ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

125

'ಈಗ ಬೇಡ'-ಎಂದು ಧೈರ್ಯವಾಗಿ ಹೇಳಿ ಬಂದಿದ್ದ ನಿಜ. ಹಿಂದೆಯೇನೋ,
ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂತ ಆತ ಖಡಾಖಂಡಿತವಾಗಿ ವಾದಿಸುತ್ತಿದ್ದ.
ಈಗ ವಾದಿಸುತ್ತಿರಲಿಲ್ಲ. ಮದುವೆ ಅನಿವಾರ್ಯವೆಂದು ಬಾಯಿ ತೆರೆದು ಹೇಳುತ್ತಿರ
ಲಿಲ್ಲವಾದರೂ ಹಾಗೆಂದು ಅತನಿಗೆ ಆಗಲೇ ಮನವರಿಕೆಯಾಗಿತ್ತು.
ಆ ಯೋಚನೆ ಬಂದಾಗಲೆಲ್ಲ ರಾಧಾ ಈಗ ಅವನ ಕಣ್ಣೆದುರು ನಿಂತಂತಾಗು
ತ್ತಿತ್ತು. ತಾನು ಬಂದ ಹೊಸತಿನಲ್ಲಿ, ಇದೊಂದು ಬರಿಯ ಹುಡುಗ ಎಂದು ಆತ
ಸುಮ್ಮನಿದ್ದ. ಆದರೆ ಈ ಎರಡು ವರ್ಷಗಳಲ್ಲಿ ಆಕೆ ಎಷ್ಟೊಂದು ಬೆಳೆದುಬಿಟ್ಟಿದ್ದಳು.
ಒಂಟಿ ಇಟ್ಟಿಗೆಯ ಗೋಡೆಯಾಚೆ ನಿದ್ದೆ ಹೋಗಿತ್ತು ಆ ಸಂಸಾರ....ಜಯ
ರಾಮು... ರಾಧಾ.

೧೩

ಬೇಸೆಗೆಯ ಬೇಗೆಗೆ ಊರು ಬೇಯುತ್ತಿದ್ದಾಗಲೇ ಒಮ್ಮೆಲೆ ಒಂದು ಸಂಜೆ ಮಳೆ
ಹನಿಯಿತು.
"ಮಳೆ ಬಂತು! ಮಳೆ ಬಂತು!" ಎಂದು ವಠಾರದ ಹುಡುಗರೆಲ್ಲ ಕುಣಿದರು.
ರಂಗಮ್ಮನೂ ಹೆಬ್ಬಾಗಿಲ ಬಳಿ ನಿಂತು ಒದ್ದೆಯಾಗುತ್ತಿದ್ದ ಅಂಗಳವನ್ನು ನೋಡಿದರು.
ಮಳೆ ಬರತೊಡಗಿದಾಗ ಅವರ ಮುಖ ಎಂದೂ ಗೆಲುವಾಗುತ್ತಿರಲಿಲ್ಲ.

ಆ ದಿನ ಹನಿ ಮಳೆ ಅಷ್ಟಕ್ಕೆ ನಿಂತಿತು.
ರಂಗಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟು ಒಳಕ್ಕೆ ಬಂದರು.
ಕರಿಯ ಮೋಡಗಳು ಕರಗಿ ಹೋಗಿ, ಅರಳೆ ರಾಶಿ ತೋರಿ ಬಂದು, ಶುಭ್ರ
ಆಕಾಶ ಕಾಣಿಸಿಕೊಂಡು, ಹೊಂಬಿಸಿಲು ಭೂಮಿಯ ಮೇಲೆ ಬಿತ್ತು.
"ಹೋ ಹೋ ಹೋ ಹೋ!" ಎಂದು ಹುಡುಗರು ಗದ್ದಲ ಮಾಡುತ್ತ ಅಂಗಳ
ಬಿಟ್ಟು ಬೀದಿಗಿಳಿದರು.
ರಂಗಮ್ಮನಿಗೆ ಗೊತ್ತಿತ್ತು. ಇದು ಆರಂಭ ಮಾತ್ರ. ಕಷ್ಟದ ದಿನಗಳ ಮುಂದಿ
ದ್ದುವು. ಪ್ರತಿವರ್ಷವೂ ಆ ದುಸ್ಥಿತಿಯ ಪುನರಾವರ್ತನೆ ಆಗುತ್ತಲೇ ಇದ್ದು, ರಂಗಮ್ಮ
ನಿಗೇನೋ ಬಹಳ ಮಟ್ಟಿಗೆ ಅದು ರೂಢಿಯಾಗಿತ್ತು. ಆದರೂ ಮಳೆಗಾಲದಲ್ಲಿ
ರಂಗಮ್ಮನ ವಠಾರ ಕಳೆಗೆಟ್ಟು ಹೋಗುತ್ತಿದ್ದುದನ್ನು ಅವರು ಕಾಣುತ್ತ ಬಂದಿದ್ದರು.
ದೇವರ ಮುಂದೆ ಕುಳಿತಾಗ, "ಮಳೆಗಾಲ ಸುಲಭವಾಗಿ ಕಳೆದುಹೋಗಲಪ್ಪಾ ಪರ
ಮಾತ್ಮಾ" ಎಂದು ಹೆಚ್ಚಿನ ಪ್ರಾರ್ಥನೆಯನ್ನು ಸೇರಿಸುತ್ತಿದ್ದರು.
ಮತ್ತೆ ನಾಲ್ಕು ದಿನ ಹನಿ ಬೀಳಲಿಲ್ಲ.