ಈ ಪುಟವನ್ನು ಪ್ರಕಟಿಸಲಾಗಿದೆ

ವಾಚಕ ಮಹಾಶಯ

ನಿರಂಜನ: ಮೂವತ್ತು ಸಂಪುಟಗಳಲ್ಲಿ...... ಸರಣಿಯ ಮೂರನೆಯ ಸಂಪುಟ
ನಿಮ್ಮ ಮುಂದಿದೆ. ಇದರಲ್ಲಿ ನನ್ನ ಮೂರು ಕಾದಂಬರಿಗಳು ಅಡಕವಾಗಿವೆ_
'ರಂಗಮ್ಮನ ವಠಾರ,' 'ದೂರದ ನಕ್ಷತ್ರ' ಮತ್ತು 'ನವೋದಯ.'

ಇವುಗಳಲ್ಲಿ, ತನ್ನ ವಿಶಿಷ್ಟ ಕಥನ ವಿಧಾನದಿಂದಾಗಿ ಜನಪ್ರಿಯವಾದ ಕಾದಂಬರಿ,
'ರಂಗಮ್ಮನ ವಠಾರ.' ಹದಿನಾಲು 'ಮನೆ'ಗಳಾಗಿ ವಿಂಗಡಿಸಲ್ಪಟ್ಟು, ಹದಿನಾಲ್ಕು
ಸಂಸಾರಗಳಿಗೆ ಆಸರೆ ನೀಡಿರುವ ವಠಾರವೇ ಈ ಕೃತಿಯ ಕೇಂದ್ರಬಿಂದು. ಇಡೀ
ಕಾದಂಬರಿಗೆ ನಾಯಕ-ನಾಯಿಕೆ ಇಲ್ಲ, ಆದರೆ, ಜೋಡಿಗಳು ಸಾಕಷ್ಟಿವೆ. ಹದಿನಾಲ್ಕು
ವಸತಿಗಳೆಂದ ಮೇಲೆ ಹಿರಿ-ಕಿರಿಯರ ಒಟ್ಟು ಸಂಖ್ಯೆ ತೀರಾ ಚಿಕ್ಕದಾಗುವುದೂ
ಶಕ್ಯವಿಲ್ಲ!

ನಮ್ಮ ನಗರ ಪಟ್ಟಣಗಳಲ್ಲಿ ವಠಾರಗಳು-ಚಾಳ್ ಗಳು-ಇನ್ನೂ ಇವೆ. ಬಹು
ಮಹಡಿ ಕಟ್ಟಡಗಳ ಉದ್ಭವದೊಂದಿಗೆ, ವಠಾರ ಮನೆಗಳು ಅಪಾರ್ಟ್ ಮೆಂಟ್ ಗಳಾಗಿ
ರೂಪುಗೊಂಡಿರುವುದೂ ಉಂಟು. ಈ ಆಕಾಶವಾಸ ಬಡ ಮಧ್ಯಮ ವರ್ಗದವರ
ಪಾಲಿಗೆ ಕೇವಲ ಕನಸು. ಏನಿದ್ದರೂ ರಂಗಮ್ಮನ ಬಾಡಿಗೆದಾರರ ಕಥೆ ಸಾರ್ವ
ಕಾಲಿಕ. ಈಗಿನ ಪೀಳಿಗೆಯವರಿಗಂತೂ ಇದು ತಾಜಾ ಸರಕು.

****

ಅಧ್ಯಾಪಕ ಸಂಕುಲದ ಬಗೆಗೆ ನನ್ನ ಕುತೂಹಲ ವಿದ್ಯಾರ್ಥಿ ದೆಸೆಯಿಂದಲೇ
ಆರಂಭ. ಉಪಾಧ್ಯಾಯರ ಪ್ರತಿಭೆ, ಬೋಧನ ಸಾಮರ್ಥ್ಯ, ಮಾನವೀಯ ನಡ
ವಳಿಕೆ - ಇವಷ್ಟೇ ಆಗ ನನಗೆ ಮುಖ್ಯವಾಗಿದ್ದುವು. ಅವರ ಜಾತಿ ಗೀತಿ ನನಗೆ ಅಮುಖ್ಯ
ವಾಗಿತ್ತು. ಆದರೆ ಅವರ ಮನೆಗಳ ಬಳಿ ಸಾರಿದಾಗ, ಧಾರ್ಮಿಕ ಆಚಾರಗಳಲ್ಲಿ
ವ್ಯತ್ಯಾಸ ಕಾಣುತ್ತಿದ್ದೆ. ನನ್ನದಲ್ಲದ ಪ್ರಪಂಚದಲ್ಲಿ ತೋರಿ ಬರುತ್ತಿದ್ದ ವೈವಿಧ್ಯ
ನನ್ನನ್ನು ವಿಸ್ಮಯಕ್ಕೆ ಗುರಿ ಮಾಡುತ್ತಿತ್ತು.

ನೀಲೇಶ್ವರದಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿ, ಲೇಖನಿಯ ಬಲದಿಂದ ಬದುಕ
ಲೆಂದು ಮಂಗಳೂರು ತಲಪಿದೆ. 'ರಾಷ್ಟ್ರ ಬಂಧು'ವನ್ನು ಸೇರುವುದಕ್ಕೆ ತುಸು ಮುನ್ನ
ನಾನು ಕಂಡ ವ್ಯಕ್ತಿ ಕಯ್ಯಾರರು, ಅವರು ಆಗ 'ಸ್ವದೇಶಾಭಿಮಾನಿ' ಸಾಪ್ತಾಹಿಕದಲ್ಲಿ
ಉಪ ಸಂಪಾದಕರಾಗಿದ್ದರು. ನನಗೆ ಅವರೊಂದು ಸಲಹೆ ನೀಡಿದರು: "ನಿಮಗೆ
ಪತ್ರಿಕೋದ್ಯಮ ಬೇಡ. ನೀವು ಮಾಸ್ಟ್ರಾಗಿ." ಮಾಸ್ಟ್ರಾಗದೆ ಪತ್ರಿಕೋದ್ಯಮಿಯೇ
ಆದೆ. ಆದರೆ, ಅಗತ್ಯವಾಗಿದ್ದ ಚೂರು ಪಾರು ಹೆಚ್ಚಿನ ಸಂಪಾದನೆಗಾಗಿ, ಒಂದೆರಡು
ಕಡೆ ಟ್ಯೂಷನ್ ಇಟ್ಟುಕೊಂಡೆ. ಅಂತೂ ಒಂದು ಬಗೆಯ ಮಾಸ್ಟ್ರಾದೆ! ಸುಪ್ತಪ್ರಜ್ಞೆ
ಯಲ್ಲಿ ಈ ಮಾಸ್ತರಿಕೆ ನನಗೆ ಬಹಳ ಕಾಟ ಕೊಟ್ಟಿರಬೇಕು. ಆ ಕಾರಣದಿಂದಲೆ ಜಯ
ದೇವ ನನ್ನ 'ದೂರದ ನಕ್ಷತ್ರ' ಕಾದಂಬರಿಯಲ್ಲಿ ಮೂರ್ತರೂಪ ತಳೆದ.