ಈ ಪುಟವನ್ನು ಪ್ರಕಟಿಸಲಾಗಿದೆ

" ಹಾಗಂದ್ರೆ ?"

" ನೀನು ಬದಲಾಗಿದ್ದೀಯಾ ಅನ್ನೋದು ನಿನಗೆ ಗೊತ್ತೆ?"

" ಆಗಿರಬಹದು. ಅಳುಬುರಕ ಕೂಲಿಯಾಗಿದ್ದವನು ಚುರು ಕಾದ ಜೇಬುಗಳ್ಳನಾಗಿಲ್ವ? ಬದಲಾಗಿರಬಹುದು."

" ಅದಲ್ಲ, ನಿನ್ನ ಚುರುಕುತನ ಮಾಯವಾಗಿ ಅಳುಬುರಕತನ ಬರ್ತಾ ಇದೆ,ಗೊತ್ತಾ ?" ನಾನು ಮೌನವಾಗಿ ಅಮೀರನ ಮುಖವನ್ನೇ ನೋಡಿದೆ. ಇತ್ತೀಚೆಗೆ ಕೆಲವು ದಿನಗಳಿಂದ ನಾನು ಉತ್ಸಾಹಿಯಾಗಿರಲಿಲ್ಲ. ಕಾರ್ಯ ಕ್ರಮಗಳಲ್ಲಿ ಗೆಲುವಿನಿಂದ ಭಾಗವಹಿಸುತ್ತಿರಲಿಲ್ಲ. ಇದರಿಂದ ಅಮೀರ ನಿಗೆ ತೊಂದರೆಯಾಗುತ್ತಿತ್ತು. ಬೇಟೆಯನ್ನು ಹುಡುಕಿಕೊಂಡು ಅವನೊಬ್ಬನೇ ಹೋಗಬೇಕಾಗುತ್ತಿತ್ತು.

ಅಮೀರ್ ಮಾತು ಮುಂದುವರಿಸಿದ:

"ಶೇಖರ್, ಎಷ್ಟೋ ಸಾರಿ ಅಣ್ಣ ಅಂತ ನನ್ನ ಕರೆದಿದ್ದೀಯಾ. ಆ ದೃಷ್ಟಿಯಿಂದಲೇ ಅಧಿಕಾರದಿಂದ ಒಂದೆರಡು ಮಾತು ಹೇಳ್ತೀನಿ, ಕೇಳು. ನೀನು ಮಗುವಲ್ಲ. ನಿನಗೆ ವಯಸ್ಸು ಹದಿನೆಂಟೊ ಹತ್ತೊಂಭತ್ತೊ ಆಗಿದೆ. ಎಳೆ ಹುಡುಗಿಯರ ಹಾಗೆ ಮನೆ ಯೋಚನೆ ಮಾಡೋದನ್ನು ಬಿಟ್ಬುಟ್ಟು ಮೀಸೆ ಹೊತ್ತ ಗಂಡಸಾಗಿ ನೀನು ಬೆಳೀ ಬೇಕು. ನೀನು ಸಿಗರೇಟು ಬೀಡಿ ಮುಟ್ಟದೇ ಇರೋದರ ಅರ್ಥ ವೇನು? ಕುಡಿಯೋಕೆ ಬಾ ಎಂದರೂ ಹಿಂದೇಟು ಹೊಡೆಯೋದರ ಅರ್ಥವೇನು? ನಿನ್ನ ಸಂಸಾರದ ವಿಚಾರ. ನನ್ನ ರಕ್ತ ಸಂಬಂಧಿಗಳೇ ನಾಲ್ಕಾರು ಜನ ಇದ್ದಾರೆ. ಪ್ರೀತಿಯ ಅಮ್ಮಾ ಜಾನ್ ಇದ್ದಾಳೆ. ನನಗೂ ಅವರ ನೆನಪಾಗ್ತದೆ. ಆದರೆ ನಾನು ಹೃದಯಾನ ಗಟ್ಟಿ ಮಾಡ್ಕೊಂಡಿಲ್ವಾ? ಇನ್ನು ಶೀಲಳ ವಿಷಯ. ನನಗೆ ಜೀವನ ಅನ್ನೋದು ಏನೂ ಅಂತ ಗೊತ್ತಿದೆ. ನಿನ್ನ ವಯಸ್ಸಿನಲ್ಲಿ ನಾನು ಯಾರೊ ಹುಡುಗಿ ಜತೇಲಿ ಮಲಗಿದ್ದುಂಟು. ಆದರೆ ನಾನು ವ್ಯಕ್ತಿತ್ವ ಇಲ್ಲದ ಪ್ರಾಣಿಯಾಗೋಕೆ ಇಷ್ಟ ಪಡೋದಿಲ್ಲ. ಒಳ್ಳೆಯ ಮನುಷ್ಯ ನಾಗಿರಬೇಕೂಂತಲೇ ಈಗ ಶೀಲಳನ್ನ ಹೆಂಡತಿ ಅಂತ ಸಾಕ್ತೀನಿ.