ಈ ಪುಟವನ್ನು ಪ್ರಕಟಿಸಲಾಗಿದೆ

ಬರೆದವರು ಮತ್ತು ಕೃತಿ

ಟಕ್ ಟಕ್ ಎಂದಿತು ಬಾಗಿಲು.

ಪಕ್ಕದ ಮನೆಯದಿರಬಹುದೆಂದು ನಾನು ಸುಮ್ಮನಾದೆ.

....ಆದರೆ ನನ್ನ ಊಹೆ ತಪ್ಪಾಗಿತ್ತು. ಬಂದಿದ್ದವರು ಮತ್ತೆ

ಸಪ್ಪಳ ಮಾಡಿದರು. ಧಾಳಿಯನ್ನು ಇದಿರಿಸಲು ಸಿದ್ಧನಾಗಿ ನಾನು ಹೊರಬಂದೆ.

ಶುಭ್ರವಾದ ಕಣ್ಣುಗಳಿದ್ದ, ನೀಳವಾದ ಕ್ರಾಪಿನ, ಅಂದವಾದ ಉಡುಗೆ ತೊಟ್ಟಿದ್ದ, ಒಬ್ಬ ಯುವಕ. ಆತ ಕೇಳಿದರು:

"ನಿರಂಜನರ ಮನೆ ಇದೇನಾ?"

"ಸರಿಯಾದ ಜಾಗಕ್ಕೇ ಬಂದಿದೀರಿ. ನಾನೇ. ಬನ್ನಿ."

"ಓ! ....ಕುಳುಕುಂದ ಶಿವರಾಯರು?"

"ಆ ಹೆಸರಿನ ಆರೋಪಿಯೂ ನಾನೇ. ಒಳಕ್ಕೆ ಬನ್ನಿ."

ಅವರು ಸಂಕೋಚಪಡುತ್ತಾ ಕುರ್ಚಿಯ ಮೇಲೆ ಕುಳಿತು

ಕೊಂಡರು. ಕರವಸ್ತ್ರ ಹೊರಬಂದು ಅವರ ಮುಖವನ್ನು ಒರೆಸಿತು.

"ನಾನು ಬಂದು ನಿಮಗೆ ತೊಂದರೆಯಾಯ್ತೇನೋ?"

"ಏನೂ ಇಲ್ಲ. ಏನೇನೂ ಇಲ್ಲ. ಈ ದಿವಸ ಯಾರಾದರೂ

ಬಂದೇ ಬರ್ತಾರೆ ಅಂತ ನನಗೆ ನಂಬಿಕೆ ಇತ್ತು."

"ಆದರೆ ನಾನು ಅಪರಿಚಿತ."

"ಅದಕ್ಕೇನಂತೆ? ಇವತ್ತಿನಿಂದಲೇ ಪರಿಚಿತರಾದ ಹಾಗಾಯ್ತು."

ಅವರು ಮುಗುಳ್ನಕ್ಕರು.

"ನೀವೂ ನನ್ನ ಹಾಗೆ ಬರೆಹಗಾರರೇನೋ?" ಎಂದು ನಾನೇ

ಮಾತಿನ ಪ್ರಕರಣವನ್ನು ಆರಂಭಿಸಿದೆ.