ಈ ಪುಟವನ್ನು ಪ್ರಕಟಿಸಲಾಗಿದೆ

82

ಸೇತುವೆ

ಸೂಚಿಸುತ್ತ ಆಕೆ ನಕ್ಕಳು.
"ಹಾಗಾದರೆ ನನಗೆ ದೃಷ್ಟಿದೋಷ ಅನ್ನು!"
ಆ ನಗೆ ಮಾತು ಆಕೆಯ ಹೃದಯವನ್ನು ಬೆಳಗಿತು. ಕಣ್ಣುಗಳು ಮಿನುಗಿದುವು.
"ಒಲೆ ಹಚ್ಚಿ ಒಂದಿಷ್ಟು ಕಾಫಿ ಮಾಡ್ಲಾ?"
"ಹೂಂ. ಮಾಡು."
ಅವರು ಜಯರಾಮುವಿನ ಚಾಪೆ ಬಿಡಿಸಿ ಮಲಗಿಕೊಂಡು ಛಾವಣಿಯತ್ತ
ನೋಡಿದರು. ಹೆಂಡತಿ ಒಲೆ ಹಚ್ಚುತ್ತಿದ್ದಂತೆ ಅವರೆಂದರು:
"ಮಳೆ ಬಂದರೆ ಹೋದ ವರ್ಷದ ಹಾಗೆ ಈ ವರ್ಷವೂ ಸೋರುತ್ತೆ ಅಲ್ವೆ?
ನೋಡು ಆ ಮೂಲೆ ಹಂಚುಗಳೆಲ್ಲಾ ಒಡೆದು ಹೋಗಿವೆ."
"ದುರಸ್ತಿ ಮಾಡಿಸ್ಬೇಕೂಂತ ಹೇಳ್ತಾ ಇದ್ರು ರಂಗಮ್ಮ."
"ಗುಂಡಣ್ಣನ ಕೈಲಿ ತಾನೆ ಮಾಡ್ಸೋದು?"
ಆಕೆಗೆ ನಗು ಬಂತು. ಕಳೆದ ವರ್ಷ ಒಡೆದು ಹೋಗಿದ್ದ ಹಂಚುಗಳನ್ನು ಸರಿ
ಪಡಿಸಬೇಕೆಂದು ರಂಗಮ್ಮ ಒಂದೆರಡು ಬಾರಿ ಗುಂಡಣ್ಣನನ್ನು ಮೇಲಕ್ಕೆ ಕಳುಹಿಸಿ
ದ್ದಳು. ಗುಂಡಣ್ಣನೋ 'ನಾನೊಲ್ಲೆ' ಎಂದು ಯಾವತ್ತೂ ಹೇಳಿದವನಲ್ಲ. ವಠಾರದ
ಎಲ್ಲ ಹುಡುಗರೆದುರು, ರಂಗಮ್ಮನಿಂದ ನಿರ್ದೇಶಿತನಾಗಿ ಆತ ಛಾವಣಿಯನ್ನೇರಿದ.
ಒಡೆದ ಹಂಚುಗಳ ಬದಲು ಹೊಸ ಹಂಚುಗಳನ್ನಿರಿಸಿದ. ಆದರೆ ಆತ ಏರಿ ಇಳಿಯುವ
ಗದ್ದಲದಲ್ಲಿ ಬೇರೆ ಹಂಚುಗಳು ಬಿರುಕು ಬಿಟ್ಟುವು!
ಅವರು ಕೇಳಿದರು:
"ಗುಂಡಣ್ಣ ಇನ್ನೂ ಇಲ್ಲೇ ಇದಾನೇನು?"
"ಇಲ್ದೆ ಎಲ್ಹೋಗ್ತಾನೆ?"
"ಶುದ್ಧ ಬೆಪ್ಪು. ಮೆದುಳೇ ಇಲ್ಲ ಪ್ರಾಣಿಗೆ."
ತಮ್ಮ ಮಕ್ಕಳ ವಿಷಯದಲ್ಲಿ ಅವರಿಗೆ ತುಂಬಾ ಅಭಿಮಾನವಿತ್ತು. ಜಯರಾಮು
ಇಂಟರ್ ಪರೀಕ್ಷೆಯಲ್ಲಿ ಒಂದೇ ಸಲ ಉತ್ತೀರ್ಣನಾಗದೆ ತೊಂದರೆ ಕೊಟ್ಟದ್ದು ನಿಜ.
ಆದರೆ, ಅದು ಬೇರೆ ವಿಷಯ. ಪ್ರಾಪಂಚಿಕ ಜ್ಞಾನಕ್ಕೆ ಸಂಬಂಧಿಸಿ ತನ್ನ ಓರಗೆಯವ
ರನ್ನೆಲ್ಲ ಆತ ಸುಲಭವಾಗಿ ಮೀರಿಸುತ್ತಿದ್ದನೆಂಬುದು ತಂದೆಗೆ ಗೊತ್ತಿತ್ತು.
ಅವರು ಮಗನನ್ನು ಕುರಿತು ಯೋಚಿಸಿದರು. ಆತ ದೊಡ್ಡ ವಿದ್ವಾಂಸನಾಗ
ಬೇಕೆಂಬುದು ಅವರ ಆಸೆಯಾಗಿತ್ತು. ಮುಂದೆ ವಿಶ್ವವಿದ್ಯಾನಿಲಯದಲ್ಲಿ ಆತ ಹಿರಿಯ
ಪ್ರಾಧ್ಯಾಪಕನಾಗಿ ತಮಗೆ ಗೌರವ ತರಬೇಕೆಂಬ ಬಯಕೆ ಅವರಿಗಿತ್ತು. ಆದರೆ ಈಗ
ಆ ಕನಸು ಕಾರ್ಯವಾಗುವ ಸುಳಿವೂ ಇರಲಿಲ್ಲ.
ಮಗನ ವಿಷಯ ಹೆಂಡತಿಯೊಡನೆ ಮಾತನಾಡಲು ಅವರು ಇಚ್ಛಿಸಿದರು.
"ಹ್ಯಾಗಿದಾನೆ ಜಯರಾಮು?"
"ಇತ್ತೀಚೆಗೆ ಯಾಕೋ ಒಂದು ಥರವಾಗಿದಾನೆ. ಮುಖದ ಮೇಲೆ ಕಳೇನೇ ಇಲ್ಲ."