ಈ ಪುಟವನ್ನು ಪ್ರಕಟಿಸಲಾಗಿದೆ

150

ಸೇತುವೆ

ಮತ್ತೆ ಎರಡು ನಿಮಿಷಗಳಲ್ಲಿ ವೆಂಕಟೇಶ ಬಂದ. ಆತನನ್ನು ಮನೆಯೊಳಕ್ಕೆ
ಬರಬಿಡುತ್ತ ತಾಯಿ ಕೂಗಾಡಿದಳು.
"ನನ್ನ ಮಾನ ಕಳೀಬೇಕೂಂತ ಮಾಡಿದೀಯೇನೋ ಮುಂಡೇಗಂಡ!"
ಇಂತಹ ವಿಷಯಗಳಲ್ಲಿ ತಪ್ಪೆಲ್ಲಾ ಹುಡುಗಿಯರದೇ ಎಂಬುದು ಆಕೆಯ ನಿಶ್ಚಿತ
ಅಭಿಪ್ರಾಯ. ತನ್ನ ಮಗನನ್ನು ಬಲೆಗೆ ಕೆಡವಲು ಮುಂದಾದ ಪಾಪಿಯನ್ನು ದಂಡಿ
ಸಲು ಕೈಯಲ್ಲಿ ಪೊರಕೆ ಹಿಡಿದು ಆಕೆ ಹೊರಟಳು.
ಮನೆಯ ದೀಪಗಳೆಲ್ಲ ಬೆಳಗಿದವು. ವಠಾರವೆಲ್ಲ ಓಣಿಗೆ ಇಳಿಯಿತು. ರಾಜಮ್ಮ
ನಡು ಓಣಿಯಲ್ಲಿ ನಿಂತು ಗುಡುಗಿದಳು:
"ಎಲ್ಲಿ ಆ ಗಯ್ಯಾಳಿ ಅಹಲ್ಯಾ! ಬಾರೇ ಇಲ್ಲಿ! ನನ್ಮನೇನ ಮುಳುಗಿಸ್ಬೇಕೂಂತ
ಮಾಡಿದೀಯೇನೆ?"
ಸಂದರ್ಭವೇನೆಂದು ಊಹಿಸಿಕೊಂಡ ಚಂಪಾವತಿಯ ಹೃದಯ ತಣ್ಣಗಾಯಿತು.
ಆಕೆ ರಾಜಮ್ಮನನ್ನು ತಡೆಯಬೇಕೆಂದು ಅಂದಳು:
"ನಮ್ಮನೇ ಒಳಗ್ಬನ್ನೀಮ್ಮಾ, ಏನು ಸಮಾಚಾರ?"
"ನೀವು ಸುಮ್ನಿರಿ! ಯಾರೂ ನನ್ನ ತಡೀಬೇಡಿ! ಇವತ್ತು ಇವರ ಮಾನ
ಮರ್ಯಾದೆಯೆಲ್ಲಾ ಧೂಳೆಬ್ಬಿಸಿಬಿಡ್ತೀನಿ. ಕೆಟ್ಟ ರಂಡೆ!"
ರಾಮಚಂದ್ರಯ್ಯ ಮನೆಯಲ್ಲಿರಲಿಲ್ಲ. ಇದೇನು ಗಂಡಾಂತರ ಬಂತೆಂದು ಆತನ
ತಾಯಿ ನಡುಗಿದಳು. ರಾಜಮ್ಮನ ಬಾಯಿ ಮುಚ್ಚಿಸೋಣವೆಂದು ಅಹಲ್ಯೆಯ
ತಾಯಿ ಮಗಳನ್ನು ಕರೆದಳು.
"ಇಲ್ಲಿ ಬಾರೇ ಅಹಲ್ಯಾ! ಏನ್ಮಾಡ್ಕೊಂಡು ಬಂದ್ಯೇ?"
ಏನು ಮಾಡಿಕೊಂಡು ಬಂದಿರಬಹುದೆಂದು ಆಗಲೇ ಊಹಿಸಿದ್ದ ರಾಜಮ್ಮ,
ವಠಾರದ ಹೆಂಗಸರೆಲ್ಲರ ಮುಂದೆ, ಹೆಂಗಸರ ಹಿಂದೆ ನಿಂತಿದ್ದ ಕೆಲವರು ಗಂಡಸರಿಗೂ
ಕೇಳಿಸುವಂತೆ, ಅಂದಳು:
ನನ್ನ ಹೆಣ ಎತ್ತೋಕ್ಮುಂಚೇನೇ ವೆಂಕಟೇಶನ ಮೇಲೆ ಬಲೆ ಬೀಸಿದಾಳಲ್ರೀ ಈ
ಢಾಕಿಣಿ!ವಠಾರನ ಯಾಕಮ್ಮ ಹೊಲಸೆಬ್ಬಿಸ್ತೀಯೇ? ಬೇಕಿದ್ರೆ ಬೇರೆ ಬೀದಿಗೆ
ಹೋಗಿ ಅಂಗಡಿ ತೆರಕೋ!"
ಅಹಲ್ಯೆಯ ತಾಯಿ ಎಂದೂ ಧೈರ್ಯಪ್ರಕೃತಿಯವಳಾಗಿರಲಿಲ್ಲ. ರಾಜಮ್ಮನ
ಮಾತು ಕೇಳಿ ಅವಳ ಜಂಘಾಬಲ ಉಡುಗುಹೋಯಿತು. ಆದರೂ ಆಕೆ ಅಹಲ್ಯೆಯ
ತುರುಬು ಹಿಡಿದು ಹೊರಕ್ಕೆಳೆದು ಧಪಧಪನೆ ಗುದ್ದಿದಳು.
"ಅದೇನು ಬೊಗಳೇ! ಇಂಥಾಮಾತು ಕೇಳೋ ಹಾಗೆ ಮಾಡಿದ್ಯಲ್ಲೇ!"
"ನಾನೇನು ಮಾಡಿಲ್ಲಮ್ಮಾ, ಏನೂ ಮಾಡಿಲ್ಲ" ಎಂದು ಅಹಲ್ಯಾ
ರೋದಿಸಿದಳು.
ವೆಂಕಟೇಶ ಬಿರುಗಾಳಿಯಂತೆ ನುಗ್ಗಿ ತನ್ನ ತಾಯಿಯ ರಟ್ಟೆ ಹಿಡಿದೆಳೆದು