ಈ ಪುಟವನ್ನು ಪ್ರಕಟಿಸಲಾಗಿದೆ

70

ಸೇತುವೆ

"ಇನ್ನೂ ಹತ್ತು ಮನೆ ಐತವ್ವ" ಅಂದಳು.
"ಹತ್ತರ ಜತೇಲಿ ಹನ್ನೊಂದು. ಹೆಂಗೋ ಸುಧಾರಿಸ್ಕೊಂಡರಾಯ್ತು, ಕೊಟ್ಬಿ
ಡವ್ವಾ," ಎಂದು ಪದ್ಮಾವತಿಯೂ ಶಿಫಾರಸು ಮಾಡಿದಳು.
ಹಾಲವ್ವ ಒಂದು ಪಾವು ಅಳೆದಳು.
"ಹೆಂಗೆ?" ಎಂದಳು ಚಂಪಾ, ದರ ವಿಚಾರಿಸುತ್ತ.
ಹಾಲವ್ವ ಬುಟ್ಟಿಯನ್ನು ತಲೆಯ ಮೇಲಿರಿಸಿ ಎದ್ದು ನಿಂತು ಅಂದಳು:
"ಇವರೆಲ್ಲಾ ಎಂಗ್ಕೊಡ್ತಾರೊ ಆಂಗೆ. ಅವರ್ಗೊಂದು ನಿಮ್ಗೊಂದಾ? ರೂಪಾ
ಯಿಗೆ ಎಲ್ಡು ಸೇರು. ನೀರಾಲೂಂತ ಜಗಳ ಮಾತ್ರ ಕಾಯ್ಬಾರ್ದು. ಈಗ್ಲೆ
ಯೋಳಿದೀನಿ."
ನಿರುತ್ತರಳಾಗಿದ್ದ ಪದ್ಮಾವತಿ ಹಾಲವ್ವನ ಮಾತನ್ನು ಅಲ್ಲಗಳೆಯಲಿಲ್ಲ. ಚಂಪಾ
ಒಳಗೆ ಹೋಗಿ ಹಾಲನ್ನು ಬಿಸಿಗಿಟ್ಟಲು.
"ಏಳೀಂದ್ರೆ ಕಾಫಿ ಆರ್ಹೋಗುತ್ತೆ," ಎಂದು ಗಂಡನನ್ನು ಎರಡು ಮೂರು ಸಾರೆ
ಕರೆದು, ಎಬ್ಬಿಸಿದಳು.
ಕಾಫಿ ಕುಡಿದು ಶಂಕರನಾರಾಯಣಯ್ಯ ಅಳುತ್ತಲೇ ಇದ್ದ ಮಗುವನ್ನು ಸಂತೈ
ಸಲು ಯತ್ನಿಸಿದ. ಒಂದು ಸಿಗರೇಟು ಹಚ್ಚಿಕೊಂಡು ಉಂಗುರ ಉಂಗುರವಾಗಿ ಹೊಗೆ
ಯುಗುಳುತ್ತಾ ಅದನ್ನು ಮಗುವಿಗೆ ತೋರಿಸುತ್ತಾ ಆಟವಾಡಿಸಿದ.
ಆದರೆ ಆ ಮಗಳು ಅಳು ನಿಲ್ಲಿಸಿದ್ದು, ತಾಯಿ ಎತ್ತಿಕೊಂಡಾಗಲೇ.
"ನಿನ್ನ ಮಗಳೇನೇ. ಯಾವ ಸಂಶಯವೂ ಇಲ್ಲ."
"ಹೇಳಿದ್ದನ್ನೇ ಎಷ್ಟು ಸಾರೆ ಹೇಳ್ತೀರಾ?"
__ಚಂಪಾ ಗಂಡನನ್ನು ಟೀಕಿಸಿದಳು.
"ಹೋಗಿ ಏನಾದರೂ ತರಕಾರಿ ತಗೊಂಡ್ಬನ್ನಿ," ಎಂದು ಗಂಡನಿಗೆ ಕೆಲಸ
ಕೊಟ್ಟಳು.
ಅಷ್ಟರಲ್ಲಿ ಊರುಗೋಲಿನ ಟಕ್ ಟಕ್ ಸದ್ದಾಯಿತು. ಗಂಟಲಿನಿಂದ ಹೊರ
ಡುತ್ತಿದ್ದ ನರಳುವ ಸ್ವರ ಕೇಳಿಸಿತು. ಶಂಕರನಾರಾಯಣಯ್ಯ ಹೆಂಡತಿಯ ಮುಖ
ನೋಡಿದ. ಹೆಂಡತಿ ಗಂಡನ ಮುಖ ನೋಡಿದಳು.
ಮರುಕ್ಷಣವೇ ರಂಗಮ್ಮ ಬಾಗಿಲಲ್ಲಿ ಪ್ರತ್ಯಕ್ಷವಾದರು:
"ಚೆನ್ನಾಗಿದೀರೇನಪ್ಪ? ಎಲ್ಲಾ ಅನುಕೂಲವಾಗಿದ್ಯೆ?"
ಶಂಕರನಾರಾಯಣಯ್ಯನಿಗೆ ಕೈಲಿದ್ದ ಸಿಗರೇಟನ್ನು ಏನು ಮಾಡಬೇಕೋ ತಿಳಿ
ಯಲಿಲ್ಲ. ತನಗೆ ವಯಸ್ಸು ಮೂವತ್ತೈದು ಆಗಿದ್ದರೂ ರಂಗಮ್ಮನಂತಹ ವಯಸ್ಕ
ರೆದುರಲ್ಲಿ ತಾನು ಹುಡುಗನೇ ಎಂದು ಆತನಿಗೆ ಭಾಸವಾಗುತ್ತಿತ್ತು. ಆದರೆ ಆತ
ಸಿಗರೇಟನ್ನು ಆರಿಸಲಿಲ್ಲ. ಸ್ವಲ್ಪ ಮರೆಮಾಡಿ, ಕುಳಿತಲ್ಲಿಂದಲೇ ಹೇಳಿದ:
"ಓಹೋ. ಎಲ್ಲಾ ಸರಿಯಾಗಿಯೇ ಇದೆ. ಒಳಗ್ಬನ್ನಿ ರಂಗಮ್ನೋರೆ."