ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

೮೮

ಅನಸೂಯೆಯು ಸೀತೆಗೆ ಕೊಡಬಯಸಿದ ವರವು ತಪಸ್ಸಿದ್ಧಿಯ ಫಲವಾಗಿತ್ತು; ಅದು ಪಾತಿವ್ರತ್ಯದ ಫಲವಾಗಿರಲಿಲ್ಲ; ಹೀಗಿರದಿದ್ದರೆ ತಪಸ್ಸಿನ ಸ್ವತಂತ್ರ ಉಲ್ಲೇಖದ ಆವಶ್ಯಕತೆ ಇರಲಿಲ್ಲ. ಸೀತೆಯು ಈ ವರವನ್ನು ಬೇಡಿ ಕೊಳ್ಳಲಿಲ್ಲ. ಈ ಮೇಲಿನ ಉದಾಹರಣೆಗಳಿಂದ ಕೇವಲ ಪಾತಿವ್ರತ್ಯದ ಬಲದಿಂದ ಯಾವ ಪತಿವ್ರತೆಯೂ ಶಾಪ-ವರಗಳನ್ನು ಕೊಡುವ ಅರ್ಹತೆಯನ್ನು ಪಡೆದಿಲ್ಲ. ಕೆಲವು ಶಾಪ-ವರಗಳನ್ನು ಕೊಟ್ಟ ಸ್ತ್ರೀಯರು, ಜನ್ಮದಿಂದಲೇ ಶ್ರೇಷ್ಠರಾಗಿರುವರು ಅಥವಾ ಪಾತಿವ್ರತ್ಯದ ಜೊತೆಗೆ ಇನ್ನೂ ಬೇರೆ ತಪಸ್ಸಿನ ಶಕ್ತಿಯನ್ನು ಹೊಂದಿದವರೂ ಆಗಿದ್ದಾರೆ.

ಬೇರೆ ಪತಿವ್ರತೆಯರು

ಪಂಚಪತಿವ್ರತೆಯರಲ್ಲಿ ಅಹಲ್ಯೆ, ಮಂಡೋದರಿ ಮತ್ತು ಸೀತೆ ಈ ಮೂವರು ರಾಮಾಯಣದಲ್ಲಿದ್ದಾರೆ. ಅವರ ಪಾತಿವ್ರತ್ಯದ ಸಾಮಥರ್ಯ್‌ವನ್ನು ಆಲೋಚಿಸುವಾಗ ಅಹಲ್ಯೆಯ ವಿಚಾರವನ್ನು ಬದಿಗಿಡಬೇಕಾಗುತ್ತದೆ. ಅಹಲ್ಯೆಯ ಕಥೆಯು ವಾಲ್ಮೀಕಿ-ರಾಮಾಯಣದಲ್ಲಿ ಎರಡಾವರ್ತಿ ಬಂದಿದೆ; ಈ ಎರಡೂ ವೃತ್ತಾಂತಗಳಲ್ಲಿ ವ್ಯತ್ಯಾಸವಿದೆ. ಉತ್ತರಕಾಂಡದ ವೃತ್ತಾಂತವು ಪ್ರಕ್ಷಿಪ್ತವಾಗಿದೆ ಎಂದು ಕೆಲವರ ಮತ; ಬಾಲಕಾಂಡವು ವಾಲ್ಮೀಕಿಯಿಂದ ರಚಿಸಲ್ಪಟ್ಟಿದೆ; ಕಾರಣ ಈ ಉತ್ತರಕಾಂಡದಲ್ಲಿಯ ಕಥೆಯು ಅಧಿಕೃತವಲ್ಲವೆಂದು ಭಾವಿಸಬೆಕು. ಇದರಲ್ಲಿಯ ಕಥೆಯಂತೆ ಇಂದ್ರನು ಅಹಲ್ಯೆಯನ್ನು ಬಲಾತ್ಕರಿಸಲಿಲ್ಲ. ಗೌತಮನ ವೇಷದಲ್ಲಿ ಆಶ್ರಮಕ್ಕೆ ಬಂದವನು ಗೌತಮನಿರದೇ ಇಂದ್ರನೆಂದು ಅಹಲ್ಯೆಗೆ ಗೊತ್ತಿತ್ತು; ಅಷ್ಟೇ ಅಲ್ಲದೆ ಆತನ ಬಗ್ಗೆ ಅಹಲ್ಯೆಗೆ ಒಂದು ಬಗೆಯ ಅಭಿಮಾನ, ಉತ್ಸುಕತೆ ಇದ್ದವು. `ಸ್ವೇಚ್ಛೆಯಿಂದ ಇಂದ್ರ ನೊಡನೆ ಸಮಾಗಮಕ್ಕೆ ಉದ್ಯಕ್ತಳಾದಳು' ಎಂಬ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಸಮಾಗಮದ ನಂತರ ಅವಳು ಇಂದ್ರನಿಗೆ ``ಕೃತಾರ್ಥಸ್ಮಿ ಸುರಶ್ರೇಷ್ಠ ``ಸುರಶ್ರೇಷ್ಠನೇ ನಾನು ಕೃತಾರ್ಥಳಾದೆ ಎಂದಿದ್ದಾಳೆ. ಆಗ ಇಂದ್ರನು ``ಸುಶ್ರೋಣಿ ಪರಿತುಷ್ಟೋsಸ್ಮಿ ``ಸುಂದರಿಯೇ ನಾನು ಸಂತುಷ್ಟನಾಗಿದ್ದೇನೆ ಎಂದು ಒಪ್ಪಿದ್ದಾನೆ. ಅಹಲ್ಯೆ ಸಮಾಗಮಕ್ಕೆ ಸಮ್ಮತಿಸಿದ ಕಾರಣ ಅವಳ ವರ್ತನೆಯು ವ್ಯಭಿಚಾರಾತ್ಮಕವೆನಿಸತ್ತದೆ. ಅವಳ ಅಪರಾಧವು ಘೋರವಾದದ್ದು; ಕ್ಷಮೆಗೆ ಯೋಗ್ಯವೆನಿಸದು; ಹೀಗಿದ್ದರೂ ಗೌತಮನು ಶಾಪದ ಜೊತೆಗೆ ಅಯಾಚಿತ ಉಃಶಾಪವನ್ನು ಕೊಟ್ಟಿದ್ದು ಸೋಜಿಗದ ಸಂಗತಿಯಾಗಿದೆ.೬೩ ಮಂಡೋದರಿಯು ಓರ್ವ ತುಂಬಾ ದುರ್ದೈವಿಯಾದ

೬೩.ಶಾಪ ಕ್ರ,೧೨-೧೩.