ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

57

"ಓ! ಸಾಯಂಕಾಲ ಯಾವಾಗ್ಲೂ ನಲ್ಲಿಗೆ ಬೀಗ ಹಾಕ್ತೀರೇನು?"
ಶೇಷಾದ್ರಿಪುರದ ಬಿಡಾರದಲ್ಲಿ ಬಾವಿಯಿಂದಲೆ ನೀರು ಸೇದುತ್ತಿದ್ದವಳು ಆಕೆ.
ಆದರೆ ಹಾಗೆಂದು ಇಲ್ಲಿ ತಿಳಿಸಲಿಲ್ಲ.
"ಹೂನಮ್ಮಾ. ಹಾಗೇ ಬಿಟ್ಟರೆ ಹುಡುಗರು ನಲ್ಲಿ ತಿರುಗಿಸಿ ಬಿಡುತ್ವೆ. ಬೀದೀಲಿ
ಹೋಗೋರು-ಬರೋರೂ ನೀರಿಗೆ ಬಂದ್ಬಿಡ್ತಾರೆ."
"ಹೌದೌದು. ಗತಿ ಇಲ್ದೆ ಅಲೆಯೋರ ಕಾಟ ಜಾಸ್ತಿಯಾಗಿಬಿಟ್ಟಿದೆ...."
ಎಂದು ಶಂಕರನಾರಾಯಣಯ್ಯ, ಗೋಣಿಯಿಂದ ಸಾಮಾನುಗಳನ್ನು ಹೊರತೆಗೆಯುತ್ತ,
ಹೇಳಿದ.
"ಮನೇಲೇ ಇರ್ತೀನಪ್ಪಾ. ಸಾಮಾನು ತೆಗೆದಿಡೋದು ಮುಗಿದ್ಮೇಲೆ ಬನ್ನಿ,"
ಎಂದು ಹೇಳಿ ರಂಗಮ್ಮ ಹೊರಟು ಹೋದರು.
"ಕೂತ್ಕೋ ಚಂಪಾ. ಹ್ಯಾಗಿದಾರೆ ಮಾಲಿಕರು?"
ಹೆಂಡತಿಯೊಡನೆ ಮಾತನಾಡಿದ ಶಂಕರನಾರಾಯಣಯ್ಯನ ಸ್ವರದಲ್ಲಿ ಬದಲಾ
ವಣೆಯಾಗಿತ್ತು; ಸ್ವಾಭಾವಿಕವಾಗಿ, ನಯವಾಗಿತ್ತು.
"ನೀವಂತೂ ಒಳ್ಳೇ ಮನೇನೆ ಹುಡುಕಿದೀರಿ!"
"ಯಾಕೆ? ಆ ಕೊಂಪೆಗಿಂತ ಈ ವಠಾರ ವಾಸಿಯಲ್ವೇನು?"
"ಅಲ್ಲ ಅಂದ್ನೆ? ತಮಾಷೆಯಾಗಿದೆ ಮುದುಕಿ. ಆದರೆ ನೀರು ಲೈಟಿನ ಅವಸ್ಥೆ
ನೋಡಿದರೆ ದಿನಾ ಜಗಳವಾಗುತ್ತೇನೋ ಅಂತ ಭಯವಾಗ್ತಿದೆ."
"ಶ್! ಮೆಲ್ಲಗೆ ಮಾತ್ನಾಡೇ! ಎದುರುಮನೆ_ಪಕ್ಕದ್ಮನೆ ... ಗೋಡೆ ಏನು ದಪ್ಪ
ಗಿದೇಂತ ತಿಳಕೊಂಡ್ಯಾ...?"
ಚಂಪಾವತಿ ನಕ್ಕಳು.
"ಒಳ್ಳೇದೇ ಆಯ್ತು. ಸದ್ಯಃ ನಿಮ್ಮ ಸರಸ ಸಲ್ಲಾಪವಾದರೂ ಕಮ್ಮಿ
ಆಗುತ್ತೊ?"
ಬೆವರು ಸುರಿಯುತ್ತಿದ್ದ ಮುಖ. ಅದಕ್ಕೆ ತಗಲಿದ ಯಾವುದೋ ಪಾತ್ರೆಯ
ಮಸಿ. ಮುಂದಕ್ಕೆ ಇಳಿದ ಕ್ರಾಪು. ಆ ಪರಿಸ್ಥಿತಿಯಲ್ಲೂ ಆತ ಹೆಂಡತಿಯನ್ನು
ನೋಡಿ ತುಂಟತನದ ನಗೆ ನಕ್ಕ.
"ಬಾಗಿಲು ಸ್ವಲ್ಪ ಮರೆ ಮಾಡೇ."
"ಯಾಕೆ?"
"ಬೇಕು. ಬಾಗಿಲು ಮುಚ್ಬಿಟ್ಟು ಹತ್ತಿರ ಬಾ."
"ಓಹೋ! ನಿಮ್ಮಿಷ್ಟ ನೆರವೇರ್ದ ಹಾಗೆಯೇ. ಆ ತೊಟ್ಟಿಲಿಂದ ಒಂದಿಷ್ಟು
ಕನ್ನಡಿ ತಗೊಂಡು ನಿಮ್ಮ ಮುಖ ನೋಡ್ಕೊಳ್ಳಿ."
"ಸಾಕು! ಇಲ್ಲಿ ಬಾ ಅಂದ್ರೆ...."8