ಈ ಪುಟವನ್ನು ಪ್ರಕಟಿಸಲಾಗಿದೆ

ಜನ ಸಂದಣಿಯೂ ಅಷ್ಟಾಗಿ ಇರಲಿಲ್ಲ. ಆದರೂ ಬರಲಿದ್ದ ಕೊನೆಯ ಬಸ್ಸಿಗಾಗಿ, ಆರೇಳು ಜನ ಕಾದಿದ್ದರು.ನಾನು ಅವರ ಬಳಿ ಹೋಗಿ ನಿಂತೆ. ನನ್ನ ಕಣ್ಣುಗಳು ಅಲ್ಲಿದ್ದ ಅವರನ್ನು ಪರೀಕ್ಷಿ ಸುತ್ತಲಿದ್ದುವು.

ಅಷ್ಟರಲ್ಲೆ ಮೋಟಾರು ಬಂತು. ಆ ಜನರೆಲ್ಲಾ ಒಮ್ಮೆಲೆ ನುಗ್ಗಿದರು. ಸಿಗರೇಟನ್ನೆಸೆದು ಅವರ ನಡುವೆ ನಾನೂ ನುಗ್ಗಿದೆ. ಅವರೆಲ್ಲಾ ಒಳ ಹೊಕ್ಕರು. ನಾನೊಬ್ಬನೇ ಹಿಂದೆ ಉಳಿದೆ........ ಗಾಡಿ ಚಲಿಸಿತು. ಇನ್ನೊಂದು ಸಿಗರೇಟು ಹೊರ ತೆಗೆದು ಹಚ್ಚುತಾ, ಮೋಟಾರು ಹೋದ ಹಾದಿಯನ್ನೆ ನೋಡಿದೆ........ಆ ಮೋಟಾರು ಒಮ್ಮೆಲೆ ನಿಂತಿತು. ಯಾರೋ ಕೂಗಾಡುತ್ತಿದ್ದರು. ಆ ನಿಲ್ದಾಣದಲ್ಲಿ ಮತ್ತೆ ನಿಲ್ಲದೆ, ಮೆಲ್ಲನೆ ಗಂಭೀರವಾಗಿ ಅಲ್ಲಿಂದ ನಡೆದು ಹೋದೆ.

ಅದು ದೊಡ್ಡ ಸಂಪಾದನೆಯಾಗಿರಲಿಲ್ಲ. ಆ ಬೇಟೆಯ ಪಾಕೀಟಿನಲ್ಲಿ ಐದು ರೂಪಾಯಿಯ ಒಂದು ನೋಟು, ಒಂದು ರೂಪಾಯಿ ನಾಣ್ಯ, ಮತ್ತು ಚಿಲ್ಲರೆ ಏಳು ಆಣೆಗಳಿದ್ದುವು. ಆಸ್ಪತ್ರೆಯ ಚೀಟಿಯೊಂದಿತ್ತು. ಆ ಚೀಟಿಯಲ್ಲಿ, ಹೆಸರು ಬರೆದಿದ್ದರು ಕಾವೇರಮ್ಮ, ವಯಸ್ಸು ಐವತ್ತಾರು....ಆ ವೃದ್ಧನ ಪತ್ನಿಯಾಗಿರಬಹುದು. ಪಾಕೀಟಿನೊಳಗೆ ವಿಳಾಸ ಮುದ್ರಿಸಿದ ಗುರುತು ಚೀಟಿಯಿರಲಿಲ್ಲ. ಆ ಪಾಕೀಟೇ ಹಳೆಯ ದಾಗಿ ಹರಿದಿತ್ತು. ನಾನು ದೊಡ್ಡ ಮನುಷ್ಯರನ್ನು ಬಲಿ ತೆಗೆದು ಕೊಂಡಿರಲಿಲ್ಲ. ಮಧ್ಯಮ ವರ್ಗದ್ದೊಂದು, ಕಾಹಿಲೆ ಕಸಾಲೆಗಳಿದ್ದ ತಾಪತ್ರಯಗಳಿದ್ದ ಬಡಪ್ರಾಣಿಯನ್ನು ಬಲೆಗೆ ಕೆಡವಿದ್ದೆ. ನನಗೆ ಹಣದ ತೀವ್ರ ಅವಶ್ಯತೆಯಿತ್ತು. ಅದಕ್ಕಾಗಿ ಇನ್ನೊಂದು ಜೀವದ ಸುಖದುಃಖ ನೋಡದೆ ನನ್ನ ಕೆಲಸ ನಡೆಸಿದೆ. ಆದರೂ ಆ ಔಷಧಿ ಚೀಟಿಯನ್ನು ನೋಡಿದಾಗ, ಆ ಹೆಸರನ್ನೋಡಿದಾಗ, ತಾಯಿಯ ನೆನಪಾಯಿತು. ಕಾಹಿಲೆ ನರಳುತ್ತಿದ್ದ ತಂಡೆಯ ನೆನಪಾಯಿತು. ವಾಂತಿ ಭೇದಿಯಿಂದ ನರಳಿ ಸತ್ತ ಅಜ್ಜಿಯ ನೆನಪಾಯಿತು. ಯಾರಿಗೋ ಅನ್ಯಾಯ ಮಾಡಿದ ಹಾಗೆ ನನಗೆ ತೋರುತ್ತಿತ್ತು. ಸಾಧ್ಯವಿದ್ದಿದ್ದರೆ ಅಷ್ಟನ್ನೂ ವಾಪಸ್ಸು ಒಯ್ದು ಮುಟ್ಟಿಸಿ ನಮಸ್ಕರಿಸಿ ಕ್ಷಮೆಯಾಚಿಸಿ ಹಿಂತಿರುಗುತ್ತಿದ್ದೆನೇನೋ.