ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

35

ಅದು ಪೂರ್ತಿ ನಿಜವಾಗಿರಲಿಲ್ಲ. ಎಷ್ಟೋ ವೇಳೆ ಬ್ರಾಹ್ಮಣೇತರ ಹುಡುಗರಿಗೆ
ಮೇಲಿನ ಕೊಠಡಿಯನ್ನು ಅವರು ಕೊಟ್ಟುದಿತ್ತು. ಆದರೆ, ಆ ಹುಡುಗರು ಅಲ್ಲಿ
ಅಡುಗೆ ಮಾಡಬಾರದೆಂಬ ಶರೆತವಿತ್ತು.
"ನಿಮ್ಮ ಹೆಸರು?"
"ಶಂಕರನಾರಾಯಣಯ್ಯ ಅಂತ. ನಾವು ಸ್ಮಾರ್ತರು."
"ಅದೇನೂ ಪರವಾಗಿಲ್ಲ. ನಮ್ಮ ವಠಾರದಲ್ಲಿ ಎಲ್ಲಾ ಥರದೋರೂ ಇದಾರೆ.

ಒಟ್ಟಿನಲ್ಲಿ ಬ್ರಾಹ್ಮಣರಾದರಾಯ್ತು."
"ಏನೂ ತೊಂದರೆ ಇಲ್ಲ. ನಾಲ್ಕು ಜನರ ಜತೇಲಿ ಹೊಂದಿಕೊಂಡು
ಹೋಗ್ತೇವೆ."
"ಸಂತೋಷ. ನಿಮಗೆ ಮದುವೆಯಾಗಿದೆ ತಾನೆ?"
ಆ ಪ್ರಶ್ನೆ ಕೇಳಿ ಆತನಿಗೆ ನಗು ಬಂತು. ಬಾಯಿ ಕಣ್ಣುಗಳನ್ನು ತೆರೆದು ಆತ
ಹಲ್ಲು ಕಿರಿದ.
"ಮದುವೆಯಾಗಿದೇಂತ್ಲೆ ಈ ತಾಪತ್ರಯ. ಇಲ್ದಿದ್ರೆ ಮನೆ ಹುಡುಕ್ಕೊಂಡು
ಯಾಕ್ಬರ್ತಿದ್ದೆ?"
ಆ ರಸಿಕತನದ ಉತ್ತರ ರಂಗಮ್ಮನಿಗೆ ಇಷ್ಟವಾಯಿತು. ಅವರೂ ಬಾಯ
ಗಲಿಸಿ, ಇನ್ನೂ ಉಳಿದಿದ್ದ ಕೆಲವು ಹಲ್ಲುಗಳನ್ನು ತೋರಿಸುತ್ತ, ಸದ್ದಿಲ್ಲದೆ ನಕ್ಕರು.
ಮರುಕ್ಷಣವೆ ಮಾಮೂಲಿನ ಉಪಚಾರದ ಮಾತುಗಳು ಹೊರಬಿದ್ದುವು.
"ಹಾಗೆ ಕೇಳ್ದೇಂತ ತಪ್ಪು ತಿಳ್ಕೋಬೇಡಿಪ್ಪಾ. ಬ್ರಹ್ಮಚಾರಿಗಳಿಗೆ ನಾವು ಮನೆ
ಕೊಡೋದಿಲ್ಲ."
ಬಂದವನಿಗಂತೂ, ಬ್ರಹ್ಮಚಾರಿಯಾಗಿದ್ದಾಗ ಮನೆ ಸುಲಭವಾಗಿ ಸಿಗದೆ ಪಟ್ಟಿದ್ದ
ಕಷ್ಟ ನೆನಪಿಗೆ ಬಂತು.
ಬ್ರಹ್ಮಚಾರಿಗಳಿಗೆ ರಂಗಮ್ಮನ ವಠಾರದಲ್ಲಿ ಆಸ್ಪದವಿಲ್ಲವೆಂಬುದೂ ಪೂರ್ತಿ ಸರಿ
ಯಾಗಿರಲಿಲ್ಲ. ವಿಮಾ ಸಂಸ್ಥೆಯ ಚಂದ್ರಶೇಖರಯ್ಯ ಹಿಂದೆ ಮನೆ ಕೇಳಲು ಬಂದಿ
ದ್ದಾಗ, ತನಗೆ ಮದುವೆಯಾಗಿದೆ ಎಂದೇ ಹೇಳಿದ್ದ. ಆದರೆ ವಾಸವಾಗಿರಲು ಬಂದಾಗ
ಇದ್ದುದು ಒಬ್ಬನೇ. ರಂಗಮ್ಮ ಅವನನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಮ್ಮೆ
" ಊರಲ್ಲಿದಾಳೆ" ಎಂದಿದ್ದ. ಮತ್ತೊಮ್ಮೆ "ತವರ್ಮನೇಲಿ." ರಂಗಮ್ಮ ಮತ್ತೂ ಗಲಾಟೆ
ಮಾಡಿದಾಗ ಅವನು ರೇಗಿ ಹೇಳಿದ: "ನಿಮಗೇನಮ್ಮ ಬಂದಿರೋ ಕಷ್ಟ? ಈ ವಠಾರ
ದಲ್ಲಿ ನನ್ನಷ್ಟು ತೆಪ್ಪಗೆ ಇರೋ ಇನ್ನೊಬ್ಬ ಮನುಷ್ಯನ್ನ ತೋರ್ಸಿ. ನಾನಿಲ್ಲಿರೋದು
ವಾರಕ್ಕೆರಡು ದಿನ. ಅಷ್ಟಕ್ಕೆ...." ರಂಗಮ್ಮ ಸುಮ್ಮನಾಗಿದ್ದರು. ಆತ ಸಮಯಕ್ಕೆ
ಸರಿಯಾಗಿ ಬಾಡಿಗೆ ಕೊಡುತ್ತದ್ದ. ವಿದ್ಯಾವಂತ. ಟೀಕ್ ಟಾಕ್ ಉಡುಪು ಧರಿಸಿ
ಅವನು ಹೋಗಿ ಬರುತ್ತಿದ್ದಾಗಲೆಲ್ಲ ರಂಗಮ್ಮನಿಗೆ ತಮ್ಮ ವಠಾರದ ಬಗೆಗೆ ಹೆಮ್ಮೆ
ಎನಿಸುತ್ತಿತ್ತು.