ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

173

ಓದಿದೋರೆಲ್ಲ ಒಳ್ಳೊಳ್ಳೆ ಕೆಲಸದಲ್ಲಿದ್ದಾರೆ."
"ಬರ್ತೀನಿ ತಾಯಿ," ಎಂದು ಮತ್ತೊಮ್ಮೆ ಹೇಳಿ ಗೌಡರು ಹೊರಟು
ಹೋದರು.
....ಪಿತೃಭಕ್ತಿ ಪುತ್ರವಾತ್ಸಲ್ಯದ ವಿವಿಧ ರೂಪಗಳು ಜಯರಾಮುವಿನ ಕಣ್ಣೆ
ದುರು ಕಟ್ಟಿದಂತಾಗಿ, ಆ ರಾತ್ರೆ ಬಹಳ ಹೊತ್ತು ಆತನಿಗೆ ನಿದ್ದೆ ಬರಲಿಲ್ಲ. ಕತೆಯಲ್ಲಿ
ಓದುವುದಕ್ಕಿಂತಲೂ ವಾಸ್ತವತೆಯಲ್ಲಿ ಬದುಕು ಎಷ್ಟೊಂದು ರುದ್ರತರ ಎಂದು ಯೋಚಿ
ಸುತ್ತ ಆತ ಮಲಗಿದ.
ರಾಜಶೇಖರನೂ ಚಿಕ್ಕ ಹುಡುಗನೂ ಊಟ ಮಾಡಿ ಬಂದರು. ಮೈಕೈ
ನೋಯುತ್ತಿದ್ದ ದೇವಯ್ಯ ಮುಸುಕೆಳೆದುಕೊಂಡು ಹಾಸಿಗೆಯ ಮೇಲೆ ಉರುಳಿದ.
ಆತನನ್ನು ಮಾತನಾಡಿಸಲು ರಾಜಶೇಖರ ಮಾಡಿದ ಯತ್ನಗಳೆಲ್ಲ ವಿಫಲವಾದುವು.
...ದಿನಗಳು ಕಳೆದುವು. ದೇವಯ್ಯ ಹೊತ್ತಿಗೆ ಸರಿಯಾಗಿ ಈಗ ಕೊಠಡಿಗೆ
ಬರುತ್ತಿದ್ದ.ದುಂದು ವೆಚ್ಚ ಮಾಡುತ್ತಿರಲಿಲ್ಲ. ಸಿಗರೇಟು ಸೇದುವುದು ಕಡಮೆ
ಯಾಯಿತು. ಪಾಠ ಪುಸ್ತಕಗಳನ್ನೋದುವ ಪ್ರಯತ್ನವನ್ನೂ ಆತ ಮಾಡುತ್ತಿದ್ದು
ದನ್ನು ರಾಜಶೇಖರ ಗಮನಿಸಿದ.
ತಂದೆ ಬಂದು ಹೋದ ಮೊದಲಲ್ಲಿ ಕೆಲವು ದಿನ ರಾಜಶೇಖರನೊಡನೆ ದೇವಯ್ಯ
ಮಾತನಾಡಲೇ ಇಲ್ಲ. ಒಂದು ದಿನ ಅವನ ಅಂತರ್ಯದ ಬೇಗುದಿ ಸ್ಛೋಟ
ವಾಯಿತು.
"ನನ್ಮೇಲೆ ಚಾಡಿ ಹೇಳಿ ನಿಂಗೇನಪ್ಪಾ ಬಂತು?"
ಅಂತಹ ಪ್ರಶ್ನೆಯನ್ನು ರಾಜಶೇಖರ ನಿರೀಕ್ಷಿಸಿರಲಿಲ್ಲ. ತನ್ನ ವಿಷಯದಲ್ಲಿ
ದೇವಯ್ಯ ಹಾಗೆ ತಪ್ಪು ತಿಳಿಯಬಹುದೆಂದು ಆತ ಕನಸಿನಲ್ಲೂ ಭಾವಿಸಿರಲಿಲ್ಲ.
"ಇಲ್ಲಪ್ಪೋ. ನಾನು ಹೇಳಿಲ್ಲ!"
ಅದು ನಿಜವೆಂದು ಚಿಕ್ಕವನು ಸಾಕ್ಷ್ಯ ನುಡಿದ.
ರಂಗಮ್ಮನೇ ವರದಿ ಕೊಟ್ಟಿರಬೇಕೆಂಬುದು ಸ್ಪಷ್ಟವಾಯಿತು. ದೇವಯ್ಯ ಆ
ಮುದುಕಿ ಕಣ್ಣಿಗೆ ಬಿದ್ದಾಗಲೆಲ್ಲ ಆಕೆಯನ್ನು ನುಂಗಿಬಿಡುವವನಂತೆ ನೋಡುತ್ತಿದ್ದ.
ಒಂದು ಸಂಜೆ, ಪದ್ಮಾವತಿಯ ಜತೆಯಲ್ಲಿ ಅಂಗಳದಲ್ಲಿ ನಿಂತಿದ್ದ ರಂಗಮ್ಮ,
ಕೊಠಡಿಗೆ ಹೋಗುತ್ತಿದ್ದ ದೇವಯ್ಯನನ್ನು ಕಂಡು, ಕೇಳಿದರು:
"ಏನಪ್ಪಾ ನಿಮ್ತಂದೆ ಕಾಗದ ಬರೆದಿದಾರೇನು?"
"ಹೂಂ."
ಉತ್ತರ ಚುಟುಕಾಗಿತ್ತು. ಅದೂ ಗೊಗ್ಗರ ಧ್ವನಿಯಲ್ಲಿ.
"ಊರಲ್ಲೆಲ್ಲಾ ಚೆನ್ನಾಗಿದಾರೊ?"
"ಹೂಂ."

ಮತ್ತೆ ಮೊದಲಿನಂತೆಯೇ.