ಈ ಪುಟವನ್ನು ಪ್ರಕಟಿಸಲಾಗಿದೆ

136

ಸೇತುವೆ

ಒಂದು ಕ್ಷಣ ತಡೆದು ಪ್ರಶಂಸೆಯನ್ನು ರಂಗಮ್ಮ ಮತ್ತೂ ಮುಂದುವರೆಸಿದರು:
"ಒಳ್ಳೆ ಹುಡುಗ ಪರಮೇಶ್ವರಪ್ಪ. ಯಾವ ಗಲಾಟೇನೂ ಇರ್ಲಿಲ್ಲ. ರಾತ್ರೆ
ಯೆಲ್ಲಾ ದೀಪ ಉರಿಸ್ದೇನೇ ಪ್ಯಾಸ್ ಮಾಡ್ಕೊಂಡ."
ಸುಬ್ಬುಕೃಷ್ಣಯ್ಯನೆದ್ದು, ರಂಗಮ್ಮನನ್ನು ಅವರ ಯೋಚನೆಗಳ ಪಾಡಿಗೆ ಬಿಟ್ಟು,
ಊಟಕ್ಕೆ ಹೊರಟ.
...ರಂಗಮ್ಮನ ಪಕ್ಕದ ಮನೆಯಾಕೆಯೂ ಮಕ್ಕಳೊಡನೆ ಬಂದಳು. ಒಬ್ಬನಿಗೆ
ತೇರ್ಗಡೆಯಾಗಿತ್ತು. ಇನ್ನೊಬ್ಬ ಅಷ್ಟು ಭಾಗ್ಯವಂತನಾಗಿರಲಿಲ್ಲ.
...ಜಯರಾಮುವಿನ ತಂದೆ ಮತ್ತೊಂದು ಪ್ರವಾಸ ಮುಗಿಸಿ ಮನೆಗೆ ಬಂದರು.
"ಈ ಮಳೇಲಿ ಇನ್ನು ಎರಡು ತಿಂಗಳು ಹೊರಗೆ ಕಾಲು ಹಾಕೋ ಹಾಗೇ ಇಲ್ಲ.
ಉಸ್ಸಪ್ಪ!" ಎಂದು ಉದ್ಗಾರ ತೆಗೆದರು.
ಸೆಪ್ಟೆಂಬರ್ ತಿಂಗಳನ್ನು ಇದಿರು ನೋಡುತ್ತಾ, ಕೊನೆಯ ಹಂತವನ್ನು ದಾಟಿ
ಮುಗಿಸಲು ಜಯರಾಮು ಸಿದ್ಧತೆ ನಡೆಸಿದ.
ಹಸ್ತ ಸಾಮುದ್ರಿಕದ ಪದ್ಮನಾಭಯ್ಯ ಅಳಿಯನೂರಿಗೆ ಹೋಗಿ, ತಿಂಗಳು ತುಂಬಿದ್ದ
ಮಗಳನ್ನು ಗೌರಿಹಬ್ಬಕ್ಕೆಂದು ಕರೆದು ತಂದ. ಮೈ ತುಂಬಿ ಮುದ್ದಾಗಿದ್ದ ಆಕೆಯನ್ನು
ಕಂಡು ಕಾಮಾಕ್ಷಿಗೆ ಒಂದು ವಿಧವಾಯಿತು. ಆಕೆಗೆ ಪದ್ಮನಾಭಯ್ಯನ ಮಗಳ ಪರಿ
ಚಯವೂ ಇರಲಿಲ್ಲ. ಎರಡು ದಿನ ಹಾಗೆಯೇ ಇದ್ದ ಮೇಲೆ ಅಹಲ್ಯಾ ಅವರಿಬ್ಬರಿಗೂ
ಪರಿಚಯ ಮಾಡಿಸಿಕೊಟ್ಟಳು. ಪದ್ಮನಾಭಯ್ಯನ ಮಗಳು ಪರಮಸುಖಿಯೇನೂ
ಆಗಿರಲಿಲ್ಲ. ಆಕೆಯ ಗಂಡ ಒಳ್ಳೆಯವನಾಗಿದ್ದ. ಆದರೆ ಆತನದೇನೂ ಮನೆಯಲ್ಲಿ
ನಡೆಯುತ್ತಿರಲಿಲ್ಲ. ಇತರರು ಅವಳಿಗೆ ಹಿಂಸೆ ಕೊಡುತ್ತಿದ್ದರು. ಆ ಕಥೆಯನ್ನೆಲ್ಲ
ಕೇಳುತ್ತ, ಕಾಮಾಕ್ಷಿ ತಾನೇ ಪರವಾಗಿಲ್ಲ ಎಂದುಕೊಂಡಳು.
ಪದ್ಮನಾಭಯ್ಯ ಅಲ್ಲೇ ಇದ್ದರೂ ವಠಾರದವರು ಯಾರೂ ಅವನಿಗೆ ಕೈ ತೋರಿ
ಸಲು ಬರಲಿಲ್ಲ. ಹಿತ್ತಲ ಗಿಡ ಮದ್ದಲ್ಲ. ಅಲ್ಲದೆ ವಠಾರದವರ ಕೈ ಓದುವ ಇಷ್ಟವೂ
ಆತನಿಗಿರಲಿಲ್ಲ.
ಚಂದ್ರಶೇಖರಯ್ಯನ ಹೆಸರು_ಹಲಿಗೆ ಅವನ ಕಣ್ಣಿಗೆ ಬಿತ್ತು . ಎದುರು ಬದಿಯ
ಕೊನೆಯ ಮನೆಯವರ ಖ್ಯಾತಿ ಕಿವಿಗೆ ಬಿತ್ತು. ಪದ್ಮನಾಭಯ್ಯ ಶಂಕರನಾರಾಯಣಯ್ಯನ
ಪರಿಚಯ ಮಾಡಿಕೊಂಡ.
"ನೀವು ನನಗೊಂದು ಬೋರ್ಡು ಯಾಕೆ ಬರಕೊಡ್ಬಾರ್ದು?"
"ಓಹೋ! ಅದಕ್ಕೇನು? ಬರೆಯೋಣ_ಬರೆಯೋಣ."
"ಪಾಮಿಸ್ಟ್ರಿ ಬೋರ್ಡು ಒಂದಿದ್ರೆ ಚೆನ್ನಾಗಿರುತ್ತೆ. ಅಲ್ಲ ಅಂತೀರಾ?"
"ಚಿನ್ನಾಗಿರುತ್ತೆ! ನೀವು ಎರಡಡಿ ಉದ್ದ ಒಂದಡಿ ಅಗಲದ್ದು ಒಳ್ಳೇ ಹಲಿಗೆ
ಸಂಪಾದಿಸ್ಕೊಂಡು ಬನ್ನಿ."

"ನೀವು ಕೆಲಸ ಮಾಡೋ ಕಡೆ ಯಾವುದಾದರೂ ಚೂರು..."