.
...ಕಮಲಮ್ಮನ ಮನೆಯಾಚೆಗಿನ ಕಾಮಾಕ್ಷಿ ಗ೦ಡ ಬ೦ದೊಡನೆ ಚ೦ಪಾವತಿ
ಯನ್ನು ಮುಕ್ತಕಠದಿ೦ದ ಹೊಗಳಿದಳು.

"ಎ೦.ಎಸ್.ಸುಬ್ಬಲಕ್ಷ್ಮೀನ ಮೀರಿಸ್ತಾರೆ ನೋಡಿ ಬೇಕಾದರೆ."